ಕರ್ನಾಟಕ

“ಸಿಎಂ ಕ್ಷೇತ್ರದಲ್ಲಿ ದಲಿತ ಯುವಕ ವಿನಾಕಾರಣ ಜೈಲಿಗೆ’

Pinterest LinkedIn Tumblr

5BNP20ವಿಧಾನಸಭೆ: ಮುಖ್ಯಮಂತ್ರಿಗಳ ಸ್ವಕ್ಷೇತ್ರ ವರುಣಾದಲ್ಲಿ ರಾಜಕೀಯವಾಗಿ ಸವಾಲಾಗಿದ್ದ ದಲಿತ ಯುವಕನ ಮೇಲೆ ಸರ್ಕಾರದ ಆಡಳಿತ ಯಂತ್ರ ದುರುಪಯೋಗ ಮಾಡಿಕೊಂಡು ಮೊಕದ್ದಮೆ ಹೂಡಿ ಜೈಲಿಗೆ ಕಳುಹಿಸಿ ಚಿತ್ರಹಿಂಸೆ ನೀಡಿದ ಘಟನೆ ನಡೆದಿದೆ. ಇದು ಅಹಿಂದ ಸರ್ಕಾರದ ವರ್ತನೆಯೇ ಎಂದು ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದ್ದಾರೆ.

ಶನಿವಾರ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗೃಹ ಇಲಾಖೆ ಯಾವ ರೀತಿ ದುರ್ಬಳಕೆಯಾಗುತ್ತಿದೆ ಎಂಬುದಕ್ಕೆ ಮುಖ್ಯಮಂತ್ರಿಗಳ ಸ್ವಕ್ಷೇತ್ರದ ನೂತನ್‌ ಎಂಬ ಯುವಕನ ಉದಾಹರಣೆ ಸಾಕ್ಷಿ. ಏನೂ ತಪ್ಪು ಮಾಡದಿದ್ದರೂ ಆತನನ್ನು ಎರಡು ದಿನ ಜೈಲಿನಲ್ಲಿ ಕೊಳೆಸಲಾಗಿದೆ ಎಂದು ದೂರಿದರು.

ರಾಜಕೀಯವಾಗಿ ಪ್ರತಿಸ್ಪರ್ಧಿ ಎಂಬ ಕಾರಣಕ್ಕೆ ನೂತನ್‌ ಎಂಬ ಎಂಜಿನಿಯರಿಂಗ್‌ ವ್ಯಾಸಂಗ ಮಾಡುತ್ತಿದ್ದ ಯುವಕನ ಮನೆ ಬಳಿ ಪೊಲೀಸರು ಹೋಗಿ ಬಂಧನಕ್ಕೆ ಮುಂದಾಗಿದ್ದರು. ಆದರೆ, ಆತ ಏನಾದರೂ ಪ್ರಕರಣ ಹಾಕಿರಬಹುದು ಎಂದು ಸೆಷನ್ಸ್‌ ನ್ಯಾಯಾಲಯ ಹಾಗೂ ಹೈಕೋರ್ಟ್‌ಗೆ ಹೋಗಿ ನಿರೀಕ್ಷಣಾ ಜಾಮೀನು ಪಡೆದರೆ ನಿನ್ನ ಮೇಲೆ ಪ್ರಕರಣವೇ ಇಲ್ಲ ಎಂದು ವಾಪಸ್‌ ಕಳುಹಿಸಿದರು. ಆದರೂ ಆತ ನಿರೀಕ್ಷಣಾ ಜಾಮೀನು ಪಡೆದಿದ್ದ. ಇದಾದ ನಂತರ ಎಸ್‌ಪಿ ಸಾಹೇಬರು ಕರೆಯುತ್ತಿದ್ದಾರೆ ಬನ್ನಿ ಎಂದು ಕರೆದೊಯ್ದು ಬೇರೊಂದು ಪ್ರಕರಣ ಹಾಕಿ ಎರಡು ದಿನ ಜೈಲಿಗೆ ಕಳುಹಿಸಲಾಯಿತು ಎಂದು ವಿವರಿಸಿದರು.

ಬಂಧನ ಮಾಡಬಹುದು ಎಂದು ಆತ ನಿರೀಕ್ಷಣಾ ಜಾಮೀನಿಗೆ ಅಲೆಯುತ್ತಿದ್ದಾಗ, ದೆಹಲಿಯಲ್ಲಿ ಐಎಎಸ್‌ ತರಬೇತಿಯಲ್ಲಿದ್ದ ಆತನ ಸಹೋದರನಿಗೆ ಅಲ್ಲಿನ ಪೊಲೀಸರ ಮೂಲಕ ಬೆದರಿಕೆ ಹಾಕಲಾಗಿತ್ತು. ನಿನ್ನ ಸಹೋದರ ಅಲ್ಲಿ ಶರಣಾಗದಿದ್ದರೆ ನಿನ್ನನ್ನು ಬಂಧಿಸಲಾಗುವುದು ಎಂದು ಹೇಳಿ ಹೆದರಿಸಲಾಗಿತ್ತು. ಕೊನೆಗೆ ಆ ಯುವಕ ಜೈಲಿನಿಂದ ಬಂದು ಸವಾಲಾಗಿ ಸ್ವೀಕರಿಸಿ ತನ್ನ ತಾಯಿಯನ್ನು ಜಿಲ್ಲಾ ಪಂಚಾಯತ್‌ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿಕೊಂಡಿದ್ದಾನೆ. ಇದರಿಂದ ಏನು ಸಾಧನೆ ಮಾಡಿದಂತಾಯ್ತು ಎಂದು ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳತ್ತ ನೋಡಿ ಪ್ರಶ್ನಿಸಿದರು.

ಇಲವಾಲದಲ್ಲಿ ಉದ್ಯಮಿಯೊಬ್ಬರ 2.28 ಕೋಟಿ ರೂ. ಹಣ ವಶಕ್ಕೆ ಪಡೆದು 20 ಲಕ್ಷ ರೂ. ಲೆಕ್ಕ ತೋರಿಸಿ ಉಳಿದ ಹಣ ಪೊಲೀಸರೇ ಗುಳುಂ ಮಾಡಿದರು. ಕೊನೆಗೆ ಸಿಐಡಿ ತನಿಖೆಗೆ ಕೊಟ್ಟ ನಂತರ ಪೊಲೀಸ್‌ ಅಧಿಕಾರಿಗಳೇ 60 ಲಕ್ಷಕ್ಕೆ ಸೆಟ್ಲ ಮಾಡಿಕೊಳ್ಳಿ ಎಂದು ರಾಜಿ ಪಂಚಾಯಿತಿ ಮಾಡಿದರು. ಹಗರಣದಲ್ಲಿ ಐಜಿಪಿ ಕೈವಾಡವಿದ್ದರೂ ಕ್ರಮ ಕೈಗೊಂಡಿಲ್ಲ. ಹಿಂದಿನ ಲೋಕಾಯುಕ್ತರಿಗೆ ಕೋಟ್ಯಂತರ ರೂ. ಕಪ್ಪ ಕೊಟ್ಟು ಬಂದ ಅಧಿಕಾರಿಗಳು ಸರ್ಕಾರದ ಆಯಕಟ್ಟಿನ ಸ್ಥಳಗಳಲ್ಲಿ ಕೆಲಸದಲ್ಲಿದ್ದಾರೆ. ಹೀಗಾದರೆ ಭ್ರಷ್ಟಾಚಾರ ರಹಿತ ಸರ್ಕಾರ ಎಂದು ಹೇಗೆ ಹೇಳಿಕೊಳ್ಳುತ್ತೀರಿ ಎಂದರು.

ರಮೇಶ್‌ಕುಮಾರ್‌ ಪ್ರಶ್ನೆಗಳಿಗೆ ಉತ್ತರ ಕೊಡಿ ಸಾಕು: ನಿಮ್ಮದೇ ಪಕ್ಷದ ಹಿರಿಯ ಶಾಸಕ ರಮೇಶ್‌ಕುಮಾರ್‌ ಎತ್ತಿರುವ ಪ್ರಶ್ನೆಗಳಿಗೆ ಉತ್ತರ ಕೊಟ್ಟುಬಿಡಿ ಸಾಕು. ರಾಜ್ಯದ ಕಾನೂನು ಸುವ್ಯವಸ್ಥೆ, ನಿಮ್ಮ ಆಡಳಿತ ವ್ಯವಸ್ಥೆ ಹೇಗಿದೆ ಅಂತ ಅವರೇ ರಾಜ್ಯಪಾಲರ ಭಾಷಣದ ಮೇಲೆ ತಿಳಿಸಿದ್ದಾರೆ. ನಾವು ಏನೂ ಹೇಳುವ ಅಗತ್ಯವೇ ಇಲ್ಲ. ಅವರೇ ಹೇಳಿದಂತೆ ಇನ್ನು ಎರಡು ವರ್ಷವಾದರೂ ಸರಿದಾರಿಯ ಆಡಳಿತ ಕೊಡಿ ಎಂದು ಇದೇ ವೇಳೆ ಕುಮಾರಸ್ವಾಮಿ ಸಲಹೆ ನೀಡಿದರು.

ಬರ, ಜಲಾಶಯಗಳಲ್ಲಿ ನೀರಿನ ಕೊರತೆ, ವಿದ್ಯುತ್‌ ಕೊರತೆಯಿಂದ ಮುಂದಿನ 2 ತಿಂಗಳಲ್ಲಿ ದೊಡ್ಡ ಮಟ್ಟದ ಸವಾಲು ಎದುರಾಗಬಹುದು. ಯಾವುದೇ ಸರ್ಕಾರಕ್ಕೂ ನಿರ್ವಹಣೆ ಕಷ್ಟ. ಆದರೆ, ನಿರ್ಲಕ್ಷ್ಯ ಮಾಡಬೇಡಿ. ಹಣ ಬಿಡುಗಡೆ ಮಾಡಿದ ಮಾತ್ರಕ್ಕೆ ನೀರು ಸಿಗದು. ಹೊರ ರಾಜ್ಯಗಳ ಜತೆ ಸೌಹರ್ದಯುತವಾಗಿ ಮಾತುಕತೆ ನಡೆಸಿ ಅಲ್ಲಿನ ಜಲಾಶಯಗಳಲ್ಲಿ ನೀರು ಇದ್ದರೆ ಪಡೆದುಕೊಳ್ಳುವ ಬಗ್ಗೆ ಯೋಚಿಸಿ ಎಂದು ಹೇಳಿದರು.

ಶಾಸಕ, ವಿಧಾನಪರಿಷತ್‌ ಸದಸ್ಯ ಅಲ್ಲದವನು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಕಚೇರಿಗೆ ಬಂದು ಪತ್ರಿಕಾಗೋಷ್ಠಿ ನಡೆಸಿದ. ನನ್ನ ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡಿದ. ಇದಕ್ಕೆ ಅವಕಾಶ ಇದೆಯಾ? ಇಂತಹ ಕೀಳುಮಟ್ಟದ ವರ್ತನೆ ಬೇಕಾ? ನಾನು ಆ ಮಟ್ಟಕ್ಕೆ ನಾನು ಇಳಿಯುವುದಿಲ್ಲ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ವಾಚ್‌ ಬಗ್ಗೆ ನಾನು ನಿಮ್ಮನ್ನು (ಸಿಎಂ) ಕೇಳಿದೆ. ಆದರೆ, ನೀವು ನನ್ನ ವೈಯಕ್ತಿಕ ಬದುಕು, ಮಗನನ್ನು ಎಳೆದು ತಂದಿರಿ. ನನ್ನ ಮಗ ಜನಪ್ರತಿನಿಧಿಯಲ್ಲ. ಆತ ನಿಮಗೆ ಲೆಕ್ಕ ಕೊಡಬೇಕಿಲ್ಲ. ನನ್ನ ವೈಯಕ್ತಿಕ ಬದುಕಿನ ಬಗ್ಗೆ ಕೇಳಲು ನನ್ನ ಧರ್ಮಪತ್ನಿ ಇದ್ದಾಳೆ. ನಿಜ, ನಾನು ತಪ್ಪು ಮಾಡಿದ್ದೇನೆ, ಅದನ್ನು ಹೇಳಿಕೊಂಡಿದ್ದೇನೆ. ನನ್ನ ಜೀವನವೂ ತೆರೆದ ಪುಸ್ತಕ ಇದ್ದಂತೆ.
– ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ನಾಯಕ
-ಉದಯವಾಣಿ

Write A Comment