ರಾಷ್ಟ್ರೀಯ

ನಾನು ಯಾವುದಕ್ಕೆ ಹೆದರುತ್ತೇನೋ ಅದರ ವಿರುದ್ಧವೇ ಹೋರಾಡುತ್ತೇನೆ

Pinterest LinkedIn Tumblr

horadutteneದೇಶದ್ರೋಹದ ಆರೋಪದಲ್ಲಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಬಂದಿರುವ ವಿದ್ಯಾರ್ಥಿಯೀಗ ತನ್ನ ಭಾಷಣಗಳಿಂದ ದೇಶಾದ್ಯಂತ ಪ್ರಸಿದ್ಧಿಯಾಗಿದ್ದಾನೆ. ಆತ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರುತ್ತಿರುವುದೇಕೆ? ಜೈಲಿನಲ್ಲಿ ಕನ್ಹಯ್ನಾ ಕಳೆದ ದಿನಗಳು ಹೇಗಿದ್ದವು? ಇಷ್ಟಕ್ಕೂ ಜೆಎನ್‌ಯು ವಿವಾದ ಹುಟ್ಟಿಕೊಂಡಿದ್ದೇಕೆ. ಎನ್‌ಡಿಟೀವಿ ಸಂದರ್ಶನದಲ್ಲಿ ಇವುಗಳಿಗೆ ಉತ್ತರವಿದೆ. ಆಯ್ದ ಭಾಗ ಇಲ್ಲಿದೆ.

ಮೊನ್ನೆ ಜೈಲಿನಿಂದ ಬಿಡುಗಡೆಯಾದ ಮೇಲೆ ನೀವು ಜೆಎನ್‌ಯುದಲ್ಲಿ ಮಾಡಿದ ಭಾಷಣ ಕೇಳಿ ಈ ದೇಶದಲ್ಲಿ ಹೊಸ ಯುವ ರಾಜಕೀಯ ನಾಯಕನೊಬ್ಬನ ಜನನವಾಗಿದೆ ಎಂಬ ಮಾತು ಕೇಳಿಬರುತ್ತಿದೆ. ನೀವೂ ನಿಮ್ಮನ್ನು ಭವಿಷ್ಯದ ರಾಜಕಾರಣಿಯಾಗಿ ನೋಡುತ್ತೀರಾ?
ನಾನು ಸ್ಟಾರ್‌ ಅಲ್ಲ ಅಥವಾ ದೊಡ್ಡ ನಾಯಕನೂ ಅಲ್ಲ. ನನ್ನನ್ನು ನಾನು ನೋಡಿಕೊಳ್ಳುವುದು ಒಬ್ಬ ಜೆಎನ್‌ಯು ವಿದ್ಯಾರ್ಥಿ ಎಂದು. ಮೊದಲಿಗೆ ಪಿಎಚ್‌ಡಿ ಪೂರ್ಣಗೊಳಿಸಬೇಕು. ಅದರ ಜೊತೆಗೇ ಜೆಎನ್‌ಯು ವಿದ್ಯಾರ್ಥಿ ಸಂಘಕ್ಕೆ ಅಧ್ಯಕ್ಷನಾಗಿದ್ದೇನೆ. ಇದರ ಅವಧಿ 10 ವರ್ಷ. ಈಗಾಗಲೇ ಸಾಕಷ್ಟು ಒಳ್ಳೆಯ ಕೆಲಸಕ್ಕೆ ಸಿದ್ಧತೆ ಮಾಡಿಕೊಂಡಿದ್ದೇವೆ. ಅವುಗಳನ್ನು ಪೂರ್ಣಗೊಳಿಸಬೇಕಿದೆ.

ಜೆಎನ್‌ಯುದಲ್ಲಿ ಆವತ್ತು ಮಾಡಿದ ಭಾಷಣಕ್ಕೆ ಸಿದ್ಧತೆ ಮಾಡಿಕೊಂಡಿದ್ದಿರಾ?
ಇಲ್ಲ. ಅದು ನಾನು ಬೆಳೆದು ಬಂದ ಸಮಾಜದಲ್ಲಿ ನನ್ನ ಇಲ್ಲಿಯವರೆಗಿನ ಅನುಭವದಿಂದ ಹುಟ್ಟಿದ ಮಾತು. ನಾನು ಉಂಡ ನೋವಿನಿಂದ ಹುಟ್ಟಿದ ನುಡಿಗಳವು.

ಜೈಲಿನಲ್ಲಿದ್ದಾಗ ನನಗೆ ಯೋಚಿಸಲು ಮತ್ತು ಓದಲು ಬಹಳ ಸಮಯ ಸಿಕ್ಕಿತು ಎಂದು ಹೇಳಿದ್ದೀರಿ. ಮತ್ತೇನು ಅನುಭವಗಳಾಗಿವೆ?
ಜೈಲಿನಲ್ಲಿ ನನ್ನಲ್ಲಿ ಮೂಡಿದ್ದು ಆಶಾವಾದ. ನಮ್ಮದು ಆಶಾವಾದಿ ಮಣ್ಣು. ಈ ಮಣ್ಣಿನಲ್ಲಿ ಕೃಷಿ ಮಾಡುವ ರೈತರು ಆಶಾವಾದಿಗಳು. ಅದಕ್ಕೂ ಹಿಂದೆ ಹೋದರೆ, ಬ್ರಿಟಿಷರು ಅಷ್ಟೊಂದು ವರ್ಷ ಈ ನೆಲವನ್ನು ಆಳಿದರೂ ಇಲ್ಲಿನ ಆಶಾವಾದವನ್ನು ಮಣ್ಣುಮಾಡುವುದಕ್ಕೆ ಅವರಿಂದಾಗಲಿಲ್ಲ. ಅವರ ನಂತರ ಈಗ ನಮ್ಮ ಮೇಲೆ ಆಳ್ವಿಕೆ ಮಾಡುತ್ತಿರುವ ಬ್ರಿಟಿಷರ ಚೇಲಾಗಳಿಗೂ ಈ ನೆಲದ ಆಶಾವಾದವನ್ನು ನಾಶ ಮಾಡಲು ಸಾಧ್ಯವಾಗಲಿಲ್ಲ. ನಮ್ಮ ಸಂವಿಧಾನ ಹಾಗೂ ನ್ಯಾಯಿಕ ಪ್ರಕ್ರಿಯೆಯಲ್ಲಿಯೇ ಈ ಶಕ್ತಿಯಿದೆ. ನನ್ನ ಮೇಲೆ ಹಾಕಿರುವ “ಸೆಡಿಶನ್‌’ ಕೇಸು ವಾಸ್ತವವಾಗಿ ಎಲ್ಲರೂ ಭಾವಿಸಿರುವಂತೆ ದೇಶದ್ರೋಹವಲ್ಲ, ಅದು ರಾಜದ್ರೋಹದ ಕೇಸು. ಈ ಕಾಯ್ದೆಯನ್ನು ರಾಜಕಾರಣಿಗಳ ವಿರುದ್ಧ ದನಿಯೆತ್ತುವ ಜನಸಾಮಾನ್ಯರ ಬಾಯಿಮುಚ್ಚಿಸಲು ಬಳಸಲಾಗುತ್ತಿದೆ. ಆದರೆ, ಅದಕ್ಕೆ ದೇಶದ ಬಹುಸಂಖ್ಯಾತರ ವಿರೋಧವಿದೆ ಎಂಬುದು ಜೈಲಿನಲ್ಲಿದ್ದಾಗ ನನಗೆ ಸ್ಪಷ್ಟವಾಯಿತು. ಆ ಕಾರಣಕ್ಕೇ ರಾಜಕೀಯ ಆಳ್ವಿಕೆಯಲ್ಲಿ ಸಾಮಾಜಿಕ ನ್ಯಾಯವನ್ನು ಕಾಣುವ ನನ್ನ ಆಶಾವಾದ ಮತ್ತಷ್ಟು ಬಲವಾಯಿತು.

ಸ್ವತಂತ್ರ ಭಾರತದಲ್ಲೇ “ಆಜಾದಿ’ ಎಂದು ಮತ್ತೂಮ್ಮೆ ಘೋಷಣೆ ಮೊಳಗಿಸಿದ್ದೀರಿ. ಅದರ ಅರ್ಥವೇನು?
ಸಂವಿಧಾನದಲ್ಲಿ ನಮಗೆ ಎಲ್ಲಾ ರೀತಿಯ ಸ್ವಾತಂತ್ರ್ಯ ಇದೆ. ಹಾಗಾಗಿ ನಮಗೆ ಈ ದೇಶದಿಂದ ಸ್ವಾತಂತ್ರ್ಯ ಬೇಕಿಲ್ಲ. ಬದಲಿಗೆ, ದೇಶದೊಳಗಿರುವ ಪ್ರತಿಯೊಬ್ಬ ವ್ಯಕ್ತಿಗೂ ನಿಜವಾದ ಅರ್ಥದಲ್ಲಿ ಸಂವಿಧಾನದಿಂದ ದತ್ತವಾಗಿರುವ ಸ್ವಾತಂತ್ರ್ಯವನ್ನು ಅನುಭವಿಸುವ ಸ್ವಾತಂತ್ರ್ಯ ಬೇಕು. ಯುವತಿಯರಿಗೆ ತಮಗಿಷ್ಟವಾದ ಬಟ್ಟೆ ಧರಿಸಲು, ತಮಗೆ ಇಷ್ಟವಾದವರನ್ನು ಮದುವೆಯಾಗಲು, ಇಷ್ಟವಾಗದವರನ್ನು ತಿರಸ್ಕರಿಸಲು ಸ್ವಾತಂತ್ರ್ಯ ಇರಬೇಕು. ಇದೇ ರೀತಿ ಎಲ್ಲ ವರ್ಗದವರಿಗೂ ಅವರವರ ಸ್ವಾತಂತ್ರ್ಯ ಮುಕ್ತವಾಗಿ ಲಭಿಸಬೇಕು. ಇದನ್ನು ವಿರೋಧಿಸುವವರ ಹಾಗೂ ಸಮಾನತೆಯನ್ನು ವಿರೋಧಿಸುವವರ ಮನಸ್ಥಿತಿಯ ವಿರುದ್ಧವೇ ನಮ್ಮ ಹೋರಾಟ. ಜಾತಿವಾದ, ಶೋಷಣೆ ಹಾಗೂ ಭೇದಭಾವದಿಂದ ನಮಗೆ ಸ್ವಾತಂತ್ರ್ಯ ಬೇಕು.

ನಿಮ್ಮ ಇಬ್ಬರು ಸ್ನೇಹಿತರು ಇನ್ನೂ ಜೈಲಿನಲ್ಲಿದ್ದಾರೆ. ಅವರಿಬ್ಬರು ದೇಶದ್ರೋಹದ ಘೋಷಣೆ ಕೂಗಿದ್ದಾರೆನ್ನಲಾದ ವಿಡಿಯೋ ತುಣುಕಿನ ಬಗ್ಗೆ ತನಿಖೆ ನಡೆಯುತ್ತಿದೆ. ನಿಜಕ್ಕೂ ಆವತ್ತು ಜೆಎನ್‌ಯುದಲ್ಲಿ ನಡೆದಿದ್ದೇನು?
ನನಗೆ ನಮ್ಮ ದೇಶದ ನ್ಯಾಯಿಕ ಪ್ರಕ್ರಿಯೆಯಲ್ಲಿ ಸಂಪೂರ್ಣ ವಿಶ್ವಾಸವಿದೆ. ನೀವು ಕೇಳಿದ ವಿಷಯ ಈಗ ನ್ಯಾಯಾಲಯದಲ್ಲಿದೆ. ಹಾಗಾಗಿ ನಾನು ಇದರ ಬಗ್ಗೆ ಟೀಕೆ-ಟಿಪ್ಪಣಿ ಮಾಡುವುದು ತಪ್ಪಾಗುತ್ತದೆ. ಆದರೆ, ಒಂದು ಮಾತು ಮಾತ್ರ ಹೇಳಬಲ್ಲೆ- ನನ್ನ ಪ್ರಕಾರ ಆವತ್ತು ಜೆಎನ್‌ಯುದಲ್ಲಿ ರಾಜದ್ರೋಹದ ಆರೋಪ ಹೊರಿಸುವಂಥ ಯಾವುದೇ ಘಟನೆ ನಡೆದಿಲ್ಲ. ನಾನೇನೂ ಕಾನೂನು ತಜ್ಞನಲ್ಲ. ಹಾಗಾಗಿ ಇದರ ಬಗ್ಗೆ ಹೆಚ್ಚು ಮಾತಾಡಲಾರೆ. ಸತ್ಯಮೇವ ಜಯತೇ ಎಂದು ಪ್ರಧಾನಿ ಹೇಳಿದ್ದನ್ನು ನಾನೂ ನಂಬುತ್ತೇನೆ. ಸತ್ಯಕ್ಕೇ ಜಯವಾಗಲಿದೆ.

ಇಂದು ದೇಶದ್ರೋಹಿ, ದೇಶಭಕ್ತ ಹಾಗೂ ರಾಷ್ಟ್ರೀಯವಾದ ಎಂಬ ಪದ ಹೆಚ್ಚು ಬಳಕೆಯಾಗುತ್ತಿದೆ. ನಿಮ್ಮ ಪ್ರಕಾರ ಯಾವುದು ದೇಶದ್ರೋಹ? ಯಾವುದು ದೇಶಭಕ್ತಿ? ಯಾವುದು ರಾಷ್ಟ್ರೀಯವಾದ?
ರಾಷ್ಟ್ರೀಯವಾದ ಹಾಗೂ ದೇಶಭಕ್ತಿಯ ನಡುವೆ ಬಹಳ ವ್ಯತ್ಯಾಸವಿದೆ. ರಾಷ್ಟ್ರ ಎಂಬ ಕಲ್ಪನೆ ಬಂದಿದ್ದು ಯುರೋಪ್‌ನಿಂದ. ಒಂದು ದೇಶ, ಒಂದು ಧರ್ಮ, ಒಂದು ಭಾಷೆ ಎಂಬ ಹಿನ್ನೆಲೆಯಲ್ಲಿ ಹುಟ್ಟಿದ ಕಲ್ಪನೆಯಿದು. ಭಾರತಕ್ಕೆ ರಾಷ್ಟ್ರೀಯವಾದಕ್ಕಿಂತ ಹೆಚ್ಚಾಗಿ ದೇಶಭಕ್ತಿಯ ಕಲ್ಪನೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಏಕೆಂದರೆ ಈ ದೇಶಕ್ಕೆ ಏಕ ಗುರುತಿಲ್ಲ, ಅನೇಕ ಗುರುತುಗಳಿವೆ. ನಮ್ಮದು ದೇಶಗಳಿಂದಾದ ದೇಶ. ಹಾಗಾಗಿ ನಾವು ಬಹುದೇಶೀಯರು. ಈ ದೇಶದ ರಾಷ್ಟ್ರೀಯವಾದದಲ್ಲಿ ಬೇರೆ ಬೇರೆ ಸಂಸ್ಕೃತಿಗಳ ಗುರುತುಗಳಿವೆ. ಇಲ್ಲಿರುವ ಎಲ್ಲ ಧರ್ಮೀಯರು, ಎಲ್ಲ ಭಾಷಿಕರಿಗೂ ಅವರವರದೇ ಆದ ರಾಷ್ಟ್ರೀಯವಾದಗಳಿವೆ. ಅವೆಲ್ಲ ಒಟ್ಟು ಸೇರಿದರೆ ಭಾರತದ ರಾಷ್ಟ್ರೀಯವಾದವಾಗುತ್ತದೆ. ಈ ರಾಷ್ಟ್ರೀಯವಾದವನ್ನೇ ಸಂವಿಧಾನವೂ ಹೇಳುತ್ತದೆ. ಆದರೆ, ಇವುಗಳ ನಡುವೆ ಇರುವ ಎಲ್ಲ ಸೀಮೆಗಳನ್ನೂ ನಾಶಮಾಡಬೇಕೆಂದು ಸರ್ಕಾರ ಪ್ರಯತ್ನಿಸುತ್ತಿದೆ. ಅದನ್ನು ದೇಶಭಕ್ತಿಯ ಹೆಸರಿನಲ್ಲಿ ಮಾಡುತ್ತಿದೆ. ಯುರೋಪ್‌ನ ರಾಷ್ಟ್ರೀಯವಾದವು ಹಿಟ್ಲರ್‌ ಹಾಗೂ ಮುಸಲೋನಿಗಳಿಗೆ ಜನ್ಮ ನೀಡುತ್ತದೆ. ನಮ್ಮ ರಾಷ್ಟ್ರೀಯವಾದವೂ ಅದೇ ಮಾದರಿಯನ್ನು ಅನುಸರಿಸಬಾರದು. ನಮ್ಮಲ್ಲಿ ಇನ್ನೊಬ್ಬ ಹಿಟ್ಲರ್‌ ಹಾಗೂ ಮುಸಲೋನಿ ಹುಟ್ಟಿಕೊಳ್ಳುವುದನ್ನು ನಾವು ಇಷ್ಟಪಡುವುದಿಲ್ಲ. ಇದೇ ನಮ್ಮ ರಾಷ್ಟ್ರೀಯವಾದದ ಕಲ್ಪನೆ.

ಹಾಗಾದರೆ ಕೇಂದ್ರ ಸರ್ಕಾರದ ಬಗ್ಗೆ, ಅದರಲ್ಲೂ ವಿಶೇಷವಾಗಿ ಸಚಿವೆ ಸ್ಮತಿ ಇರಾನಿ ಬಗ್ಗೆ ನಿಮಗೇನು ದ್ವೇಷ?
ಸ್ಮತಿ ಇರಾನಿ ನನ್ನ ಸಂಬಂಧಿಯಲ್ಲ. ಅವರೇನೂ ನನ್ನ ಜಮೀನು ಕಬಳಿಸಲು ಬಂದಿಲ್ಲ. ವಾಸ್ತವವಾಗಿ ನನಗ್ಯಾವ ಜಮೀನೂ ಇಲ್ಲ. ಹಾಗಾಗಿ ಅವರ ಬಗ್ಗೆ ನನಗೆ ವೈಯಕ್ತಿಕವಾಗಿ ಯಾವುದೇ ದ್ವೇಷವಿಲ್ಲ. ಆದರೆ ದೇಶದ ಶಿಕ್ಷಣ ಮಂತ್ರಿಯಾಗಿ ಅವರು ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ನಡೆಸುವ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಸ್ಟೈಪೆಂಡ್‌ ನಿಲ್ಲಿಸುವ ನಿರ್ಧಾರ ಕೈಗೊಂಡರು. ಅದನ್ನು ನಾವು ವಿರೋಧಿಸುತ್ತಿದ್ದೇವೆ. ಎರಡನೆಯದಾಗಿ, ಈ ಕೇಂದ್ರ ಸರ್ಕಾರ ತನ್ನ ವಿಚಾರಧಾರೆಯನ್ನು ಎಲ್ಲರ ಮೇಲೂ ಹೇರಲು ಹೊರಟಿದೆ. ಆ ಮೂಲಕ ವಿಶ್ವವಿದ್ಯಾಲಯಗಳ ಸ್ವಾಯತ್ತೆ ಮೇಲೆ ಹಾಗೂ ಅಲ್ಲಿನ ವಿದ್ಯಾರ್ಥಿಗಳ ಚಿಂತನೆಯ ಮೇಲೆ ಪ್ರಹಾರ ನಡೆಸುತ್ತಿದೆ. ಅದನ್ನು ನಾವು ವಿರೋಧಿಸುತ್ತಿದ್ದೇವೆ.

ಕಳೆದ 15 ದಿನದಲ್ಲಿ ನಿಮಗೆ ಅತಿ ಹೆಚ್ಚು ಹೆದರಿಕೆಯಾಗಿದ್ದು ಯಾವಾಗ?
ನಾನು ಅಖೀಲ ಭಾರತ ವಿದ್ಯಾರ್ಥಿ ಒಕ್ಕೂಟದ ಸದಸ್ಯ. ಸ್ವಾತಂತ್ರ್ಯ ಸಿಗುವುದಕ್ಕೂ ಮುನ್ನ ಹುಟ್ಟಿಕೊಂಡ ದೇಶದ ಮೊದಲ ವಿದ್ಯಾರ್ಥಿ ಸಂಘಟನೆಯಿದು. ಸ್ವಾತಂತ್ರ್ಯ ಹೋರಾಟದಲ್ಲೂ ಈ ಸಂಘದ ವಿದ್ಯಾರ್ಥಿಗಳು ಬಲಿದಾನ ಮಾಡಿದ್ದಾರೆ. ನೀವು ಹೆದರಿಕೆಯ ಬಗ್ಗೆ ಕೇಳಿದಿರಿ. ಹೆದರಿಕೆ ಎಂಬುದಕ್ಕೆ ವಿಶಿಷ್ಟ ಗುಣವೊಂದಿದೆ. ನೀವು ಯಾವುದಕ್ಕೆ ಹೆದರುತ್ತೀರೋ ಅದರ ವಿರುದ್ಧವೇ ಹೋರಾಡುತ್ತೀರಿ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಯಾವುದು ಕಿತ್ತುಕೊಳ್ಳುತ್ತದೆ ಎಂಬ ಹೆದರಿಕೆ ನನಗಿದೆಯೋ ಆ ಹೆದರಿಕೆಯೇ ಆ ಶಕ್ತಿಯ ವಿರುದ್ಧ ಹೋರಾಡುವ ಶಕ್ತಿಯನ್ನೂ ನನಗೆ ಕೊಡುತ್ತದೆ. ಹಾಗೆ ನೋಡಿದರೆ ನನಗೆ ತುಂಬಾ ಹೆದರಿಕೆಯೇನೂ ಆಗಿಲ್ಲ. ಆದರೆ, ಕಳೆದ 15 ದಿನಗಳಲ್ಲಿ ಬಹಳ ಆತಂಕವಾಗಿದ್ದು ನಿಜ. ರಾಜದ್ರೋಹಕ್ಕೆ ದೇಶದ್ರೋಹದ ಬಣ್ಣ ನೀಡಲು ಈ ದೇಶದ ದೊಡ್ಡ ದೊಡ್ಡ ವ್ಯಕ್ತಿಗಳೇ ಮುಂದಾದಾಗ ಈ ಆತಂಕವಾಗಿತ್ತು.

ರಾಜಕೀಯಕ್ಕೆ ಬರುತ್ತೀರಾ?
ಈಗ ನಾನು ವಿದ್ಯಾರ್ಥಿಗಳ ಪ್ರತಿನಿಧಿ. ಪ್ರಜಾಸತ್ತಾತ್ಮಕ ರೀತಿಯಲ್ಲಿ ಜನರು ನನ್ನನ್ನು ತಮ್ಮ ಪ್ರತಿನಿಧಿಯಾಗಿ ನೋಡಲು ಬಯಸುತ್ತಾರೆ ಎಂದಾದರೆ ಅದನ್ನು ತಿರಸ್ಕರಿಸುವುದಿಲ್ಲ.
-ಉದಯವಾಣಿ

Write A Comment