ಕರ್ನಾಟಕ

ಹೆಗಡೆಗೆ 5000, ಪಟೇಲರಿಗೆ 800 ವರ್ಷ ಇತಿಹಾಸ!

Pinterest LinkedIn Tumblr

JH-PAtilವಿಧಾನಸಭೆ: “ರಾಮಕೃಷ್ಣ ಹೆಗಡೆ ಅವರಿಗೆ ಐದು ಸಾವಿರ ವರ್ಷ ಇತಿಹಾಸವಿದೆ. ಜೆ.ಎಚ್‌.ಪಟೇಲರಿಗೆ 800 ವರ್ಷ ಇತಿಹಾಸ, ರಾಚಯ್ಯ ಅವರಿಗೆ ಕೇವಲ ಮೂವತ್ತೈದು ವರ್ಷ ಇತಿಹಾಸ…’

ರಾಜ್ಯ ರಾಜಕಾರಣದಲ್ಲಿ ಜಾತಿ “ಪ್ರಭಾವ’ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿಂದೊಮ್ಮೆ ಜನತಾದಳ ಶಾಸಕಾಂಗ ಪಕ್ಷದ ಸಭೆಯಲ್ಲಿ ನಡೆದ ಮಾತುಕತೆಯ ಉದಾಹರಣೆಯೊಂದಿಗೆ ಈಗಿನ ರಾಜಕಾರಣದ ಸ್ಥಿತಿಗೆ ಹೋಲಿಕೆ ಮಾಡಿ ಸ್ವಾರಸ್ಯಕರವಾಗಿ ವಿವರಿಸಿದ ಬಗೆಯಿದು.

ಶನಿವಾರ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರಿಸುವ ಸಂದರ್ಭದಲ್ಲಿ ಮಾತನಾಡುತ್ತಿದ್ದಾಗ, ನಾನು ಅಧಿಕಾರಿಗಳನ್ನು ಬೈಯ್ಯುತ್ತೇನೆ, ಸಾರ್ವಜನಿಕವಾಗಿ ಗದರುತ್ತೇನೆ ಎಂಬ ಆರೋಪ ಇದೆ. ಮೊದಲು ಗದರುತ್ತಿದ್ದೆ. ಆದರೆ, ಈಗ ಬಿಟ್ಟುಬಿಟ್ಟಿದ್ದೇನೆ ಎಂದರು.

ಆಗ, ಸ್ಪೀಕರ್‌ ಕಾಗೋಡು ತಿಮ್ಮಪ್ಪ ಮಧ್ಯಪ್ರವೇಶಿಸಿ, ಹೌದು ತಗೊಳಿÅ. ಶೂದ್ರ ವರ್ಗದಿಂದ ಬಂದವರು ನಾವು. ಅಪ್ಪ-ಅಮ್ಮ ಕಲಿಸಿದ ಭಾಷೆ ಒರಟು. ದೇಶಪಾಂಡೆ ಆ ಭಾಷೆ ಮಾತಾಡಕ್ಕೆ ಆಗುತ್ತಾ ಎಂದು ಚಟಾಕಿ ಹಾರಿಸಿದರು.

ಆಗ ಸಿದ್ದರಾಮಯ್ಯ, ಹೌದು. ಹಿಂದೆ ನಾವೆಲ್ಲಾ ಜನತಾದಳದಲ್ಲಿ ಇದ್ದಾಗ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದರು.

ಆಗ ಶಾಸಕಾಂಗ ಪಕ್ಷದ ಸಭೆಯಲ್ಲಿ ಒಮ್ಮೆ ರಾಚಯ್ಯ ಅವರು “ನೀವು ಚಾಣಾಕ್ಷರು ಸ್ವಾಮಿ’ ಎಂದು ಹೆಗಡೆ ಅವರನ್ನು ಉದ್ದೇಶಿಸಿ ಹೇಳಿದರು. ಅದಕ್ಕೆ ಜೆ.ಎಚ್‌.ಪಟೇಲರು, ಹೌದು ಕಣಯ್ನಾ, ಬ್ರಾಹ್ಮಣರಾದ ಹೆಗಡೆ ಅವರಿಗೆ ಐದು ಸಾವಿರ ವರ್ಷಗಳ ಇತಿಹಾಸ ಇದೆ. ಅದಕ್ಕೇ ಚಾಣಾಕ್ಷರು. ನಿನ್ನದು ಅಂಬೇಡ್ಕರ್‌ ಸಂವಿಧಾನ ಬರೆದ ನಂತರದ ಮೂವತ್ತೈದು ವರ್ಷಗಳ ಇತಿಹಾಸ. ಲಿಂಗಾಯತನಾದ ನನ್ನದೂ 800 ವರ್ಷಗಳ ಇತಿಹಾಸ ಇದೆ, ಬಸವಣ್ಣ ಬರೆದು ಹೋಗಿದ್ದಾರೆ ಎಂದು ಹಾಸ್ಯ ಮಾಡಿದ್ದರು ಎಂದು ಹೇಳಿದಾಗ ಇಡೀ ಸದನದಲ್ಲಿ ನಗೆ ಅಲೆ.

ಮಾತು ಮುಂದುವರಿಸಿದ ಸಿದ್ದರಾಮಯ್ಯ, ಜೆ.ಎಚ್‌.ಪಟೇಲರು ಮೌಡ್ಯ ನಂಬುತ್ತಿರಲಿಲ್ಲ. ಆದರೂ ಅವರಿಗೆ ಚಾಮರಾಜನಗರಕ್ಕೆ ಹೋದರೆ ಮುಖ್ಯಮಂತ್ರಿ ಪದವಿ ಕಳೆದುಕೊಳ್ತೀರಿ ಎಂದು ಭಯ ಹಿಡಿಸಿದ್ದರು. ಚಾಮರಾಜನಗರ ಹೊಸ ಜಿಲ್ಲೆ ಘೋಷಣೆಯಾದಾಗ ಅವರು ಬರಲೇ ಇಲ್ಲ, ಮಹದೇಶ್ವರ ಬೆಟ್ಟದಿಂದಲೇ ಘೋಷಿಸಿದರು. ನಾನು ಉಪ ಮುಖ್ಯಮಂತ್ರಿಯಾಗಿ ಚಾಮರಾಜನಗರಕ್ಕೆ ಹೋಗಿ ಅಧಿಕೃತವಾಗಿ ಘೋಷಿಸಿದ್ದೆ. ಅಲ್ಲಿಗೆ ಹೋಗಿದ್ದರಿಂದಲೇ ನಾನು ಇಂದು ಮುಖ್ಯಮಂತ್ರಿಯಾಗಿ ಕುಳಿತಿದ್ದೇನೆ.

ಮುಖ್ಯಮಂತ್ರಿಯಾದ ನಂತರವೂ ಹಲವಾರು ಬಾರಿ ಚಾಮರಾಜನಗರಕ್ಕೆ ಹೋಗಿದ್ದೇನೆ, ಅಧಿಕಾರದಲ್ಲಿ ಉಳಿದಿಲ್ಲವೇ ಎಂದು ಪ್ರಶ್ನಿಸಿದರು.

ಹಾಗಂತ ನಾನು ನಾಸ್ತಿಕ ಅಲ್ಲ. ಚಾಮುಂಡೇಶ್ವರಿ, ತಿರುಪತಿ ದೇವಸ್ಥಾನಕ್ಕೆ ಮಾತ್ರ ಹೋಗ್ತೀನೆ. ಮನೆಯಲ್ಲಿ ದೇವರ ಕೋಣೆಯತ್ತ ತಿರುಗಿಯೂ ನೋಡಲ್ಲ. ದಿನಾ ಪೂಜೆಯಲ್ಲಿ ತೊಡಗಲ್ಲ. ರಾಹುಕಾಲ, ಗುಳಿಕಕಾಲ ನೋಡಿ ಮನೆ ಬಿಡಲ್ಲ. ದೇವರನ್ನು ಹುಡುಕಿ ಕಾಶ್ಮೀರ, ಹಿಮಾಚಲಕ್ಕೆ ಹೋಗಲ್ಲ. ಬಸವಣ್ಣನವರ “ಉಳ್ಳವರು ಶಿವಾಲಯ ಕಟ್ಟುವರು, ನಾನೇನು ಮಾಡಲಯ್ಯ, ಎನ್ನ ಕಾಲೇ ಕಂಬ’ ಎಂಬ ತತ್ವ ನಂಬಿದವನು ಎಂದು ಹೇಳಿದರು.

ಈ ನಡುವೆ ವಾಚ್‌ ಬಗ್ಗೆ ಪ್ರಸ್ತಾಪವಾಗಿ ಕುಮಾರಸ್ವಾಮಿ- ಸಿದ್ದರಾಮಯ್ಯ ನಡುವೆ ಮಾತಿನ ಚಕಮಕಿ ನಡೆಯಿತು. “ನಾನು ತಪ್ಪು ಮಾಡಿಲ್ಲ, ಎಲ್ಲವನ್ನೂ ಧೈರ್ಯದಿಂದ ಎದುರಿಸುತ್ತೇನೆ. ಪ್ರತಿಯೊಂದಕ್ಕೂ ಸಿಬಿಐಗೆ ಕೊಡಿ ಅಂತೀರಿ, ನಿಮ್ಮ ಮೇಲೆ 150 ಕೋಟಿ ರೂ. ಆರೋಪ ಬಂದಾಗ ಕೊಟ್ರಾ?’ ಎಂದು ಎಂದು ಪ್ರಶ್ನಿಸಿದರು. ಅದಕ್ಕೆ ಕುಮಾರಸ್ವಾಮಿ, ನ್ಯಾಯಾಂಗ ತನಿಖೆಗೆ ಕೊಟ್ಟೆವು. ನೀವು ಅರ್ಕಾವತಿ ಪ್ರಕರಣ ನ್ಯಾಯಾಂಗ ತನಿಖೆಗೆ ಕೊಟ್ಟು ಹಗರಣ ಮುಚ್ಚಿಹಾಕುತ್ತಿಲ್ಲವೇ ಎಂದು ತಿರುಗೇಟು ನೀಡಿದರು. ಜತೆಗೆ ವಾಚ್‌ ಪ್ರಕರಣದಲ್ಲೂ ರಸೀದಿ ಪ್ರಮಾಣಪತ್ರ ಕೊಟ್ಟಿಲ್ಲವಲ್ಲ, ಅದಕ್ಕೇ ಕ್ಯಾಬಿನೆಟ್‌ ಹಾಲ್‌ನಲ್ಲಿ ಇಡಬೇಡಿ ಎಂದದ್ದು ಎಂದರು.

ಆಗ, ಮಧ್ಯಪ್ರವೇಶಿಸಿದ ಸ್ಪೀಕರ್‌ ಕಾಗೋಡು ತಿಮ್ಮಪ್ಪ, ವಾಚ್‌ ಈಗಾಗಲೇ ಸಂಪುಟ ಸಭಾಂಗಣದಲ್ಲಿಡಲಾಗಿದೆ. ಇಲ್ಲಿಗೆ ಬಿಟ್ಟುಬಿಡಿ. ಮುಂದೆ ಏನಾದರೂ ಆದರೆ ಗಿಫ್ಟ್ ಕೊಟ್ಟವನು ತಗ್ಲಾಕ್ಕೊಳ್ತಾನೆ, ಕಸ್ಟಮ್ಸ್‌ ತಗಾದೆ ಇದ್ರೆ ಎಂದರು. ಇದಕ್ಕೆ ತಕ್ಷಣ ಎಚ್ಚೆತ್ತುಕೊಂಡ ಸಿದ್ದರಾಮಯ್ಯ, ಇಲ್ಲ, ಆತ ಅನಿವಾಸಿ ಭಾರತೀಯ, ಆತನಿಗೆ ಯಾವುದೇ ಕಾಯ್ದೆ ಆನ್ವಯ ಆಗಲ್ಲ ಎಂದರು.

ಹೀಗಾಗಿ, ನಿಯಮ ಉಲ್ಲಂಘನೆಯೂ ಆಗಿಲ್ಲ. ಸುಧಾಕರ ಶೆಟ್ಟಿಯೇ ವಾಚ್‌ ನನ್ನದಲ್ಲ ಎಂದು ಹೇಳಿದ್ದಾರೆ ಎಂದು ಸಮಜಾಯಿಷಿ ನೀಡಿದರು. ಆಗ, ಸ್ಪೀಕರ್‌, ಹಾಗಾದ್ರೆ ಆಯ್ತು ತಗೊಳಿÅ. ಆ ಸುಧಾಕರ ಶೆಟ್ಟಿ ವಾಚ್‌ ಕಳೆದುಕೊಂಡಿದ್ರೆ ಹಿರಿಯ ಪೊಲೀಸ್‌ ಅಧಿಕಾರಿಗಳ ಬಳಿ ಹೋಗಲಿ, ಅದು ಬಿಟ್ಟು ಮಿನಿಸ್ಟರ್‌ಗೆ ಫೋನ್‌ ಮಾಡೋದು ಬೇಡ ಎಂದು ವಿಷಯಕ್ಕೆ ತೆರೆ ಎಳೆದರು.

ಆಗ ಬಿಜೆಪಿ ಸದಸ್ಯರು ಇದು ಸಿ.ಎಂ.ಇಬ್ರಾಹಿಂ ಅವರು ಹೇಳುವ ಮಾತುಗಳು ಎಂದಾಗ, ಬಸವಾದಿ ಶರಣರ ವಚನಗಳನ್ನು ಇಬ್ರಾಹಿಂಗೆ ಬರೆದು ಕೊಟ್ಟಿದ್ದೀವಾ? ಅವರು ಸಮಾರಂಭಗಳಲ್ಲಿ ಹೆಚ್ಚಾಗಿ ಬಳಸ್ತಾರೆ, ನಾವು ಕಡಿಮೆ ಹೇಳೆ¤àವೆ ಅಷ್ಟೇ. ಆದರೆ, ನಾನು ಜನರೇ ದೇವರು, ಅವರ ಕೆಲಸ ಪ್ರಾಮಾಣಿಕವಾಗಿ ಮಾಡಿದರೆ ದೇವರು ಮೆಚ್ಚುತ್ತಾನೆ ಎಂದು ನಂಬಿದವನು ಎಂದರು.
-ಉದಯವಾಣಿ

Write A Comment