ಕರ್ನಾಟಕ

ಬಾಲ್ಯವಿವಾಹಕ್ಕೆ ಹೋಗುವ ನೆಂಟರಿಗೂ ಜೈಲುಶಿಕ್ಷೆ! ಮಸೂದೆ ಅಂಗೀಕಾರ

Pinterest LinkedIn Tumblr

remandವಿಧಾನಸಭೆ: ಬಾಲ್ಯವಿವಾಹದ ಕಾರಣಕರ್ತರಷ್ಟೇ ಅಲ್ಲ, ಇನ್ಮುಂದೆ ಬಾಲ್ಯವಿವಾಹಕ್ಕೆ ಹೋಗುವ ನೆಂಟರು ಹಾಗೂ ಬಾಲ್ಯವಿವಾಹ ಮಾಡಿಸುವ ಪುರೋಹಿತರೂ ಜೈಲಿಗೆ ಹೋಗಬೇಕಾಗುತ್ತದೆ!

ಬಾಲ್ಯವಿವಾಹಗಳನ್ನು ಕಠಿಣವಾಗಿ ನಿರ್ಬಂಧಿಸಲು ಉದ್ದೇಶಿಸಿರುವ ಬಾಲ್ಯವಿವಾಹ ನಿಷೇಧ ವಿಧೇಯಕವನ್ನು ಶನಿವಾರ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದ್ದು, ಅದರಲ್ಲಿ ಈ ನಿಯಮಗಳಿವೆ.

ಯಾರಾದರೂ ಕದ್ದುಮುಚ್ಚಿ ಬಾಲ್ಯ ವಿವಾಹ ಮಾಡಿದರೆ ಅಂತಹ ವಿವಾಹವನ್ನೇ ಕಾನೂನು ಪ್ರಕಾರ ಅಸಿಂಧು ಎಂದು ಘೋಷಿಸುವ ಹಾಗೂ ಶಿಕ್ಷೆ ಪ್ರಮಾಣ ಒಂದು ವರ್ಷಕ್ಕೆ ಕಡಿಮೆ ಇಲ್ಲದಂತೆ ಎರಡು ವರ್ಷದವರೆಗ ವಿಸ್ತರಿಸುವ ಅವಕಾಶವೂ ಇದರಲ್ಲಿದೆ.

ಬಾಲ್ಯವಿವಾಹವು ಕಾನೂನು ಪ್ರಕಾರ ಸಿಂಧುವಲ್ಲ. ಬಾಲ್ಯ ವಿವಾಹ ಮಾಡಿಸುವ, ಪ್ರೇರೇಪಿಸುವ, ಆ ಸಮಾರಂಭದಲ್ಲಿ ಹಾಜರಿರುವವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸುವುದು. ಅಪ್ರಾಪ್ತ ಬಾಲಕಿಯನ್ನು ವಿವಾಹವಾದ ಪುರುಷ, ಮದುವೆ ಕಾರ್ಯ ನೆರವೇರಿಸಿದ ಅರ್ಚಕ, ಸಾಮೂಹಿಕ ವಿವಾಹ ಸಮಾರಂಭದಲ್ಲಿ ಬಾಲ್ಯವಿವಾಹ ನಡೆದಲ್ಲಿ ಆಯೋಜಕರು ಹಾಗೂ ಅಲ್ಲಿ ಹಾಜರಿದ್ದವರಿಗೂ ಒಂದು ವರ್ಷ ಜೈಲು ಶಿಕ್ಷೆ ವಿಧಿಸುವುದು ಕಡ್ಡಾಯ. ಬಾಲ್ಯವಿವಾಹ ನಡೆಯುತ್ತಿದೆ ಎಂಬ ಮಾಹಿತಿ ಬಂದರೂ ಸಂಬಂಧ ಪಟ್ಟ ಪೊಲೀಸ್‌ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ತಾನಾಗಿಯೇ ಕ್ರಮ ಕೈಗೊಳ್ಳಬಹುದು ಎಂದು ಮಸೂದೆಯಲ್ಲಿ ಹೇಳಲಾಗಿದೆ. ಈ ಮಸೂದೆ ಮುಂದಿನ ಅಧಿವೇಶನದಲ್ಲಿ ವಿಧಾನ ಪರಿಷತ್ತಿನಲ್ಲಿ ಮಂಡನೆಯಾಗಲಿದೆ. ಅಲ್ಲೂ ಅಂಗೀಕಾರವಾದರೆ ಕಾಯ್ದೆಯಾಗಿ ಜಾರಿಗೆ ಬರಲಿದೆ.
-ಉದಯವಾಣಿ

Write A Comment