ಕರ್ನಾಟಕ

ಜೆಪಿ ಪಾರ್ಕ್ ವಾರ್ಡ್‌ನಲ್ಲಿ 11 ಕೋಟಿ ಗೋಲ್ ಮಾಲ್: ಪದ್ಮನಾಭರೆಡ್ಡಿ

Pinterest LinkedIn Tumblr

PADMAಬೆಂಗಳೂರು, ಮಾ.5- ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜೆಪಿ ಪಾರ್ಕ್ ವಾರ್ಡ್‌ನಲ್ಲಿ ಕೊಳವೆ ಬಾವಿಗಳಿಂದ ಸಾರ್ವಜನಿಕರಿಗೆ ಕುಡಿಯುವ ನೀರು ಸರಬರಾಜು ಮಾಡುವ ಕಾಮಗಾರಿಯಲ್ಲಿ 11 ಕೋಟಿ ರೂ.ಗಳಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಬಿಬಿಎಂಪಿ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಪಿ ಪಾರ್ಕ್ ವಾರ್ಡ್‌ನಲ್ಲಿ ಕಾವೇರಿ ನೀರು ಸರಬರಾಜಿನ ವ್ಯವಸ್ಥೆ ಇದೆ. ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಆದರೂ ಸಹ ಬಿಬಿಎಂಪಿಯಿಂದ 22 ಕಾಮಗಾರಿಗಳನ್ನು ಕೈಗೆತ್ತಿಕೊಂಡು ಪ್ರತಿಕಾಮಗಾರಿಗಳಿಗೆ 50ಲಕ್ಷ ರೂ.ನಂತೆ ಒಟ್ಟು 11 ಕೋಟಿ ರೂ. ವೆಚ್ಚದಲ್ಲಿ ಕೊಳವೆ ಬಾವಿಗಳ ಮುಖಾಂತರ ಪ್ಲ್ಯಾಸ್ಟಿಕ್ ಪೈಪ್ ಸಂಪರ್ಕ ನೀಡಿ ತೆರಿಗೆದಾರರ ಹಣವನ್ನು ದುರುಪಯೊಗ ಪಡಿಸಿಕೊಳ್ಳಲಾಗಿದೆ ಎಂದು ದೂರಿದರು.

ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಯಾದ 110 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ಅಂತಹ ಪ್ರದೇಶದಲ್ಲಿ ಕುಡಿಯುವ ನೀರಿನ ಬವಣೆ ನೀಗಿಸುವ ಬದಲು ತೆರಿಗೆದಾರರ ಕೋಟ್ಯಂತರ ರೂ. ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದರೂ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಅಕ್ರಮದ ಬಗ್ಗೆ ತುಟಿಬಿಚ್ಚದಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ ಎಂದರು. ತಮ್ಮ ಸ್ವಾರ್ಥಕ್ಕಾಗಿ 11 ಕೋಟಿ ರೂ. ವೆಚ್ಚದಲ್ಲಿ ಪೈಪುಗಳನ್ನು ಅಳವಡಿಸಲು ಸುಸ್ಥಿತಿಯಲ್ಲಿದ್ದ ರಸ್ತೆಗಳನ್ನು ಮನಬಂದಂತೆ ಅಗೆದು ಹಾಳು ಮಾಡಿದ್ದಾರೆ. ಆ ರಸ್ತೆಗಳನ್ನು ಸರಿಪಡಿಸಲು ಮತ್ತೆ ಸಾರ್ವಜನಿಕರ ಹಣ ಪೋಲು ಮಾಡುತ್ತಿದ್ದಾರೆ. ಈ ಅಕ್ರಮ ಕುರಿತು 2015ರಲ್ಲಿ ಎನ್.ಮೂರ್ತಿ ಎಂಬುವರು ಅಂದಿನ ಆಡಳಿತಗಾರರಿಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ವಿಜಯಭಾಸ್ಕರ್ ಅವರು ಸದರಿ ಪ್ರಕರಣವನ್ನು ಟಿವಿಸಿಸಿ ತನಿಖೆಗೆ ಕೊಟ್ಟಿದ್ದರು. ಆದರೆ, ಈವರೆಗೆ ಕಾಮಗಾರಿಗೆ ಸಂಬಂಧಪಟ್ಟ ಅಧಿಕಾರಿಗಳು ಟಿವಿಸಿಸಿಗೆ ದಾಖಲೆಗಳನ್ನು ನೀಡದೆ ತನಿಖೆಗೆ ಸಹಕರಿಸಿಲ್ಲ ಎಂದು ತಿಳಿಸಿದರು.

ಅಧಿಕಾರಿಗಳ ಈ ಬೇಜವಾಬ್ದಾರಿ ಕುರಿತಂತೆ ಟಿವಿಸಿಸಿಯವರು ಅಧಿಕಾರಿಗಳು ತನಿಖೆಗೆ ಸಹಕರಿಸುತ್ತಿಲ್ಲ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆಯುಕ್ತರಿಗೆ ವರದಿ ಸಲ್ಲಿಸಿದ್ದರೂ ಇದುವರೆಗೆ ಆಯುಕ್ತರು ಕ್ರಮ ಕೈಗೊಳ್ಳದೆ ಇರುವುದು ಭ್ರಷ್ಟಾಚಾರಕ್ಕೆ ಇಂಬು ನೀಡಿದಂತಿದೆ ಎಂದು ಅವರು ವಿವರಿಸಿದರು. ಜೆಪಿ ಪಾರ್ಕ್‌ನಲ್ಲಿ 50ಕಿ.ಮೀ. ಉದ್ದದ ರಸ್ತೆಗಳಿವೆ. 4 ಇಂಚಿನ ಕಾವೇರಿ ಪೈಪ್ ಅಳವಡಿಸಲು ಪ್ರತಿ ಕಿಮೀಗೆ ಇಪ್ಪತ್ತೆಂಟುವರೆ ಲಕ್ಷ ಖರ್ಚಾಗುತ್ತದೆ. 50ಕಿಮೀಗೆ 14.25 ಕೋಟಿ ರೂ. ವೆಚ್ಚವಾಗುತ್ತದೆ. ಆದರೆ, ಸದರಿ ವಾರ್ಡ್‌ನಲ್ಲಿ ಕೊಳವೆ ಬಾವಿಯ ಎಚ್‌ಡಿಪಿಇ ಪೈಪ್‌ನ್ನು ಒಂದು ಕಿಮೀಗೆ ಅಳವಡಿಸಲು ಒಂದು ಕಿಮೀಗೆ 2 ಲಕ್ಷ ಆಗುತ್ತದೆ. 50 ಕಿಮೀಗೆ ಒಂದು ಕೋಟಿ ಆಗುತ್ತದೆ. ಆದರೆ, ಅಲ್ಲಿ 11 ಕೋಟಿ ರೂ. ವೆಚ್ಚದಲ್ಲಿ ಪ್ಲ್ಯಾಸ್ಟಿಕ್ ಪೈಪ್ ಅಳವಡಿಸಲು ಕಾಮಗಾರಿ ಕೈಗೆತ್ತಿಕೊಂಡಿರುವುದು ಭ್ರಷ್ಟಾಚಾರ ನಡೆದಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಬೆಂಗಳೂರು ನಗರಕ್ಕೆ ಒಬ್ಬರು ಪ್ರತ್ಯೇಕ ಸಚಿವರು ಇದ್ದರೂ ಕೂಡ ಬಿಬಿಎಂಪಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವುದು ಸಾರ್ವಜನಿಕರ ದುರ್ದೈವ. ಮುಖ್ಯಮಂತ್ರಿಗಳು ಈಗಲಾದರೂ ಎಚ್ಚೆತ್ತುಕೊಂಡು ಸದರಿ ಪ್ರಕರಣವನ್ನು ಉನ್ನತಮಟ್ಟದ ತನಿಖೆಗೆ ಒಳಪಡಿಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಿ ಪೋಲಾಗುತ್ತಿರುವ ಹಣವನ್ನು ಉಳಿಸಬೇಕು ಎಂದು ಪದ್ಮನಾಭರೆಡ್ಡಿ ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್, ಬಿಬಿಎಂಪಿ ಸದಸ್ಯ ನರಸಿಂಹನಾಯಕ್ ಮತ್ತಿತರರು ಉಪಸ್ಥಿತರಿದ್ದರು.

Write A Comment