ಕರ್ನಾಟಕ

ಬಜೆಟ್ ನಲ್ಲಿ ರೈತರಿಗೆ ಹೆಚ್ಚಿನ ಆದ್ಯತೆ ನೀಡಿ: ಕುಮಾರಸ್ವಾಮಿ

Pinterest LinkedIn Tumblr

KUMARಬೆಂಗಳೂರು, ಮಾ.5- ರಾಜ್ಯದಲ್ಲಿ ರೈತರು ಹತಾಶರಾಗಿದ್ದಾರೆ. ಮುಂದಿನ ದಿನಗಳಲ್ಲಿ ಅವರಲ್ಲಿ ಆತ್ಮಸ್ಥೈರ್ಯ ಮೂಡಿಸುವಂತೆ ಬಜೆಟ್‌ನಲ್ಲಿ ಕಾರ್ಯಕ್ರಮ ರೂಪಿಸಿ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದರು. ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮಾತನಾಡಿದ ಅವರು, ರೈತರ ಆತ್ಮಹತ್ಯೆಯನ್ನು ರಾಜ್ಯ ಸರ್ಕಾರ ಹಗುರವಾಗಿ ಪರಿಗಣಿಸಿ ಜೀನ್ಸ್ ಪ್ಯಾಂಟ್ ಹಾಕಿದವರು ರೈತರಲ್ಲ ಎಂದು ನಮ್ಮ ಪಕ್ಷದ ಬಸವರಾಜ ಹೊರಟ್ಟಿ ವಿಧಾನ ಪರಿಷತ್‌ನಲ್ಲಿ ಹೇಳಿರುವುದನ್ನು ಗಮನಿಸಿದ್ದೇನೆ.

ದಿನ ನಿತ್ಯ ಎರಡು ಮೂರು ಜನ ರೈತರ ಆತ್ಮಹತ್ಯೆ ಮಾಡಿಕೊಳ್ಳುತ್ತಲೆ ಇದ್ದಾರೆ. ಮುಂದಿನ ಬಜೆಟ್‌ನಲ್ಲಾದರೂ ಮುಖ್ಯಮಂತ್ರಿಯವರು ರೈತರಲ್ಲಿ ಆತ್ಮಸ್ಥೈರ್ಯ ತುಂಬುವ ನಿರ್ಧಾರ ಮಾಡಿ. ರೈತರು ಸಾಲ ತೀರಿಸಿಲ್ಲ ಇದನ್ನೆ ನೆಪ ಮಾಡಿಕೊಂಡು ರಾಷ್ಟ್ರೀಕೃತ ಬ್ಯಾಂಕುಗಳು ಸರಿಯಾಗಿ ಸಾಲ ನೀಡದಿದ್ದರೆ ಮತ್ತೆ ರೈತ ಖಾಸಗಿ ಲೇವಾದೇವಿದಾರರ ಬಳಿ ಹೋಗಿ ಸಾಲದ ಸುಳಿಗೆ ಸಿಲುಕುತ್ತಾನೆ. ಸರ್ಕಾರ ಅಧಿಕ ಬಡ್ಡಿ ವಸೂಲಿ ಮಾಡುವ ಲೇವಾದೇವಿರರ ವಿರುದ್ಧ ಕ್ರಮ ಕೈಗೊಂಡರೆ ಮುಂದೆ ಆತ ಮುಂದೆ ರೈತರಿಗೆ ಸಾಲ ನೀಡುವುದಿಲ್ಲ. ಈ ಬಗ್ಗೆಯೂ ಸರ್ಕಾರ ಗಮನ ಹರಿಸಲಿ ಎಂದು ಹೇಳಿದರು.

ಮುಂದಿನ ಎರಡು ಮೂರು ತಿಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಲಿದೆ. ನೆರೆಯ ರಾಜ್ಯಗಳ ಜೊತೆ ಉತ್ತಮ ಸಂಬಂಧ ಇಟ್ಟುಕೊಂಡು ಪರಿಸ್ಥಿತಿ ಸುಧಾರಿಸಲು ಪ್ರಯತ್ನಿಸಿ. ಜಾನುವಾರುಗಳಿಗೆ ಮೇವಿನ ಕೊರತೆಯಿದೆ ಇದಕ್ಕೂ ಮುಂಜಾಗ್ರತೆ ವಹಿಸಿ ಎಂದು ಸಲಹೆ ನೀಡಿದರು. ಸರ್ಕಾರದ ಭ್ರಷ್ಟಚಾರದ ಬಗ್ಗೆ ಮಾಧ್ಯಮದಲ್ಲಿ ದಿನ ನಿತ್ಯ ವರದಿಯಾಗುತ್ತಿದೆ ಆದರೆ ಕ್ರಮ ಕೈಗೊಳ್ಳುತ್ತಿಲ್ಲ. ಜಲ ಸಂಪನ್ಮೂಲ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕನಿಗೆ ಎರಡು-ಮೂರು ಲಕ್ಷ ರೂ. ಕೊಡಬೇಕಾದ ಸ್ಥಿತಿ ಇದೆ. ಈ ಬಗ್ಗೆ ರಾಜ್ಯಪಾಲರಿಗೂ ದೂರು ನೀಡಲಾಗಿದೆ ಎಂದು ಅವರು ಆರೋಪಿಸಿದರು.

ರೈತರಿಗೆ ಸಾಲ ನೀಡಲು ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ. 17 ಲಕ್ಷ ರೈತರಿಗೆ 7 ಸಾವಿರ ಕೋಟಿ ಪುನರ್ವಸತಿ ಸಾಲ ನೀಡಲಾಗಿದೆ. ಹೊಸ ಸಾಲ 200 ಕೋಟಿ ಮಾತ್ರ. ಈ ವರ್ಷದ ಅಂತ್ಯಕ್ಕೆ 7200 ಕೋಟಿ ರೂ. ಮಾತ್ರ ಸಾಲ ನೀಡಲಾಗಿದೆ. ಇನ್ನೂ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ 2014-15ನೇ ಸಾಲಿನಲ್ಲಿ 2 ಲಕ್ಷ ಫಲಾನುಭವಿಗಳಿಗೆ 900 ಕೋಟಿ, 2015-16ಕ್ಕೆ ಜನವರಿ ಅಂತ್ಯಕ್ಕೆ 2.06 ಲಕ್ಷ ಫಲಾನುಭವಿಗಳಿಗೆ 700 ಕೋಟಿ ಸಾಲ ನೀಡಲಾಗಿದೆ ಎಂದು ಅವರು ವಿವರಿಸಿದರು.

ರಮೇಶ್ ಕುಮಾರ್ ಮಧ್ಯ ಪ್ರವೇಶಿಸಿ, ಖಾಸಗಿ ಬ್ಯಾಂಕ್‌ನಿಂದ ದೀರ್ಘಾವಧಿ ಸಾಲ ಪಡೆದ ರೈತರು ಸುಸ್ತಿದಾರರಾಗಿದ್ದಾರೆ. ಅಲ್ಪಾವಧಿ, ಮಧ್ಯಮಾವಧಿ ಸಾಲದಲ್ಲಿ ಬಡ್ಡಿ ಹೆಚ್ಚಿದೆ ಇದರಿಂದ ರೈತರಿಗೆ ಲಾಭ ಇಲ್ಲ ಎಂದರು. ಕೇಂದ್ರದ ಹಣ ರಾಜ್ಯದ ತಿಜೋರಿಯಲ್ಲಿ ಬಿದ್ದಿದೆ. ಮೊದಲು ಅದನ್ನು ಜನರಿಗೆ ತಲುಪಿಸಿ ಎಂದು ಪ್ರಧಾನಮಂತ್ರಿಯವರು ಹೇಳಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು.

ಬರ ಪರಿಹಾರದ ಹಣ ನೀಡಬೇಕಾದರೆ ಜಿಲ್ಲಾಧಿಕಾರಿಗಳು ತಮ್ಮ ಅಪ್ಪನ ಮನೆಯಿಂದ ಕೊಡುವವರಂತೆ ನಡೆದುಕೊಳ್ಳುತ್ತಾರೆ. 1987ರಲ್ಲಿ ಶೇ.6.1ರಷ್ಟು ಮಾತ್ರ ರೈತರು ಸಾಲ ಪಡೆಯುತ್ತಿದ್ದರು. 1991ರ ವೇಳೆಗೆ ಶೇ.60ರಷ್ಟಾಗಿದೆ. ಶೇ.90ರಷ್ಟು ಜನ ಇರುವ ಆಧ್ಯತಾ ವಲಯಕ್ಕೆ ನೀಡುವ ಸಬ್ಸಿಡಿ ಶೇ.40ರಷ್ಟು, ಕೈಗಾರಿಕೋದ್ಯಮಿಗಳಿರುವ, ಶೇ.10 ಜನರ ಕ್ಷೇತ್ರಕ್ಕೆ ಶೇ.60ರಷ್ಟು ಸಬ್ಸಿಡಿ ನೀಡಲಾಗುತ್ತಿದೆ. ಇವರಲ್ಲಿ ಶೇ.61ರಷ್ಟು ಮಂದಿ ಸಾಲ ಮರುಪಾವತಿಸದೆ ಅನುತ್ಪಾದಕ ಆಸ್ತಿ ಹೆಚ್ಚುತ್ತಿದೆ ಎಂದು ಅವರು ಆತಂಕ ವ್ಯಕ್ತ ಪಡಿಸಿದರು.

ಜಪಾನ್, ಚೀನಾ, ಅಮೇರಿಕಾ, ದಕ್ಷಿಣಾ ಆಫ್ರಿಕಾದಲ್ಲಿ ರೈತರ ಸಂಖ್ಯೆ ಕಡಿಮೆ ಸಬ್ಸಿಡಿ ಹೆಚ್ಚು, ನಮ್ಮಲ್ಲಿ ಶೇ.51ರಷ್ಟು ರೈತರಿದ್ದಾರೆ ಆದರೆ ಸಬ್ಸಿಡಿಯ ಪ್ರಮಾಣ 2.5ರಷ್ಟು ಮಾತ್ರ. ಆದರೂ ರೈತ 25 ಲಕ್ಷ ಕೋಟಿ ಆಹಾರ ಧ್ಯಾನ ಉತ್ಪಾದಿಸುತ್ತಿದ್ದಾನೆ ಎಂದು ಅಂಕಿ ಸಂಖ್ಯೆ ನೀಡಿದರು. ಚುನಾವಣಾ ವ್ಯವಸ್ಥೆ ಹಾಗೂ ರಾಜಕೀಯದ ಬಗ್ಗೆ ಹಲವು ನಾಯಕರು ಬೇಸರ ವ್ಯಕ್ತಪಡಿಸಿದ್ದಾರೆ. ನನಗೂ ಬೇಸರವಾಗಿದೆ. ಮುಂದಿನ ದಿನಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ನಿರ್ಧರಿಸಿದ್ದೇನೆ. ಚುನಾವಣಾ ವ್ಯವಸ್ಥೆ ಸರಿಯಿಲ್ಲ ಎಂದು ವಿಷಾದಿಸಿದರು.

Write A Comment