ಕರ್ನಾಟಕ

ಕಳಸಾ ಬಂಡೂರಿ -ಮಹದಾಹಿ ಯೋಜನೆ: ಸಿದ್ದು – ಶೆಟ್ಟರ್ ವಾಕ್ಸಮರ

Pinterest LinkedIn Tumblr

SEಬೆಂಗಳೂರು, ಮಾ.5- ಕಳಸಾಬಂಡೂರಿ, ಮಹದಾಯಿ ವಿವಾದ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ನಡುವೆ ವಿಧಾನಸಭೆಯಲ್ಲಿಂದು ಮಾತಿನ ಚಕಮಕಿ ನಡೆಯಿತು. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಮುಖ್ಯಮಂತ್ರಿಗಳು ಮಾಹಿತಿ ನೀಡಿದ ನಂತರ ಎಚ್.ವೈ.ಮೇಟಿ ಅವರು ಮಹದಾಯಿ ಬಗ್ಗೆ ಹೇಳಿ ಎಂದರು, ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಇದು ರಾಜಕೀಯ ದಾಳ. ಹಾಗಾಗಿ ಆ ಪ್ರದೇಶದ ಮುಖಂಡರೊಂದಿಗೆ ಮಾತನಾಡಿ ಎಂದು ಮುಖ್ಯಮಂತ್ರಿಗಳಿಗೆ ಹೇಳಿದ್ದೇನೆ ಎಂದು ತಿಳಿಸಿದರು. ಆಗ ಮಧ್ಯಪ್ರವೇಶಿಸಿದ ಜಗದೀಶ್ ಶೆಟ್ಟರ್ ಈ ವಿಚಾರದಲ್ಲಿ ಮುಖ್ಯಮಂತ್ರಿಗಳು ಗೋವಾ ಸಿಎಂಗೆ ಪತ್ರ ಬರೆಯುತ್ತಾರೆ. ನಾವು ಅಲ್ಲಿನ ವಿರೋಧ ಪಕ್ಷದ ನಾಯಕರಿಗೆ ಪತ್ರ ಬರೆಯಲಿ. ಅವರು ಒಪ್ಪಿಗೆ ಸೂಚಿಸಿದರೆ ನಾವು ಸಹಕಾರ ಕೊಡುತ್ತೇವೆ ಎಂದರು.

ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ , ಗೋವಾ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೆ. ಅವರು ಆಗುವುದಿಲ್ಲ ಎಂದಿದ್ದಾರೆ. ಪ್ರಧಾನಿ ಮಧ್ಯಪ್ರವೇಶಿಸದ ಹೊರತು ಮಹದಾಯಿ ಇತ್ಯರ್ಥವಾಗುವುದಿಲ್ಲ. ಬಿಜೆಪಿ ಪ್ರಧಾನಿಯವರ ಮೇಲೆ ಒತ್ತಡ ಹಾಕಲು ಹಿಂದೇಟು ಹಾಕುತ್ತಿದೆ ಎಂದಾಗ, ಇಬ್ಬರ ನಡುವೆ ವಾಗ್ವಾದ ನಡೆಯಿತು. ಸೋನಿಯಾ ಗಾಂಧಿಯವರು ನದಿ ಜೋಡಣೆಗೆ ವಿರೋಧಿಸುತ್ತಿದ್ದಾರೆ ಎಂದು ಜಗದೀಶ್ ಶೆಟ್ಟರ್ ಆರೋಪಿಸಿದರು. ಅದಕ್ಕೆ ಸಿದ್ದರಾಮಯ್ಯ ಇಂದಿರಾಗಾಂಧಿ ಸೇರಿದಂತೆ ಅನೇಕ ನಾಯಕರು ಅಂತಾರಾಜ್ಯ ನದಿ ವಿವಾದವನ್ನು ಇತ್ಯರ್ಥ ಪಡಿಸಿದ್ದಾರೆ. ಪ್ರಧಾನಿ ಏಕೆ ಇದರಲ್ಲಿ ಮಧ್ಯಪ್ರವೇಶಿಸುತ್ತಿಲ್ಲ ಎಂದು ಪ್ರಶ್ನಿಸಿದರು.

ಬಿಜೆಪಿಯವರು ಎಲ್ಲಾ ವಿಷಯಕ್ಕೂ ರಾಜಕೀಯ ಮಾಡುತ್ತಾರೆ. ಬೊಬ್ಬೆ ಹೊಡೆಯುತ್ತಾರೆ. ಪ್ರಧಾನಿ ಮಾತು ಬಂದಾಗ ಮಾತ್ರ ಮಾತೆ ಆಡುವುದಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದು ವಾಗ್ವಾದಕ್ಕೆ ಕಾರಣವಾಯಿತು.

Write A Comment