ಕರ್ನಾಟಕ

ಇಂದು ಮತ್ತೆ ಸಿಎಂ ಔತಣಕೂಟ

Pinterest LinkedIn Tumblr

ಚಮಬೆಂಗಳೂರು: ದುಬಾರಿ ವಾಚ್ ಪ್ರಕರಣದ ಬಗ್ಗೆ ಪಕ್ಷದ ಶಾಸಕರು ಹಾಗೂ ಸಚಿವರುಗಳು ಅಸಮಾಧಾನ, ಅತೃಪ್ತಿಗಳನ್ನು ಹೊರ ಹಾಕುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಹೋದ್ಯೋಗಿಗಳ ವಿಶ್ವಾಸ ಗಳಿಸುವ ಪ್ರಯತ್ನಕ್ಕೆ ಮುಂದಾಗಿದ್ದು, ಇಂದು ಸಚಿವರುಗಳಿಗೆ ಔತಣಕೂಟವನ್ನು ಆಯೋಜಿಸಿದ್ದಾರೆ.

ಎರಡು ದಿನಗಳ ಹಿಂದೆಯಷ್ಟೇ ಶಾಸಕರು ಹಾಗೂ ಸಚಿವರುಗಳಿಗೆ ಔತಣಕೂಟ ಆಯೋಜಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮತ್ತೆ ಭೋಜನ ಕೂಟ ಆಯೋಜಿಸುವ ಮೂಲಕ ಎಲ್ಲರ ವಿಶ್ವಾಸ ಗಳಿಸುವ ಪ್ರಯತ್ನ ನಡೆಸಿದ್ದಾರೆ.

ಬಂಡವಾಳ ಹೂಡಿಕೆ ಸಮಾವೇಶ ಯಶಸ್ಸಿನ ಹಿನ್ನೆಲೆಯಲ್ಲಿ ಸಚಿವರುಗಳಿಗೆ ಭೋಜನ ಕೂಟಕ್ಕೆ ಆಹ್ವಾನ ನೀಡಲಾಗಿದ್ದು,  ಇಂದು ರಾತ್ರಿ ಖಾಸಗಿ ಹೋಟೆಲ್‌ನಲ್ಲಿ ಈ ಭೋಜನ ಕೂಟ ನಡೆಯಲಿದೆ.

ದುಬಾರಿ ವಾಚ್ ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಜತೆಗೆ ಹೈಕಮಾಂಡ್ ವಲಯದಲ್ಲೂ ಈ ಬಗ್ಗೆ ಸಾಕಷ್ಟು ಅಸಮಾಧಾನಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸಚಿವ ಸಹೋದ್ಯೋಗಿಗಳ ಓಲೈಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ವೆಸ್ಟ್ ಕರ್ನಾಟಕ ನೆಪದಲ್ಲಿ ಈ ಭೋಜನ ಕೂಟವನ್ನು ಆಯೋಜಿಸಲಾಗಿದೆ ಎನ್ನಲಾಗಿದೆ.

ಎರಡು ದಿನಗಳ ಹಿಂದೆ ಕಾಂಗ್ರೆಸ್ ಪಕ್ಷದ ಶಾಸಕರುಗಳಿಗೆ ಏರ್ಪಡಿಸಿದ್ದ ಔತಣಕೂಟದಲ್ಲಿ ನಿರೀಕ್ಷಿಸಿದಷ್ಟು ಶಾಸಕರು ಪಾಲ್ಗೊಂಡಿರಲಿಲ್ಲ, ಹಾಗಾಗಿ ಮತ್ತೆ ಇಂದು ಮತ್ತೊಂದು ಭೋಜನ ಕೂಟವನ್ನು ಆಯೋಜಿಸುವ ಮೂಲಕ ಎಲ್ಲರ ಮನ ಓಲೈಕೆಗೆ ಮುಖ್ಯಮಂತ್ರಿ ಕಸರತ್ತು ನಡೆಸಿದ್ದಾರೆ. ಹೈಕಮಾಂಡ್ ಮಟ್ಟದಲ್ಲಿ ದುಬಾರಿ ವಾಚ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವುದರಿಂದ ಮುಂದೆ ಆಗುವ ರಾಜಕೀಯ ಬೆಳವಣಿಗೆಗಳನ್ನು ಅರಿತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರುಗಳು ತಮ್ಮ ಪರ ಇದ್ದಾರೆ ಎಂಬ ಸಂದೇಶವನ್ನು ರವಾನಿಸಲು ಈ ಔತಣಕೂಟ ಆಯೋಜಿಸಿದ್ದಾರೆ ಎಂದು ಹೇಳಲಾಗುತ್ತಿದೆ.

Write A Comment