ಕರ್ನಾಟಕ

ಇಂದು ಬಯಲುಸೀಮೆ ರೈತರು, ಪ್ರತಿನಿಧಿಗಳ ಸಭೆ

Pinterest LinkedIn Tumblr

cmmಬೆಂಗಳೂರು: ಬಯಲುಸೀಮೆ ಪ್ರದೇಶಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವ ಸಂಬಂಧ ಇದೇ ತಿಂಗಳ 6 ರಂದು ಆ ಭಾಗದ ಚುನಾಯಿತ ಪ್ರತಿನಿಧಿಗಳು ಹಾಗೂ ರೈತ ಮುಖಂಡರ ಸಭೆ ಕರೆದಿರುವುದಾಗಿ ವಿಧಾನ ಪರಿಷತ್ತಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು.

ಬಯಲುಸೀಮೆ ಭಾಗದ ರೈತರು ತಾಳ್ಮೆ ಕಳೆದುಕೊಳ್ಳಬಾರದು. ಸಹನೆಯಿಂದ ವರ್ತಿಸಬೇಕು. ಸರ್ಕಾರ ನಿಮ್ಮ ಜೊತೆ ಇದೆ. ಆದಷ್ಟು ಬೇಗ ಕುಡಿಯುವ ನೀರು ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ಭರವಸೆ ನೀಡಿದರು.

ಸದನ ಆರಂಭವಾಗುತ್ತಿದ್ದಂತೆ ಬಿಜೆಪಿಯ ರಾಮಚಂದ್ರೇಗೌಡ ಅವರು ನಗರದಲ್ಲಿ ರೈತರ ಮೇಲೆ ನಡೆದಿರುವ ಲಾಠಿ ಚಾರ್ಜ್ ಪ್ರಕರಣವನ್ನು ಪ್ರಸ್ತಾಪಿಸುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿಗಳು ಈ ಘಟನೆಯ ಬಗ್ಗೆ ನನಗೂ ನೋವಾಗಿದೆ. ಇಂತಹ ಘಟನೆಗಳು ನಡೆಯಬಾರದು. ಆದರೆ ಉದ್ದೇಶಪೂರ್ವಕವಾಗಿ ಲಾಠಿ ಚಾರ್ಜ್ ನಡೆದಿಲ್ಲ ಎಂದು ಪೊಲೀಸರ ಕ್ರಮವನ್ನು ಸಮರ್ಥಿಸಿಕೊಂಡರು.

ರೈತರ ಪ್ರತಿಭಟನೆಯನ್ನು ಹತ್ತಿಕ್ಕುವುದಾಗಲೀ, ಬಲ ಪ್ರಯೋಗ ಮಾಡುವುದು ಸರ್ಕಾರದ ಉದ್ದೇಶವಲ್ಲ. ರೈತರು ಅನ್ನದಾತರು, ಯಾವುದೇ ಸಂದರ್ಭದಲ್ಲಿ ಅವರ ಮೇಲೆ ಬಲ ಪ್ರಯೋಗ ಮಾಡಬಾರದು ಎಂದು ಪೊಲೀಸರಿಗೆ ಸರ್ಕಾರ ಸ್ಪಷ್ಟ ಸೂಚನೆ ನೀ‌ಡಿತ್ತು. ಆದರೂ ರೈತರು ತಾಳ್ಮೆ ಕಳೆದುಕೊಂಡಾಗ ಅವರನ್ನು ಚದುರಿಸಲು ಪೊಲೀಸರು ಮುಂದಾದರಷ್ಟೆ ಎಂದರು.

ನಾನೂ ಕೂಡ ರೈತರ ಮಗನೆ. ಪ್ರೊ. ನಂಜುಂಡಸ್ವಾಮಿ ಅವರ ರೈತ ಸಂಘದಲ್ಲಿ ಇದ್ದುಕೊಂಡು ಹೋರಾಟ ಮಾಡಿದ್ದೇನೆ. ಕನಸು ಮನಸಿನಲ್ಲೂ ರೈತರನ್ನು ಹತ್ತಿಕ್ಕುವ ಉದ್ದೇಶ ಸರ್ಕಾರಕ್ಕೆ ಇಲ್ಲ ಎಂದರು.

ಚುನಾವಣಾ ಪ್ರಚಾರ ಸಂದರ್ಭದಲ್ಲಿ ಪ್ರತಿಭಟನೆಯನ್ನು ಕೈಬಿಡುವಂತೆ ಆ ಭಾಗದ ರೈತ ಮುಖಂಡರಲ್ಲಿ ಮನವಿ ಮಾಡಿದ್ದೆ. ಆದರೆ ರೈತರ ಹೋರಾಟದಲ್ಲಿ ರಾಜಕೀಯ ಮಾಡಬಾರದು. ಕೆಲವರು ಬೇಳೆ ಬೇಯಿಸಿಕೊಳ್ಳಲು ಹೊರಟರು ಎಂದು ತರಾಟೆಗೆ ತೆಗೆದುಕೊಂಡರು.

ತಪ್ಪು ಕಲ್ಪನೆ ಬೇಡ

ಬಯಲುಸೀಮೆ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸುವ ಸಂಬಂಧ ರಾಜ್ಯ ಸರ್ಕಾರ 13 ಸಾವಿರ ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಎತ್ತಿನಹೊಳೆ ಯೋಜನೆ, ನೇತ್ರಾವತಿ ತಿರುವು ಅಲ್ಲ. ಕರಾವಳಿ ಪ್ರದೇಶದ ಜನರು ಈ ತಪ್ಪು ಕಲ್ಪನೆಯನ್ನು ಕೈಬಿಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.

ಎತ್ತಿನಹೊಳೆ ಯೋಜನೆಯು ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದಾಗಲೇ ಚಾಲನೆ ನೀಡಿದ್ದಾರೆ. ಅಡಿಗಲ್ಲು ಹಾಕಿದ್ದು ಕಾಂಗ್ರೆಸ್ ಸರ್ಕಾರ. ಈ ಯೋಜನೆಗೆ 1680 ಕೋಟಿ ರೂ. ವೆಚ್ಚ ಮಾಡದ್ದೇವೆ. 3-4 ವರ್ಷಗಳಿಗೆ ಪೂರ್ಣಗೊಳಿಸಲಿದ್ದೇವೆ ಎಂದು ಹೇಳಿದರು.

ಕರಾವಳಿ ಪ್ರದೇಶದ ಜನರಿಗೆ ಈ ಯೋಜನೆಯಿಂದ ಯಾವುದೇ ತೊಂದಗೆ ಆಗುವುದಿಲ್ಲ. ಈ ಬಗ್ಗೆ ಈಗಾಗಲೇ ಕರಾವಳಿ ಪ್ರದೇಶದ ಚುನಾಯಿತ ಪ್ರತಿನಿಧಿಗಳೊಂದಿಗೆ ಚರ್ಚೆ ನ‌ಡೆಸಲಾಗಿದೆ ಎಂದು ಹೇಳಿದರು.

Write A Comment