ಕರ್ನಾಟಕ

ನಗರ ಸಾರಿಗೆಗೆ 545 ಬಸ್ ಖರೀದಿಗೆ ಸಂಪುಟ ಒಪ್ಪಿಗೆ

Pinterest LinkedIn Tumblr

buses

ಬೆಂಗಳೂರು: ರಾಜ್ಯದಲ್ಲಿ ಪ್ಲಾಸ್ಟಿಕ್ ನಿಷೇಧಿಸಿ ಜಾರಿಗೊಳಿಸಿರುವ ಕಾನೂನು ಸದ್ಯದಲ್ಲಿ ಜಾರಿಗೊಳ್ಳಲಿದ್ದು, ಈ ಸಂಬಂಧ ಪ್ಲಾಸ್ಟಿಕ್ ನಿಷೇಧಿಸುವ ಅಧಿಸೂಚನೆಯ ಅಂತಿಮ ಕರಡಿಗೆ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ವಿಧಾನಸೌಧದ ಸಚಿವ ಸಂಪುಟ ಸಭಾಂಗಣದಲ್ಲಿ ಇಂದು ನಡೆದ ಸಂಪುಟ ಸಭೆಯಲ್ಲಿ ರಾಜ್ಯದಲ್ಲಿ ಥರ್ಮೋಕೋಲ್, ಮೈಕೋಬೀಟ್ಸ್ ಬಳಸಿ ತಯಾರಾಗುವಂತಹ ವಸ್ತುಗಳು ಹಾಗೂ ಪ್ಲಾಸ್ಟಿಕ್‌ನಿಂದ ತಯಾರಿಸಲಾದ ವಸ್ತುಗಳ ಸರಬರಾಜು, ಸಂಗ್ರಹಣೆ, ಮಾರಾಟ ಮತ್ತು ವಿತರಣೆಯನ್ನು ನಿಷೇಧಿಸುವ ಅಂತಿಮ ಕರಡು ಅಧಿಸೂಚನೆಗೆ ಅನುಮೋದನೆ ನೀಡಲಾಯಿತು.

ಹೊಸ ಬಸ್ ಖರೀದಿಗೆ ಒಪ್ಪಿಗೆ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ನರ್ಮ್ -2 (ಅಮೃತ್) ಯೋಜನೆಯಡಿಯಲ್ಲಿ 545 ನಗರ ಸಾರಿಗೆ ಬಸ್‌ಗಳನ್ನು ಖರೀದಿಸಲು ಸಂಪುಟ ಒಪ್ಪಿಗೆ ನೀಡಿದೆ.

ಈ ಹೊಸ ಬಸ್‌ಗಳನ್ನು ನಗರ ಸಾರಿಗೆ ವ್ಯವಸ್ಥೆ ಬಲಪಡಿಸಲು ಕೆಎಸ್‌ಆರ್‌ಟಿಸಿ ಬಳಸಿಕೊಳ್ಳಲಾಗುವುದು. ಇದರಿಂದ ನಗರ ಸಾರಿಗೆಯಲ್ಲಿ ಹೆಚ್ಚು ಬಸ್‌ಗಳ ಓಡಾಟ ಸಾಧ್ಯವಾಗಿ ನಾಗರಿಕರಿಗೆ ಅನುಕೂಲವಾಗಲಿದೆ.

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ವತಿಯಿಂದ ವಿಶ್ವಬ್ಯಾಂಕ್ ನೆರವಿನೊಂದಿಗೆ ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ 6 ರಾಜ್ಯ ಹೆದ್ದಾರಿಗಳಿಗೆ ಭರಿಸಬೇಕಾಗಿರುವ 240 ಕೋಟಿ ರೂ. ಗಳ ಮೊತ್ತವನ್ನು ಸ್ಥಳೀಯ ಹಣಕಾಸು ಸಂಸ್ಥೆಗಳಿಂದ ಸಾಲದ ರೂಪದಲ್ಲಿ ಪಡೆದು ಟೋಲ್ ಸಂಗ್ರಹಣೆಯ ಮೂಲಕ ಮರುಪಾವತಿ ಮಾಡಲು ಸರ್ಕಾರದ ಖಾತರಿ ನೀಡಲು ಸಂಪುಟ ಸಭೆ ಒಪ್ಪಿಗೆ ನೀ‌ಡಿದೆ.

ರಾಜ್ಯ ಹೆದ್ದಾರಿ 33 ರಲ್ಲಿ ಬರುವ ಕೊರಟಗೆರೆ- ಬಾವಲಿ ರಸ್ತೆ ಸರಪಳಿ 181 ಕಿ.ಮೀ. ನಿಂದ 184 ಕಿ.ಮೀ. ವರೆಗೆ ಹಾಗೂ ಮೈಸೂರಿನ ಸಿದ್ಧಾರ್ಥ ನಗರ ಡೈರಿ ವೃತ್ತದಿಂದ ಹೊರವರ್ತುಲ ರಸ್ತೆಯ ಜಂಕ್ಷನ್ ವರೆಗೆ 30.50 ಕೋಟಿ ರೂ. ಗಳ ಪರಿಷ್ಕೃತ ಅಂದಾಜು ಮೊತ್ತದಲ್ಲಿ 4 ಪಥಗಳ ರಸ್ತೆ ನಿರ್ಮಾಣಕ್ಕೆ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಧಾರವಾಡ ಜಿಲ್ಲೆ ಹುಬ್ಬಳಿ ತಾಲೂಕಿನ ಹುಬ್ಬಳಿ ಗೋಕುಲ ಜಿಲ್ಲಾ ಮುಖ್ಯರಸ್ತೆಯನ್ನು 1.80 ಕಿ.ಮೀ. ನಿಂದ 5 ಕಿಮೀ ವರೆಗೆ 12 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೂ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀ‌ಡಿದೆ.

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ತಿದ್ದುಪಡಿ ವಿಧೇಯಕ ಮಂಡನೆಗೆ ಸಂಪುಟ ಸಭೆ ಒಪ್ಪಿಗೆ ನೀ‌ಡಿದೆ.

ಮುದ್ರಾಂಕ ಶುಲ್ಕ ವಿನಾಯಿತಿ

ಕರ್ನಾಟಕ ಕೈಗಾರಿಕಾ ನೀತಿಗೆ ಸಂಬಂಧಿಸಿದಂತೆ ಹೊಸ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡಲು ಕೈಗಾರಿಕೆಗಳಿಗೆ ಮುದ್ರಾಂಕ ಶುಲ್ಕ ವಿನಾಯಿತಿ ನೀಡಲು ಸಂಪುಟ ಸಭೆ ಒಪ್ಪಿಗೆ ನೀಡಿ‌ದೆ.

ಏತ ನೀರಾವರಿಗೆ ಒಪ್ಪಿಗೆ

ಮೈಸೂರು ಜಿಲ್ಲೆ ಇಳವಾಲ ಹೋಬಳಿಯ ಬತ್ತಿ ಹೋಗಿರುವ ಕೆರೆಗಳಿಗೆ ನೀರು ತುಂಬಿಸಲು ಆನಂದೂರು ಕೊಪ್ಪಲ್ ಬಳಿ ಏತ ನೀರಾವರಿ ಯೋಜನೆಯ ನಿರ್ಮಾಣ ಕಾಮಗಾರಿಯನ್ನು 15 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೆತ್ತಿಕೊಳ್ಳಲು ಆಡಳಿತಾತ್ಮಕ ಅನುಮೋದನೆಯನ್ನು ಸಂಪುಟ ನೀಡಿದೆ.

Write A Comment