ಕರ್ನಾಟಕ

ನಾಮದೇವ ಭಟ್ಟರ `ತಲೆ ಬಾಚ್ಕೊಳ್ಳಿ ಪೌಡರ್ ಹಾಕ್ಕೊಳ್ಳಿ’

Pinterest LinkedIn Tumblr

Tale-Bachkolli

ಚಿತ್ರರಂಗದಲ್ಲಿ ನೆಲೆ ನಿಲ್ಲಬೇಕು ಹಾಗೂ ಬದುಕು ಕಟ್ಟಿಕೊಳ್ಳಬೇಕು ಎಂದು ಹಲವರ ಹಂಬಲ. ಇಂತಹುದೇ ಕನಸು ಮತ್ತು ಆಸೆ ಹೊತ್ತು ನಾಮದೇವ ಭಟ್ಟರ್ ಚಿತ್ರರಂಗಕ್ಕೆ ಪ್ರವೇಶಿಸಿದ್ದಾರೆ.

ತಲೆ ಬಾಚ್ಕೊಳ್ಳಿ ಪೌಡರ್ ಹಾಕ್ಕೊಳಿ ಚಿತ್ರದ ಮೂಲಕ ನಾಯಕ ನಟರಾಗುವ ಜೊತೆಗೆ ನಿರ್ಮಾಪಕರೂ ಆಗಿದ್ದಾರೆ. ನಾಯಕನಾಗಿ ವಿಕ್ರಮ್ ಆರ್ಯ ಆಗಿ ಪರಿಚಯವಾಗಿದ್ದಾರೆ. ಚಿಕ್ಕಣ್ಣ, ನಿಖಿತ, ರಮೇಶ್ ಭಟ್ ಸೇರಿದಂತೆ, ಹಲವರ ತಾರಾಗಣವಿದೆ.

ಕಳೆದ ವಾರ ಚಿತ್ರದ ಧ್ವನಿಸುರುಳಿ ಬಿಡುಗಡೆ ಇತ್ತು. ನಟ ಪ್ರೇಮ್, ಪ್ರದೀಪ್, ಹರ್ಷ, ನಿರ್ಮಾಪಕ ಉಮೇಶ್ ಬಣಕಾರ್ ಸೇರಿದಂತೆ, ಅನೇಕರು ಧ್ವನಿಸುರುಳಿ ಬಿಡುಗಡೆ ಮಾಡಿ ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಶುಭಕೋರಿದರು.

ನಾಯಕ ಕಂ ನಿರ್ಮಾಪಕ ವಿಕ್ರಮ್ ಆರ್ಯ ಮಾತನಾಡಿ, ಚಿಕ್ಕಂದಿನಿಂದಲೂ ಸಿನಿಮಾ ಮಾಡುವ ಆಸೆ ಇತ್ತು. ಅವರಿವರ ಬಳಿ ಅಲೆದಾಡಿದೆ. ಯಾರೂ ಅವಕಾಶ ಕೊಡಲಿಲ್ಲ. ತಮ್ಮ ಅವಕಾಶಗಳನ್ನು ತಾವೇ ಸೃಷ್ಟಿ ಮಾ‌ಡಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಹಣ ಹೂಡಿಸಿ, ನಾಯಕ ನಟನಾಗುವ ಜೊತೆಗೆ ನಿರ್ಮಾಪಕನೂ ಆಗಿದ್ದೇನೆ. ನಾನೊಬ್ಬನೇ ನಾಯಕನಾದರೆ, ಯಾರೂ ನೋಡುವುದಿಲ್ಲ ಎಂದು ಹಾಸ್ಯನಟ ಚಿಕ್ಕಣ್ಣ ಅವರನ್ನು ಚಿತ್ರದಲ್ಲಿ ನಾಯಕನಾಗಿ ಪರಿಚಯಿಸಲಾಗಿದೆ. ಎಲ್ಲಾ ಕಲಾವಿದರ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ.

ಹಣ ಬರುತ್ತೊ, ಹೋಗುತ್ತೊ, ಒಳ್ಳೆಯ ಚಿತ್ರ ಮಾಡಿದ ತೃಪ್ತಿ ಇದೆ. ಚಿತ್ರದಿಂದ ಹಣ ಬಂದರೆ, ಮತ್ತೊಂದು ಸಿನಿಮಾ ಮಾಡುತ್ತೇನೆ. ಎಲ್ಲರ ಸಹಕಾರ ಹಾಗೂ ಪ್ರೋತ್ಸಾಹ ಬೇಕು ಎಂದು ಹೇಳಿಕೊಂಡರು.

ನಿರ್ದೇಶಕ ವೇಣುಗೋಪಾಲ್ ಮಾತನಾಡಿ, ಸಿನಿಮಾಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೆ. ಕಾಮಿಡಿ ಆಧಾರಿತ ಚಿತ್ರ ಚೆನ್ನಾಗಿ ಮೂಡಿಬಂದಿದೆ. ನಾಲ್ಕು ಹಾಡುಗಳು ವಿಭಿನ್ನವಾಗಿವೆ. ಬೆಂಗಳೂರು, ಮಲೇಷಿಯಾ ಸೇರಿದಂತೆ, ವಿವಿಧ ಕಡೆ ಚಿತ್ರೀಕರಣ ಮಾಡಲಾಗಿದೆ ಎಂದು ವಿವರ ನೀಡಿದರು. ಹಾಸ್ಯ ನಟ ಚಿಕ್ಕಣ್ಣ ಮಾತನಾಡಿ, ಒಳ್ಳೆಯ ಚಿತ್ರದಲ್ಲಿ ನಟಿಸಿದ ಖುಷಿ ಇದೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ. ಎಲ್ಲರ ಸಹಕಾರ ಬೇಕು ಎಂದರು.

ಹಿರಿಯ ನಟ ರಮೇಶ್ ಭಟ್ ಕಥೆ ಹೇಳಲು ಬಂದಾಗ ನೀವೂ ಒಬ್ಬರು ನಾಯಕರು ಎಂದರು. ನಾಯಕನ ಪಾತ್ರ ಮಾಡುವುದನ್ನು ಬಿಟ್ಟು 10-15 ವರ್ಷ ಆಗಿವೆ. ಚಿತ್ರದಲ್ಲಿ ನಟಿಸಬೇಕೆಂದರೆ, ಪೋಸ್ಟರ್‌ನಲ್ಲಿ ನನ್ನದು ಭಾವಚಿತ್ರವಿರಬೇಕು ಹಾಗೂ ಕಟೌಟ್ ಹಾಕಬೇಕು ಎನ್ನುವ ಕಂಡೀಷನ್ ಹಾಕಿದೆ. ಅದನ್ನು ಎಷ್ಟರಮಟ್ಟಿಗೆ ಪೂರೈಸಿದ್ದಾರೆ ನೋಡಬೇಕು ಎಂದು ಹೇಳಿದರು.

ಮತ್ತೊಬ್ಬ ಕಲಾವಿದ ಮೂಗು ಸುರೇಶ್ ಮಾತನಾಡಿ ಪಾತ್ರ ಚೆನ್ನಾಗಿ ಬಂದಿದೆ. ನೃತ್ಯ ನಿರ್ದೇಶಕ ತ್ರಿಬುವನ್ ಸೇರಿದಂತೆ, ಅನೇಕರು ಚಿತ್ರದ ಬಗ್ಗೆ ಹೇಳಿಕೊಂಡರು.

Write A Comment