ಕರ್ನಾಟಕ

ಬಂದೂಕು ತೋರಿಸಿ ಫೈನಾನ್ಸ್‌ನಿಂದ ಹಾಡಹಗಲೇ 12 ಕೆಜಿ ಚಿನ್ನ ಲೂಟಿ!

Pinterest LinkedIn Tumblr

02glb-01aಕಲಬುರಗಿ: ಇಲ್ಲಿನ ಜಯನಗರದಲ್ಲಿರುವ ಮುತ್ತೂಟ್‌ ಫಿನ್‌ಕಾರ್ಪ್‌ ಶಾಖೆಗೆ ಬುಧವಾರ ಬೆಳಗ್ಗೆ 11ರ ವೇಳೆ ಏಕಾಏಕಿ ನುಗ್ಗಿದ ನಾಲ್ವರು ಯುವಕರ ತಂಡ, ಮೂರು ಕೋಟಿ ರೂ.ಗೂ ಅಧಿಕ ಮೌಲ್ಯದ 12 ಕೆಜಿ ಚಿನ್ನಾಭರಣ ಹಾಗೂ ಮೂರು ಲಕ್ಷ ರೂ.ನಗದು ದೋಚಿ ಪರಾರಿಯಾಗಿದೆ. ಎರಡು ತಿಂಗಳ ಹಿಂದೆ ನಗರದ ಹೃದಯಭಾಗದಲ್ಲಿರುವ ಎಸ್‌ಬಿಐ ಶಾಖೆಯೊಂದರ ಎಟಿಎಂ ಒಡೆದು ಹಣ ದೋಚಿದ ಪ್ರಕರಣದ ಬೆನ್ನಲ್ಲೇ ಮುತ್ತೂಟ್‌ನಲ್ಲಿ ಹಾಡಹಗಲೇ ರಾಜಾರೋಷವಾಗಿ ದರೋಡೆ ನಡೆದಿರುವುದು ನಗರದ ಜನತೆಯನ್ನು ತಲ್ಲಣಗೊಳಿಸಿದೆ. ಇಲ್ಲಿನ ಮುತ್ತೂಟ್‌ ಫಿನ್‌ಕಾರ್ಪ್‌ ಶಾಖೆಯಲ್ಲಿ ದರೋಡೆ ನಡೆಯುತ್ತಿರುವುದು ಇದು ಎರಡನೇ ಬಾರಿ. ಎರಡೂವರೆ ವರ್ಷಗಳ ಹಿಂದೆ ನಗರದ ಚೌಕ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಶಾಖೆಯಲ್ಲಿ ದರೋಡೆ ನಡೆದಿತ್ತು. ಈ ಪ್ರಕರಣವನ್ನು ಭೇದಿಸಲು ಪೊಲೀಸರಿಗೆ ಈವರೆಗೂ ಸಾಧ್ಯವಾಗಿಲ್ಲ.

ಏಕಾಏಕಿ ನುಗ್ಗಿತು ನಾಲ್ವರ ತಂಡ:
ಬೆಳಗ್ಗೆ 11ರ ವೇಳೆ ಜಯನಗರದಲ್ಲಿರುವ ಮುತ್ತೂಟ್‌ ಫಿನ್‌ಕಾರ್ಪ್‌ ಶಾಖೆಯಲ್ಲಿ ನಾಲ್ವರು ಸಿಬ್ಬಂದಿ, ಸಿಬ್ಬಂದಿಗೆ ಉಪಾಹಾರ ಕೊಡಲೆಂದು ಬಂದಿದ್ದ ಸಿಬ್ಬಂದಿಯೊಬ್ಬನ ಸಂಬಂಧಿಕ ಮಾತ್ರವಿದ್ದರು. ಗ್ರಾಹಕರಾರೂ ಇರಲಿಲ್ಲ. ಈ ವೇಳೆ, ಕಣ್ಣಿಗೆ ಕಪ್ಪು ಕನ್ನಡಕ ಹಾಕಿಕೊಂಡಿದ್ದ ಒಬ್ಟಾತ ಕೈಯಲ್ಲಿ ಫೈಲ್‌ ಹಿಡಿದುಕೊಂಡು ಒಳಗೆ ಬಂದ. ಆತನ ಹಿಂದೆ ಸಫಾರಿ ಹಾಕಿಕೊಂಡಿದ್ದ ಮತ್ತೂಬ್ಬ ಯುವಕ ಬಂದು ಸಿಬ್ಬಂದಿ ಬಳಿ ತಾವು ತನಿಖಾಧಿಕಾರಿಗಳು, ಇಲ್ಲಿನ ವಹಿವಾಟಿನ ಬಗ್ಗೆ ಮಾಹಿತಿ ನೀಡಿ ಎಂದ. ಆಗ ಅಲ್ಲಿನ ಸಿಬ್ಬಂದಿಗಳು ಗಾಬರಿಯಿಂದ ಎದ್ದು ನಿಂತರು. ಅಷ್ಟರಲ್ಲಿ ಮತ್ತಿಬ್ಬರು ಯುವಕರು ಒಳನುಗ್ಗಿ ಬಂದು ಸಿಬ್ಬಂದಿಯ ಕುತ್ತಿಗೆಗೆ ಬಂದೂಕು ಹಿಡಿದು, ಎಲ್ಲರನ್ನೂ ಲಾಕರ್‌ ಕೋಣೆಯೊಳಗೆ ಕೂಡಿಹಾಕಿ ಚೀಲಕ ಹಾಕಿದರು. “ಯಾರೂ ಚೀರಬೇಡಿ. ಚೀರಿದರೆ ಒಬ್ಬೊಬ್ಬರನ್ನಾಗಿ ಕೊಲ್ಲುತ್ತೇವೆ’ ಎಂದು ಹೆದರಿಸಿದರು. ಇದೇ ವೇಳೆ, ಒಬ್ಟಾತ ಸಿಸಿ ಕ್ಯಾಮರಾದ ವಯರ್‌ ಕತ್ತರಿಸಿದ. ನಂತರ ಸಿಬ್ಬಂದಿಯಿಂದಲೇ ಲಾಕರ್‌ ತೆಗೆಸಿ, 12 ಕೆಜಿ ಬಂಗಾರ, 3 ಲಕ್ಷ ರೂ. ನಗದು ತೆಗೆದುಕೊಂಡು, ಬ್ಯಾಗ್‌ನಲ್ಲಿ ಹಾಕಿಕೊಂಡು ಪರಾರಿಯಾದರು. ಅಲ್ಲಿಂದ ತೆರಳುವಾಗ ನಾಲ್ವರು ಸಿಬ್ಬಂದಿ ಬಳಿಯಿದ್ದ ನಾಲ್ಕು ಮೊಬೈಲ್‌, ಇಬ್ಬರ ಬಳಿಯಿಂದ ಬೈಕ್‌ ಕೀ ಪಡೆದುಕೊಂಡು, ಎರಡು ಬೈಕ್‌ ಏರಿ ಪರಾರಿಯಾದರು.

ಇದಾದ ಸುಮಾರು 15ನಿಮಿಷಗಳ ನಂತರ ಗ್ರಾಹಕರೊಬ್ಬರು ಶಾಖೆಗೆ ಬಂದು ನೋಡಿದಾಗ ಒಳಗೆ ಯಾರೂ ಕಾಣಿಸಲಿಲ್ಲ. ಜತೆಗೆ, ಲಾಕರ್‌ ಕೋಣೆಯಿಂದ ಚೀರಾಟ ಕೇಳಿ ಬಂತು. ಲಾಕರ್‌ ಕೋಣೆಗೆ ಹಾಕಲಾಗಿದ್ದ ಚೀಲಕ ಹೊರತೆಗೆದಾಗ ದರೋಡೆ ನಡೆದ ಘಟನೆ ತಿಳಿದು ಬಂತು. ತಕ್ಷಣ ಸಿಬ್ಬಂದಿಯೊಬ್ಬ ಆ ಗ್ರಾಹಕನ ಮೊಬೈಲ್‌ನಿಂದ ಕಂಟ್ರೋಲ್‌ ರೂಂಗೆ ದೂರವಾಣಿ ಕರೆ ಮಾಡಿ, ವಿಷಯ ತಿಳಿಸಿದ. ಈಶಾನ್ಯ ವಲಯ ಐಜಿಪಿ ಬಿ.ಶಿವಕುಮಾರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಮಿತ ಸಿಂಗ್‌ ಘಟನಾ ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದರು.

ಈ ವೇಳೆ, ಸುದ್ದಿಗಾರರ ಜತೆ ಮಾತನಾಡಿದ ಐಜಿಪಿ ಶಿವಕುಮಾರ, ದರೋಡೆಕೋರರು ಸಿಬ್ಬಂದಿಯಿಂದ ಕಿತ್ತೂಯ್ದಿದ್ದ ಮೊಬೈಲ್‌ಗ‌ಳು ನಗರದ ಹೊರವಲಯದಲ್ಲಿರುವ ನಾಗನಹಳ್ಳಿ ಪೊಲೀಸ್‌ ತರಬೇತಿ ಕೇಂದ್ರದ ಟವರ್‌ ವ್ಯಾಪ್ತಿಯೊಳಗೆ ಇರುವುದು ಪತ್ತೆಯಾಯಿತು. ಇದನ್ನು ಆಧರಿಸಿ ಪೊಲೀಸರ ತಂಡಗಳು ಶಹಾಬಾದ್‌ವರೆಗೂ ಹೋಗಿ ಪರಿಶೀಲನೆ ನಡೆಸಿದರಾದರೂ, ಆರೋಪಿಗಳ ಸುಳಿವು ಪತ್ತೆಯಾಗಲಿಲ್ಲ. 22ರಿಂದ 30ರ ವಯೋಮಾನದ ನಾಲ್ವರ ತಂಡದಲ್ಲಿ ಒಬ್ಟಾತ ಶುದ್ಧ ಕನ್ನಡದಲ್ಲಿ ಮಾತನಾಡುತ್ತಿದ್ದ. ಇನ್ನಿಬ್ಬರು ಹಿಂದಿಯಲ್ಲಿ ಮಾತನಾಡುತ್ತಿದ್ದರು. ದರೋಡೆಕೋರರ ಚಲನವಲನಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ದರೋಡೆ ಮಾಡಿದವರು ಸ್ಥಳೀಯರೇ ಇರಬಹುದು ಎಂದು ಶಂಕೆ ವ್ಯಕ್ತಪಡಿಸಿದರು.
-ಉದಯವಾಣಿ

Write A Comment