ಕರ್ನಾಟಕ

ಬಿಪಿಎಲ್ ಕುಟುಂಬಗಳಿಗೆ ಸ್ವಯಂ ಉದ್ಯೋಗಕ್ಕೆ ಬಡ್ಡಿ ರಹಿತ ಕೈಸಾಲ

Pinterest LinkedIn Tumblr

praಬೆಂಗಳೂರು, ಮಾ.3- ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಕೈಗೊಳ್ಳುವ ಯಾವುದೇ ಸಣ್ಣ ಪುಟ್ಟ ಸ್ವಯಂ ಉದ್ಯೋಗಕ್ಕೆ ಬಡ್ಡಿ ರಹಿತ ಕೈಸಾಲ ನೀಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಸಹಕಾರ ಸಚಿವ ಹೆಚ್.ಎಸ್.ಮಹದೇವ ಪ್ರಸಾದ್ ವಿಧಾನಸಭೆಗೆ ತಿಳಿಸಿದರು. ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಾತನಾಡುತ್ತಿದ್ದ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಸಹಕಾರ ಸಚಿವರು ಕುರಿ, ಕೋಳಿ ಸಾಕಲು ಬಯಸಿದರೆ ಹಾಗೂ ಸಣ್ಣ ಪುಟ್ಟ ಉದ್ಯೋಗ ಮಾಡಲು ಬಯಸಿದರೆ ನಿರ್ದಿಷ್ಟ ಪ್ರಮಾಣದ ಬಡ್ಡಿ ರಹಿತ ಸಾಲ ನೀಡಲು ಚಿಂತನೆ ನಡೆಸಲಾಗಿದೆ ಎಂದರು.

ಪಹಣಿ ಹೊಂದಿರುವ ರೈತರಿಗೆ ಮಾತ್ರ ಸಾಲ ಸಿಗುತ್ತಿದೆ. ಆದರೆ ಈಗ ಬಿಪಿಎಲ್ ಕುಟುಂಬಗಳಿಗೂ ಸಣ್ಣ ಪುಟ್ಟ ಕೆಲಸ ಮಾಡಿಕೊಳ್ಳಲು ಆರ್ಥಿಕ ಸಹಾಯ ನೀಡಲು ಉದ್ದೇಶಿಸಲಾಗಿದೆ ಎಂದರು. ಇದಕ್ಕೂ ಮುನ್ನ ಮಾತನಾಡಿದ ರಮೇಶ್‌ಕುಮಾರ್, ರೈತರಿಗೆ ಕೊಡುವ ಸಾಲ ಪದ್ಧತಿಯಲ್ಲಿರುವ ಸಮಸ್ಯೆಗಳನ್ನು ಸರ್ಕಾರ ಸರಿಪಡಿಸಬೇಕು. ಒಂದು ಎಕರೆ ಭೂಮಿಯಲ್ಲಿ ಹೌಸ್ ಫಾರ್ಮಿಂಗ್ ಮಾಡಲು ಮೂವತ್ತು ಲಕ್ಷ ರೂ. ಬೇಕು. ಇದಕ್ಕೆ ಕೇಂದ್ರ ಸರ್ಕಾರ ಶೇ.50ರಷ್ಟು, ರಾಜ್ಯ ಸರ್ಕಾರ ಶೇ.25ರಷ್ಟು ಹಣ ನೀಡುತ್ತಿದೆ. ಉಳಿದ ಏಳುವರೆ ಲಕ್ಷ ರೂ. ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ ಸಿಗುವಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.

ನಮ್ಮ ಸಾಲ ನೀತಿ ಸರಿಯಿಲ್ಲ. ಈಗ ಕೃಷಿ ಸಚಿವರಾಗಿರುವ ಕೃಷ್ಣ ಭೈರೇಗೌಡ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದು ನಿಜ. ಇಷ್ಟಾದರೂ ನಮ್ಮ ಅಧಿಕಾರಿಗಳು ಸರಿಯಿಲ್ಲ ಎಂದರು. ಹೀಗಿದ್ದರು ಬಸವಲಿಂಗಪ್ಪ: ಬಡವರ ನೆರವಿಗೆ ನಿಲ್ಲುವ ವಿಷಯದಲ್ಲಿ ನೀವು ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದು ಮನವಿ ಮಾಡಿಕೊಂಡ ಅವರು, ಹಿಂದೆ ಮಂತ್ರಿಯಾಗಿದ್ದ ಬಸವಲಿಂಗಪ್ಪ ಅವರು ಒಂದು ತೀರ್ಮಾನ ಮಾಡಿದರು. ತಲೆಯ ಮೇಲೆ ಮಲ ಹೊರುವ ಪದ್ಧತಿಯನ್ನು ರದ್ದು ಮಾಡಬೇಕು ಎಂಬುದು ಅವರ ತೀರ್ಮಾನವಾಗಿತ್ತು.

ಆ ಸಂದರ್ಭದಲ್ಲಿ ಇದಕ್ಕೆ ಸಂಬಂಧಿಸಿದ ಐಎಎಸ್ ಅಧಿಕಾರಿಯೊಬ್ಬರನ್ನು ಕರೆದು ಈ ಕುರಿತು ಒಂದು ಆದೇಶ ಹೊರಡಿಸಿ ಎಂದರೆ, ಇದು ಸಾಧ್ಯವಿಲ್ಲದ ಕೆಲಸ ಸಾರ್, ಏಕೆಂದರೆ ಹಾಗಂತ ನಾವು ಆದೇಶ ಹೊರಡಿಸಿದರೆ ನಾಳೆಯಿಂದ ಗಲೀಜು ಹೆಚ್ಚಾಗುತ್ತದೆ ಎಂದಾಗ, ಬಸವಲಿಂಗಪ್ಪ ಹೇಳಿದರು, ನೀವು ಹೇಳಿದ್ದು ಸರಿ. ಇದು ನಿಮ್ಮ ಕೈಲಾಗುವುದಿಲ್ಲ. ನಾಳೆಯಿಂದ ರಜೆ ಹಾಕಿ ಮನೆಗೆ ಹೋಗಿ ಎಂದರು. ಯಾಕೆ ಎಂದು ಅಧಿಕಾರಿ ಕೇಳಿದಾಗ, ನಿಮ್ಮಪ್ಪ ಯಾವತ್ತೂ ಮಲ ಹೊತ್ತಿಲ್ಲ. ಆದರೆ ನನ್ನಪ್ಪ ಹೊತ್ತಿದ್ದಾನೆ. ಮರ್ಯಾದೆಯಾಗಿ ಹೋಗಿ ಆದೇಶ ಹೊರಡಿಸಿ. ಇಲ್ಲವೇ ಮನೆಗೆ ಹೋಗಿ ಎಂದು ಮುಲಾಜಿಲ್ಲದೆ ಗದರಿಸಿದರು. ಆಗ ಆದೇಶ ಹೊರಬಿತ್ತು.

ಬಸವಲಿಂಗಪ್ಪ ಹೀಗಿದ್ದರು, ನೀವು ಕೂಡ ಹಾಗೇ ಆಗಿ. ಬಡವರು, ಶೋಷಿತರು, ರೈತರು, ಹೆಣ್ಣು ಮಕ್ಕಳು ಹೀಗೆ ಎಲ್ಲ ಸಮುದಾಯಗಳಿಗೆ ನೆಮ್ಮದಿ ಮೂಡಿಸುವಂತಹ ಕೆಲಸ ಮಾಡಲು ಸಜಗಿ.ಅಧಿಕಾರ ಶಾಶ್ವತವಲ್ಲ. ಆದರೆ, ಇಂತಹ ಕೆಲಸ ಮಾಡಿದಾಗ ಇತಿಹಾಸದಲ್ಲಿ ನೀವು ಶಾಶ್ವತವಾಗಿ ಉಳಿದು ಬಿಡುತ್ತೀರಿ ಎಂದು ರಮೇಶ್‌ಕುಮಾರ್ ಹೇಳಿದರು. ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ, ಪಹಣಿ ಇರುವ ರೈತರಿಗೆ ಮಾತ್ರ ಸಹಕಾರ ಸಂಘಗಳಲ್ಲಿ ನೀವು ಸಾಲ ನೀಡಿದರೆ ಬಡವರು ಏನು ಮಾಡಬೇಕು..? ಹೀಗಾಗಿ ಅವರಿಗೆ ಕಷ್ಟ ಬಂದಾಗ ಒಂದು ಲಕ್ಷ ರೂ.ವರೆಗೆ ಕೈ ಸಾಲ ಸಿಗುವಂತೆ ಮಾಡಿ ಎಂದು ಒತ್ತಾಯಿಸಿದರು.

ಇವತ್ತು ವಾಣಿಜ್ಯ ಬ್ಯಾಂಕುಗಳಲ್ಲಿ ಯಾರೂ ಸಾಲ ಪಡೆಯುವ ಸ್ಥಿತಿ ಇಲ್ಲ. ಹದಿನಾಲ್ಕು-ಹದಿನೈದು ಪರ್ಸೆಂಟ್ ಬಡ್ಡಿಗೆ ಸಾಲ ಪಡೆಯುವ ಶಕ್ತಿ ರೈತರಲ್ಲಿಲ್ಲ. ಹೀಗಿರುವಾಗ ಬಡವರಿಗೆ ಎಲ್ಲಿ ಸಾಧ್ಯ..? ಹೀಗಾಗಿ ನಿಮ್ಮ ಸಾಲ ನೀತಿಯಲ್ಲಿ ಬದಲಾವಣೆ ತನ್ನಿ ಎಂದು ಮನವಿ ಮಾಡಿಕೊಂಡರು. ಇದಕ್ಕುತ್ತರಿಸಿದ ಸಹಕಾರ ಸಚಿವ ಹೆಚ್.ಎಸ್.ಮಹದೇವ ಪ್ರಸಾದ್,ರಾಜದ್ಯಂತ ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೂ ನಿರ್ದಿಷ್ಟ ಪ್ರಮಾಣದ ಸಾಲ ನೀಡಲು ಸಹಕಾರ ಸಂಘಗಳ ಸದಸ್ಯರನ್ನಾಗಿ ಮಾಡಲಾಗುತ್ತಿದೆ ಎಂದು ಹೇಳಿದರು. ರೈತರಿಗೆ ಸಾಲ ನೀಡಲು ಇದುವರೆಗೂ ನಬಾರ್ಡ್ ವತಿಯಿಂದ ಸಿಗುತ್ತಿದ್ದ ನೆರವಿನ ಪ್ರಮಾಣ ಕಡಿಮೆಯಾಗಿದೆ. ನಮ್ಮ ಸಂಪನ್ಮೂಲಗಳಿಂದಲೇ ಅದನ್ನು ಸಾಧಿಸಲು ಯತ್ನಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.

Write A Comment