ಕರ್ನಾಟಕ

ನಮ್ಮ ದೇಶದಲ್ಲೂ ನ್ಯಾನೋ ತಂತ್ರಜ್ಞಾನದಿಂದ ಕೃತಕ ಚರ್ಮ ತಯಾರಿಕೆ ಸಾಧ್ಯ : ಪ್ರೊ.ಸಿ.ಎನ್.ಆರ್.ರಾವ್

Pinterest LinkedIn Tumblr

cnಬೆಂಗಳೂರು, ಮಾ.೩-ನ್ಯಾನೊ ತಂತ್ರಜ್ಞಾನ ಬಳಸಿ ಕೃತಕ ಚರ್ಮ ತಯಾರಿಕೆ ಯತ್ನದಲ್ಲಿ ಅಮೆರಿಕ, ಇಂಗ್ಲೆಂಡ್ ನಿರತವಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಕ್ರಾಂತಿಕಾರಕ ಬದಲಾವಣೆ ಸಾಧ್ಯವಾಗಲಿದೆ ಎಂದು ಹೇಳಿದ ಪ್ರೊ.ಸಿ.ಎನ್.ಆರ್.ರಾವ್, ನಮ್ಮ ದೇಶದಲ್ಲೂ ನ್ಯಾನೋ ತಂತ್ರಜ್ಞಾನದಿಂದ ಕೃತಕ ಚರ್ಮ ತಯಾರಿಕೆ ಸಾಧ್ಯವಿದೆ ಎಂಬ ಬಗ್ಗೆ ಆಶಾವಾದ ವ್ಯಕ್ತಪಡಿಸಿದರು. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನ್ಯಾನೋ ತಂತ್ರಜ್ಞಾನ, ದಾರ್ಶನಿಕ ಸಮೂಹ ಹಮ್ಮಿಕೊಂಡಿದ್ದ ೮ನೇ ಬೆಂಗಳೂರು ಇಂಡಿಯಾ ನ್ಯಾನೋ ಕಾರ್ಯಕ್ರಮದಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನ್ಯಾನೋ ತಂತ್ರಜ್ಞಾನವು ಔಷಧಿ, ಎಲೆಕ್ಟ್ರಾನಿಕ್ ಸೇರಿದಂತೆ ವೈವಿಧ್ಯಮಯ ಕ್ಷೇತ್ರದಲ್ಲಿ ಬಳಕೆಯಾಗುತ್ತಿದ್ದು, ಇದರಿಂದ ಮಧುಮೇಹ, ಹೃದ್ರೋಗ, ಕ್ಯಾನ್ಸರ್‌ನಂತಹ ರೋಗಗಳಿಗೂ ಔಷಧಿ ತಯಾರಿಸಲು ಅನುಕೂಲಕರವಾಗಿದೆ.

ಇಂತಹ ಒಂದು ಸಂಶೋಧನಾತ್ಮಕ ಬೆಳವಣಿಗೆಯಿಂದ ಸಾಕಷ್ಟು ಪರಿಣಾಮಕಾರಿ ಬೆಳವಣಿಗೆ ಸಾಧ್ಯವಾಗಲಿದೆ ಎಂದು ಪ್ರತಿಪಾದಿಸಿದರು. ನಮ್ಮಲ್ಲಿ ಸಂಶೋಧನೆ ನಡೆಯುತ್ತಿದೆ. ಆದರೆ ಉತ್ಪದನಾ ಹಂತಕ್ಕೆ ತಲುಪುತ್ತಿರುವುದು ಮಾತ್ರ ವಿರಳವಾಗಿದೆ. ತಂತ್ರಜ್ಞಾನ ಬಳಸಿ ಉತ್ಪಾದನೆಗೆ ಮುಂದಾಗುವುದು ಅಗತ್ಯ. ಈ ನಿಟ್ಟಿನಲ್ಲಿ ಹೆಚ್ಚು ಅವಕಾಶಗಳು ಒದಗಿ ಬರಬೇಕಿದೆ. ವೈಜ್ಞಾನಿಕವಾಗಿ ನ್ಯಾನೋ ತಂತ್ರಜ್ಞಾನ ಸಂಶೋಧನೆ ಮತ್ತು ಅದಕ್ಕೂ ಮೀರಿದ ಅನುಷ್ಠಾನ ಹಂತದಲ್ಲಿ ಕಾರ್ಯಗತವಾಗಬೇಕಿರುವುದು ಅವಶ್ಯಕವಾಗಿದೆ ಎಂದರು.

ಸರ್ಕಾರ ಯಾವುದೇ ಇರಲಿ. ಕಾರ್ಯಗಳು ಅನುಷ್ಠಾನವಾದಾಗ ಮಾತ್ರ ಸಫಲತೆ ಸಾಧ್ಯ ಎಂದು ಹೇಳಿದ ರಾವ್, ವಿದೇಶಗಳಲ್ಲಿ ಈಗಾಗಲೇ ಇಂತಹ ಆವಿಷ್ಕಾರಗಳು ಉತ್ಪಾದನಾ ಹಂತ ತಲುಪಿದೆ. ನಮ್ಮಲ್ಲಿ ಇದಿನ್ನೂ ಸಾಧ್ಯವಾಗಿಲ್ಲ ಎಂದು ವಿಷಾದಿಸಿದರು. ನ್ಯಾನೋ ತಂತ್ರಜ್ಞಾನದಿಂದ ಉತ್ತಮ ಭವಿಷ್ಯವಿದೆ. ಈ ಕ್ಷೇತ್ರದಲ್ಲಿ ಕೆಲಸ ಮಾಡಲು ದೊಡ್ಡ ಕಂಪೆನಿ ಬೇಕು, ಹೈ-ಫೈ ವ್ಯವಸ್ಥೆ ಬೇಕು ಎಂದು ಕೂರುವ ಬದಲು ನಾಲ್ಕು ಗೋಡೆಗಳ ಮಧ್ಯೆ ಇದನ್ನು ಸೀಮಿತಗೊಳಿಸುವ ಬದಲು ಜಡತ್ವದಿಂದ ಹೊರಬಂದು ಕೊರತೆಗಳನ್ನೇ ಸವಾಲಾಗಿ ತೆಗೆದುಕೊಂಡು ಹೆಜ್ಜೆಯಿಡಿ ಎಂದು ಸಂದೇಶ ನೀಡಿದರು.

ಹರಿಯಾಣದ ನೀರಿನಲ್ಲಿ ಯುರೇನಿಯಂ, ಪಶ್ಚಿಮ ಬಂಗಾಳದ ಆರ್ಸನಿಕ್ ಸೇರಿ ಕಲುಷಿತಗೊಂಡಿದ್ದು , ಹೀಗೆ ಕಲುಷಿತಗೊಂಡ ನೀರನ್ನು ಶುದ್ಧೀಕರಿಸಲು ನ್ಯಾನೋ ತಂತ್ರಜ್ಞಾನ ಪೂರ್ವಕವಾಗಿದೆ ಎಂದು ಮಾಹಿತಿ ನೀಡಿದರು. ಎಸ್.ಆರ್.ಪಾಟೀಲ್ ಮಾತನಾಡಿ, ನ್ಯಾನೋ ತಂತ್ರಜ್ಞಾನ ಬಳಸಿ ಉತ್ಪಾದಿಸುವ ಔಷಧಿಯನ್ನು ಆರೋಗ್ಯ ಇಲಾಖೆ ಸಂಶೋಧಿಸಿ ಸಾಮಾನ್ಯ ಜನರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಈಗಾಗಲೇ ತುಮಕೂರು ರಸ್ತೆಯಲ್ಲಿ ನ್ಯಾನೋ ಕೇಂದ್ರ ಆರಂಭಿಸಲಾಗಿದ್ದು , ನಿರ್ದೇಶಕರನ್ನು ನೇಮಿಸಲಾಗಿದೆ.

ರಾಜ್ಯದಲ್ಲಿ ವಿಭಾಗೀಯ ನ್ಯಾನೋ ಸಂಶೋಧನಾ ವಿಜ್ಞಾನ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದ್ದು , ಕೇಂದ್ರ ಸರ್ಕಾರ ದೇಶಾದ್ಯಂತ ೬೬ ನ್ಯಾನೋ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಿದೆ. ಮೊದಲ ಹಂತದಲ್ಲಿ ತುಮಕೂರು, ಧಾರವಾಡಗಳಲ್ಲಿ ಆರಂಭಿಸಲಾಗುತ್ತಿದೆ ಎಂದು ಹೇಳಿದರು. ಬೆಂಗಳೂರಿನಲ್ಲಿ ನ್ಯಾನೋ ಕ್ರಾಂತಿ ನಡೆಯುತ್ತಿದೆ. ಪ್ರೊ.ಸಿ.ಎನ್.ಆರ್.ರಾವ್ ಉತ್ತಮ ಕೆಲಸ ನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ಐಟಿಬಿಟಿ ಕ್ಷೇತ್ರಕ್ಕೂ ಅನುಕೂಲವಾಗಲಿದೆ ಎಂದು ವಿವರಿಸಿದರು.

ಇದೇ ಸಂದರ್ಭದಲ್ಲಿ ಬೆಂಗಳೂರು ಇಂಡಿಯಾ ನ್ಯಾನೋ ವಿಜ್ಞಾನ ಪ್ರಶಸ್ತಿಯನ್ನು ಪ್ರೊ.ಸಿ.ಎನ್.ಆರ್. ಅವರಿಗೆ ನೀಡಿ ಗೌರವಿಸಲಾಯಿತು. ಪ್ರೊ.ರಾಮ್‌ಗೋಪಾಲ್ ರಾವ್ ಅವರನ್ನು ಸನ್ಮಾನಿಸಲಾಯಿತು. ಐಟಿಬಿಟಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಂಜುಳಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇಂದಿನಿಂದ ಮೂರು ದಿನಗಳ ಕಾಲ ಈ ಕಾರ್ಯಕ್ರಮ ನಡೆಯಲಿದ್ದು , ೯ ದೇಶಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ.

Write A Comment