ಕರ್ನಾಟಕ

ನೀರಿಗಾಗಿ ವಿಧಾನಸೌಧಕ್ಕೆ ರೈತರ ಮುತ್ತಿಗೆ,ಪೊಲೀಸರ ಜೊತೆಅನ್ನದಾತರ ಸಂಘರ್ಷ, ಲಾಠಿಪ್ರಹಾರ

Pinterest LinkedIn Tumblr

farmerರೈತರ ಆಕ್ರೋಶ ಕಟ್ಟೆಯೊಡೆದಿದೆ. ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಪಣ ತೊಟ್ಟು ಬೆಂಗಳೂರಿನ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಇಂದು ನಾಲ್ಕು ದಿಕ್ಕುಗಳಿಂದಲೂ ಸಾವಿರಾರು ರೈತರು ಧಾವಿಸಿದ್ದರು. ಇಂದು ಬೆಳಗ್ಗೆ ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ನಾನಾ ಕಡೆಗಳಿಂದ ರೈತರು ತಮ್ಮ ಟ್ರ್ಯಾಕ್ಟರ್‌ಗಳಲ್ಲಿ ಬೆಂಗಳೂರು ಪ್ರವೇಶಿಸಲು ಪ್ರಯತ್ನಿಸಿದ್ದು, ಗಡಿಭಾಗದಲ್ಲಿ ಅವರನ್ನು ಪೊಲೀಸರು ತಡೆದಾಗ ಸಂಘರ್ಷ ಏರ್ಪಟ್ಟಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಬೆಳೆಸುವ ಬಳ್ಳಾರಿ ರಸ್ತೆ ಸಂಪೂರ್ಣ ಸ್ತಬ್ಧಗೊಂಡಿದ್ದು, ಕಿಲೋ ಮೀಟರ್‌ಗಟ್ಟಲೆ ವಾಹನಗಳು ನಿಂತುಕೊಂದಿದ್ದವು. ಇನ್ನು ಪೊಲೀಸರ ಕ್ರಮ ಖಂಡಿಸಿ ರಸ್ತೆ ಮಧ್ಯೆಯೇ ನೂರಾರು ಟ್ರ್ಯಾಕ್ಟರ್‌ಗಳನ್ನು ನಿಲ್ಲಿಸಿ ಪಾದಯಾತ್ರೆ ಮೂಲಕ ವಿಧಾನಸೌಧದತ್ತ ರೈತರು ಮುನ್ನುಗ್ಗಿದರು.

ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿಪ್ರಹಾರ ನಡೆಸಬೇಕಾಯಿತು.

ಕಳೆದ 165 ದಿನಗಳಿಂದ ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರು ಒದಗಿಸುವಂತೆ ಆಗ್ರಹಿಸಿ ನಿರಂತರ ಧರಣಿ ಮಾಡುತ್ತಿದ್ದರೂ ಸಹ ಸರ್ಕಾರ ಸ್ಪಂದಿಸುತ್ತಿಲ್ಲ. ಜನ ನೀರಿಲ್ಲದೆ ಫ್ಲೋರೈಡ್‌ಯುಕ್ತ ಕೊಳಕು ನೀರನ್ನು ಸೇವಿಸಿ ನಾನಾ ಕಾಯಿಲೆಗಳಿಗೆ ತುತ್ತಾಗುತ್ತಿದ್ದರೂ ಯಾವುದೇ ಸರ್ಕಾರಗಳು ಸ್ಪಂದಿಸುತ್ತಿಲ್ಲ ಎಂದು ಹೋರಾಟ ಸಮಿತಿಯ ಅಧ್ಯಕ್ಷ ಆಂಜನೇಯರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಪಂ ಸದಸ್ಯ ಮುನೇಗೌಡ, ಹಾಲು ಒಕ್ಕೂಟದ ನಿರ್ದೇಶಕ ನಾಗರಾಜು ಚಿಕ್ಕಬಳ್ಳಾಪುರ ಹೊರವಲಯದ ಚದಲಪುರ ಕ್ರಾಸ್‌ನಲ್ಲಿ ಟ್ರ್ಯಾಕ್ಟರ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿ, ನಮ್ಮನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ. ನ್ಯಾಯಯುತ ಹೋರಾಟಕ್ಕೆ ನಾವು ಧುಮುಕಿದ್ದು, ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಈ ನಡುವೆ ರಾಣಿ ಕ್ರಾಸ್ ಬಳಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ತಡೆಯಲು ಮುಂದಾದಾಗ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಇದರ ನಡುವೆ ರೊಚ್ಚಿಗೆದ್ದ ಕೆಲ ರೈತರು, ಪೊಲೀಸರೊಂದಿಗೆ ವಾಗ್ವಾದಕ್ಕಿಳಿದು ಬಲವಂತವಾಗಿ ಟ್ರ್ಯಾಕ್ಟರ್‌ಗಳನ್ನು ಮುಂದೆ ಹೋಗುವಂತೆ ದಾರಿ ಮಾಡಿಕೊಟ್ಟರು. ಬ್ಯಾರಿಕೇಡ್‌ಗಳನ್ನು ಕೂಡ ರಸ್ತೆಯಿಂದ ಆಚೆಗೆ ಎಸೆದು ಮುಂದೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಫ್ಲೈ ಓವರ್‌ಅನ್ನು ಕೂಡ ವಶಕ್ಕೆ ಪಡೆದು ಟ್ರ್ಯಾಕ್ಟರ್‌ಗಳನ್ನು ಅಡ್ಡ ನಿಲ್ಲಿಸಿ ಹೋರಾಟ ತೀವ್ರಗೊಳಿಸಿದರು.

ಹೊಸಕೋಟೆ, ಕೆಆರ್ ಪುರಂ ಸೇರಿದಂತೆ ಹಲವೆಡೆ ರೈತರನ್ನು ತಡೆಯಲಾಯಿತು. ಆದರೂ ಅದನ್ನು ದಾಟಿ ಸಾವಿರಾರು ಮಂದಿ ಬೆಂಗಳೂರಿಗೆ ಪ್ರವೇಶಿಸುತ್ತಿದ್ದಂತೆ ಅರಮನೆ ಮೈದಾನದ ಬಳಿ ಅವರನ್ನು ತಡೆಯಲಾಯಿತು. ಇಲ್ಲಿಯೂ ಕೂಡ ಕೆಲಕಾಲ ಪೊಲೀಸರು ಹಾಗೂ ರೈತರ ಮಧ್ಯೆ ಮಾತಿನ ಚಕಮಕಿ ಏರ್ಪಟ್ಟಿತ್ತು. ತುಮಕೂರು ರಸ್ತೆ ಮೂಲಕ ಬಂದಿದ್ದ ಕೆಲ ರೈತರು ಫ್ರೀಡಂಪಾರ್ಕ್‌ನಲ್ಲಿ ಜಮಾಯಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಶೇಷಾದ್ರಿ ರಸ್ತೆಯಲ್ಲಿ ಧರಣಿ ಕುಳಿತರು. ಈ ಹಿನ್ನೆಲೆಯಲ್ಲಿ ಇಲ್ಲಿಯೂ ಸಹ ಟ್ರಾಫಿಕ್‌ಜಾಮ್ ಉಂಟಾಗಿ ವಾಹನ ಸವಾರರು ಪರಿತಪಿಸುವಂತಾಗಿತ್ತು. ಒಟ್ಟಾರೆ ಬೆಂಗಳೂರಿನಲ್ಲಿಂದು ರೈತರು ಬೃಹತ್ ಹೋರಾಟವನ್ನೇ ನಡೆಸಿದ್ದಾರೆ.

Write A Comment