ಕರ್ನಾಟಕ

ಪೋಷಕರ ರಕ್ತ ಹೀರುವ ಶಾಲೆಗಳ ವಿರುದ್ಧ ಕ್ರಮಕ್ಕೆ ಆಗ್ರಹ

Pinterest LinkedIn Tumblr

poಬೆಂಗಳೂರು, ಮಾ. ೧- ಪೋಷಕರ ರಕ್ತಹೀರಿ ಶಾಲೆಗಳನ್ನು ನಡೆಸುತ್ತಿರುವಂತಹವರನ್ನು ಮಟ್ಟ ಹಾಕಬೇಕು ಎಂದು ಮಾಜಿ ವಿಧಾನಸಭಾಧ್ಯಕ್ಷ ರಮೇಶ್‌ಕುಮಾರ್ ವಿಧಾನಸಭೆಯಲ್ಲಿಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಆಗ್ರಹಿಸಿದರು.

ಮಾಜಿ ಶಿಕ್ಷಣ ಸಚಿವ ಹೆಚ್.ಜಿ. ಗೋವಿಂದೇಗೌಡರ ನಿಧನಕ್ಕೆ ಸಂತಾಪ ಸೂಚನಾ ನಿರ್ಣಯ ಬೆಂಬಲಿಸಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಅವರು, ಗೋವಿಂದೇಗೌಡರಿಗೆ ನಾವೇನಾದರೂ ನಿಜವಾಗಿಯೂ ಶ್ರದ್ಧಾಂಜಲಿ ಸಲ್ಲಿಸಬೇಕು ಎಂದಾದರೆ ಪೋಷಕರ ರಕ್ತಹೀರಿ ಶಾಲೆಗಳನ್ನು ನಡೆಸುತ್ತಿರುವವರಿಗೊಂದು ಗತಿ ಕಾಣಿಸಬೇಕಾಗಿದೆ ಎಂದರು.

ಸರ್ಕಾರಿ ಶಾಲೆಗಳನ್ನು ಮುಚ್ಚುವ ಸ್ಥಿತಿಗೆ ತಂದು ನಿಲ್ಲಿಸಿದ್ದೇವೆ. ಇದಕ್ಕೆ ಎಲ್ಲ ಪಕ್ಷದವರೂ ಕಾರಣ. ಆ ಸರ್ಕಾರ, ಈ ಸರ್ಕಾರ ಎಂಬ ಭೇದ ಭಾವ ಇಲ್ಲ ಎಂದರು.

ಗೋವಿಂದೇಗೌಡರು ಗಾಂಧಿ ಆದರ್ಶ ಪಾಲನೆ ಮಾಡಿದ್ದರು. ಜನರು ತಿಳಿದುಕೊಂಡಂತೆ ಮೃದು ಆಗಿರಲಿಲ್ಲ. ಅವರು ಸಮಯ ಸಂದರ್ಭ ಬಂದಾಗ ಗಡುಸಾಗಿ ಖಡಕ್ಕಾಗಿ ಮಾತನಾಡುತ್ತಿದ್ದರು. ಆದರೆ ನಮ್ಮ ರಾಜಕೀಯ ವ್ಯವಸ್ಥೆಯನ್ನು ನೋಡಿ ಬೇಸರಪಟ್ಟುಕೊಂಡು ಈ ವ್ಯವಸ್ಥೆಯಿಂದ ದೂರ ಉಳಿದಿದ್ದರು ಎಂದು ಹೇಳಿದರು.

ಇದಕ್ಕೂ ಮುನ್ನ ಮಾತನಾಡಿದ ಬಿಜೆಪಿ ಶಾಸಕ ಸಿ.ಟಿ. ರವಿ, ಇತ್ತೀಚೆಗೆ ವೀರ ಮರಣವನ್ನಪ್ಪಿದ ಯೋಧ ಹನುಮಂತಪ್ಪ ಕೊಪ್ಪದ್ ಅವರ ಪತ್ನಿ, ತನ್ನ ಮಗಳನ್ನು ಸೇನೆಗೆ ಸೇರಿಸುತ್ತೇನೆ ಎಂದು ಹೇಳಿರುವುದನ್ನು ಪ್ರಸ್ತಾಪಿಸಿದ ರಮೇಶ್‌ಕುಮಾರ್, ಯೋಧನ ಪತ್ನಿ ತನ್ನ ಮಗಳನ್ನು ಸೇನೆಗೆ ಸೇರಿಸುತ್ತೇನೆಂದು ಆವೇಶದಲ್ಲಿ ಹೇಳಿದ್ದಾರೆ. ಅಂತಹವರು ತಮ್ಮ ಮಕ್ಕಳನ್ನು ಸೇನೆಗೆ ಸೇರಿಸುತ್ತೇವೆ ಎಂದು ಹೇಳ್ತಾರೆ. ನಾವು ನೀವು ನಮ್ಮ ಮಕ್ಕಳನ್ನು ಸೇರಿಸುತ್ತೇವೆಯೇ ಎಂದು ಕುಟುಕಿದರು.

ನಾವು ನೀವು ನಮ್ಮ ಮಕ್ಕಳನ್ನು ಸೇರಿಸಿದರೆ ಈ ದೇಶ ಆಳುವಱ್ಯಾರು ಅದಕ್ಕೆ ನಾವು ನಮ್ಮ ಮಕ್ಕಳನ್ನು ಜಿಲ್ಲಾ ಹಾಗೂ ತಾಲ್ಲೂಕ ಪಂಚಾಯ್ತಿ ಚುನಾವಣೆಗೆ ನಿಲ್ಲಿಸುತ್ತೇವೆ. ಅವರಿಗೆ ರಾಜಕಾರಣದಲ್ಲಿ ಭದ್ರನೆಲೆ ಕಲ್ಪಿಸಲು ಪ್ರಯತ್ನಿಸುತ್ತೇವೆ ಎಂದರು.

ಇತ್ತೀಚೆಗೆ ನಡೆದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಯಲ್ಲಿ ಹಣದ ಹೊಳೆ ಹರಿದಿರುವ ಬಗ್ಗೆ ಪ್ರಸ್ತಾಪಿಸಿ, ನಾವೆಲ್ಲಾ ವಿಧಾನಸಭೆಗೆ ಆಯ್ಕೆಯಾದಾಗ ಹಿಂದಿನವರು ವ್ಯವಸ್ಥೆ ಕೆಟ್ಟು ಹೋಯ್ತು. ನಾವು ರಾಜಕಾರಣ ಮಾಡಲು ಸಾಧ್ಯವಿಲ್ಲ ಎಂಬ ಅಸಹಾಯಕತೆಯನ್ನು ತೋಡಿಕೊಳ್ಳುತ್ತಿದ್ದರು. ಆದರೆ ಈಗ ನಾವು ಅಂತಹ ಮಾತುಗಳನ್ನು ಹೇಳುವ ಸ್ಥಿತಿಯಲ್ಲಿಲ್ಲ ಎಂದು ಪ್ರಸ್ತುತ ರಾಜಕಾರಣದ ಪರಿಸ್ಥಿತಿ ಬಗ್ಗೆ ಬೆಳಕು ಚೆಲ್ಲಿದರು.

Write A Comment