ಕರ್ನಾಟಕ

ಆದಾಯ ತೆರಿಗೆ ಇಲಾಖೆ ಮುಂದೆ ವಾಚ್ ವಿವರ ಘೋಷಿಸುತ್ತೇನೆ : ಸಿದ್ದರಾಮಯ್ಯ

Pinterest LinkedIn Tumblr

sidduಬೆಂಗಳೂರು, ಮಾ.1- ದುಬಾರಿ ವಾಚ್ ಪ್ರಕರಣದ ವಿವಾದಕ್ಕೆ ತಾರ್ಕಿಕ ಅಂತ್ಯ ಹಾಡಲು ಈಗಾಗಲೇ ತಾವು ನಿರ್ಧರಿಸಿದ್ದು, ಮಾರ್ಚ್ ಅಂತ್ಯದೊಳಗಾಗಿ ಆದಾಯ ತೆರಿಗೆ ಇಲಾಖೆ ಮುಂದೆ ವಾಚ್ ವಿವರವನ್ನು ಘೋಷಣೆ ಮಾಡುವುದಾಗಿ ವಿಧಾನಸಭೆಯಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು. ಪ್ರತಿಪಕ್ಷಗಳು ವಾಚ್ ಪ್ರಕರಣವನ್ನು ಮುಂದಿಟ್ಟುಕೊಂಡು ಭಾರೀ ವಿವಾದ, ಗದ್ದಲ ಎಬ್ಬಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಈ ವಾಚ್ ನನಗೆ ಕೊಡುಗೆಯಾಗಿ ಬಂದದ್ದು. ಇದನ್ನು ಸರ್ಕಾರದ ವಶಕ್ಕೆ ಕೊಡುತ್ತೇನೆ ಎಂದು ಈ ಹಿಂದೆಯೇ ಹೇಳಿದ್ದೇನೆ.

ಹಾಗಾಗಿ ಈ ಪ್ರಕರಣವನ್ನು ಇಲ್ಲಿಯೇ ಮುಗಿಸಬೇಕು ಎಂದರು.ವಾಚ್ ವಿವಾದಕ್ಕೆ ಫೆರಾ ಕಾಯ್ದೆ ಅನ್ವಯವಾಗಲ್ಲ. ವಿದೇಶಿ ಪ್ರಜೆಯೊಬ್ಬರಿಂದ ಕೊಡುಗೆಯಾಗಿ ನಾನು ಸ್ವೀಕರಿಸಿದ್ದರೆ ಅದು ಫೆರಾ ಕಾಯ್ದೆ ವ್ಯಾಪ್ತಿಗೆ ಬರುತ್ತಿತ್ತು. ಆದರೆ, ಅದನ್ನು ಅನಿವಾಸಿ ಭಾರತೀಯರಿಂದ ಉಡುಗೊರೆಯಾಗಿ ಪಡೆದಿದ್ದೇನೆ ಎಂದರು.

ನನಗೆ ಈ ವಾಚ್ ನೀಡಿದ ಡಾ.ಗಿರೀಶ್‌ಚಂದ್ರ ವರ್ಮ ಅವರು ದುಬೈನಲ್ಲಿದ್ದರು. ಅವರು ಕರ್ನಾಟಕದವರು. ಹಾಗಾಗಿ ಅನಿವಾಸಿ ಭಾರತೀಯರು ಫೆರಾ ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದರು. ಆದರೂ ಕೂಡ ಫೆರಾ ಕಾಯ್ದೆ ಸಂಬಂಧ ಹಲವಾರು ವಿಷಯಗಳನ್ನು ಪ್ರಸ್ತಾಪ ಮಾಡುವ ಮೂಲಕ ನನ್ನ ತೇಜೋವಧೆ ಮಾಡುವ ಯತ್ನ ನಡೆಯುತ್ತಿದೆ. ನಿಲುವಳಿ ಸೂಚನೆ ಮಂಡಿಸಿದ ಮೇಲೆ ಅದರ ವ್ಯಾಪ್ತಿಗೆ ವಾಚ್ ವಿವಾದ ಬರುವುದೋ ಇಲ್ಲವೋ ಎಂಬುದನ್ನು ಗಮನಿಸಬೇಕು. ಬರುತ್ತೆ ಎಂದಾದರೆ ವಿಧಾನಸಭಾಧ್ಯಕ್ಷರ ಮನವೊಲಿಸಬೇಕು. ಅವರು ಒಪ್ಪಿದ ನಂತರ ನಿಲುವಳಿ ಸೂಚನೆ ವ್ಯಾಪ್ತಿಗೆ ಬರುತ್ತದೋ, ಇಲ್ಲವೋ ಎಂಬುದು ತೀರ್ಮಾನವಾಗಬೇಕು. ಆದರೂ ಕೂಡ ಇಷ್ಟೆಲ್ಲ ವಿವರವಾಗಿ ಮಾತನಾಡುತ್ತಿದ್ದೀರಾ ಎಂದು ತಿರುಗೇಟು ನೀಡಿದರು.

ನಿಲುವಳಿ ಪೂರ್ವಭಾವಿ ಪ್ರಸ್ತಾವನೆಯ ವೇಳೆ ಈ ರೀತಿ ಸವಿಸ್ತಾರವಾದ ವಿವರಣೆ ನೀಡುವುದು ಒಳ್ಳೆಯ ಬೆಳವಣಿಗೆ ಅಲ್ಲ. ಈ ರೀತಿ ಯಾವುದೇ ಕಾರಣಕ್ಕೂ ಮಾತನಾಡಬಾರದು ಎಂದ ಅವರು, ನಾನು ಮಾರ್ಚ್‌ನಿಂದ ಜೂನ್‌ನೊಳಗೆ ಆದಾಯ ತೆರಿಗೆ ಇಲಾಖೆಗೆ ಇದರ ವಿವರ ಸಲ್ಲಿಸುತ್ತೇನೆ ಎಂದರು.

Write A Comment