ಕರ್ನಾಟಕ

ಉಭಯ ಸದನಗಳಲ್ಲೂ ಸಿಎಂಗೆ ಉಡುಗೊರೆಯಾಗಿ ಬಂದ ವಾಚ್ ನದ್ದೇ ಗದ್ದಲ

Pinterest LinkedIn Tumblr

vidhanaಬೆಂಗಳೂರು, ಮಾ.1-ನಿರೀಕ್ಷೆಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದುಬಾರಿ ವಾಚ್ ಪ್ರಕರಣ ಉಭಯ ಸದನಗಳಲ್ಲೂ ಪ್ರತಿಧ್ವನಿಸಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ತೀವ್ರ ಕೋಲಾಹಲ ಸೃಷ್ಟಿಸಿತು. ಪರಿಷತ್‌ನಲ್ಲಿಂದು ಬೆಳಿಗ್ಗೆ ಕಲಾಪ ಪ್ರಾರಂಭವಾಗುತ್ತಿದ್ದಂತೆ ಸಭಾಪತಿ ಡಿ.ಎಚ್.ಶಂಕರ ಮೂರ್ತಿ ಅವರು ಸದನಕ್ಕೆ ನೂತನ ಸದಸ್ಯರ ಪರಿಚಯ ಹಾಗೂ ಸಂತಾಪ ಸೂಚಿಸಲು ನಿರ್ಣಯವನ್ನು ಮಂಡಿಸಿದರು. ಬಳಿಕ ಪ್ರಶ್ನೋತ್ತರ ಕಲಾಪವನ್ನು ಕೈಗೆತ್ತಿಕೊಳ್ಳಲು ಮುಂದಾದರು. ಈ ವೇಳೆ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ನಿಯಮ 59ರಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದುಬಾರಿ ವಾಚ್ ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚೆಗೆ ಅವಕಾಶ ನೀಡಬೇಕೆಂದು ಸಭಾಪತಿಗಳಲ್ಲಿ ಮನವಿ ಮಾಡಿದರು.

ಇದಕ್ಕೆ ಸಭಾನಾಯಕ ಎಸ್.ಆರ್.ಪಾಟೀಲ್, ಸಚಿವರಾದ ಶಿವರಾಜ್ ತಂಗಡಗಿ, ಡಾ.ಎಚ್.ಸಿ.ಮಹದೇವಪ್ಪ, ಎಚ್.ಎಸ್.ಮಹದೇವಪ್ರಸಾದ್, ಅಭಯಚಂದ್ರ ಜೈನ್, ಕೃಷ್ಣಭೈರೇಗೌಡ, ಸದಸ್ಯರಾದ ಮೋಟಮ್ಮ, ವೀರಣ್ಣ ಮತ್ತಿಕಟ್ಟಿ, ಐವಾನ್ ಡಿಸೋಜಾ, ಮುಖ್ಯ ಸಚೇತಕ ಆರ್.ವಿ.ವೆಂಕಟೇಶ್ ಮತ್ತಿತರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ರಾಜ್ಯದಲ್ಲಿ ನೂರಾರು ಜ್ವಲಂತ ಸಮಸ್ಯೆಗಳಿವೆ. ಬರಗಾಲ, ವಿದ್ಯುತ್, ಕುಡಿಯುವ ನೀರು ಸೇರಿದಂತೆ ಅನೇಕ ಸಮಸ್ಯೆ ತಾಂಡವವಾಡುತ್ತಿವೆ. ಇವುಗಳ ಬಗ್ಗೆ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಬೇಕಿದೆ. ಪ್ರತಿಪಕ್ಷದ ಸದಸ್ಯರು ಅನಗತ್ಯ ವಿಷಯಗಳನ್ನು ಕೈಗೆತ್ತಿಕೊಂಡು ಸದನವನ್ನು ಹಾಳು ಮಾಡುತ್ತಿದ್ದಾರೆ. ನಿಲುವಳಿ ಸೂಚನೆಯನ್ನು ಕೈಗೆತ್ತಿಕೊಳ್ಳಬಾರದು ಎಂದು ಒತ್ತಡ ಹಾಕಿದರು.

ಇದರಿಂದ ಕೆರಳಿದ ಪ್ರತಿಪಕ್ಷದ ಸದಸ್ಯರಾದ ಕೆ.ಬಿ.ಶಾಣಪ್ಪ, ರಾಮಚಂದ್ರಗೌಡ, ಬಿ.ಜೆ.ಪುಟ್ಟಸ್ವಾಮಿ, ಗಣೇಶ್ ಕಾರ್ನಿಕ್, ಕೋಟಾ ಶ್ರೀನಿವಾಸ ಪೂಜಾರಿ, ಅಶ್ವತ್ಥನಾರಾಯಣ ಮತ್ತಿತರರು ಆಡಳಿತ ಪಕ್ಷದ ವಿರುದ್ಧ ಮುಗಿಬಿದ್ದರು. ವಾಚ್ ಪ್ರಕರಣವನ್ನು ಸರ್ಕಾರ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದೆ. ಈ ಪ್ರಕರಣದಿಂದ ರಾಜ್ಯಕ್ಕೆ ಕೆಟ್ಟ ಹೆಸರು ಬಂದಿದೆ ಎಂದು ಆರೋಪಿಸಿದರು. ಹೀಗೆ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಆರೋಪ, ಪ್ರತ್ಯಾರೋಪ ನಡೆಯುತ್ತಿದ್ದಾಗೆ ಸಭಾಪತಿಗಳು, ಪ್ರತಿಪಕ್ಷದ ಸದಸ್ಯರು ನೀಡಿರುವ ನೋಟಿಸ್ ನಿಯಮ 59ರ ಅಡಿ ಚರ್ಚೆಗೆ ಅವಕಾಶ ನೀಡಬೇಕೇ, ಬೇಡವೇ ಎಂಬ ಬಗ್ಗೆ ನಂತರ ನಿರ್ಧರಿಸಲಾಗುವುದು. ಮೊದಲು ವಿಷಯ ಪ್ರಸ್ತಾವನೆಗೆ ಐದು ನಿಮಿಷ ಕಾಲಾವಕಾಶ ನೀಡುವುದಾಗಿ ತಿಳಿಸಿದರು.

ಈ ವೇಳೆ ಈಶ್ವರಪ್ಪ ವಿಷಯ ಪ್ರಸ್ತಾಪಿಸಿ ಮುಖ್ಯಮಂತ್ರಿಯವರಿಗೆ ದುಬಾರಿ ವಾಚ್ ಎಲ್ಲಿಂದ ಬಂತು? ಇದನ್ನು ಕೊಟ್ಟವರು ಯಾರು? ನನಗೆ ಉಡುಗೊರೆ ಬಂದಿದೆ ಎಂದು ಹೇಳಿದ್ದಾರೆ. ಯಾವ ಕಾರಣಕ್ಕಾಗಿ ಉಡುಗೊರೆ ಕೊಟ್ಟಿದ್ದಾರೆಂದು ಪ್ರಶ್ನಿಸಿದರು. ಈ ವೇಳೆ ಆಡಳಿತ ಪಕ್ಷದ ಸದಸ್ಯರು ವಿರೋಧ ವ್ಯಕ್ತಪಡಿಸಿದಾಗ ಇದು ನನ್ನ ಹಕ್ಕು. ನಾನು ಯಾರ ಬಳಿಯೂ ಭಿಕ್ಷೆ ಬೇಡುತ್ತಿಲ್ಲ. ವಿಷಯ ಪ್ರಸ್ತಾಪಿಸಲು ಸಭಾಪತಿಗಳು ಅವಕಾಶ ನೀಡಿರುವಾಗ ಕಾಂಗ್ರೆಸ್ ಸದಸ್ಯರು ಏಕೆ ವಿರೋಧಿಸಬೇಕು ಎಂದು ಪ್ರಶ್ನಿಸಿದರು.

ಹೀಗೆ ಈಶ್ವರಪ್ಪ ವಿಷಯ ಪ್ರಸ್ತಾಪಿಸಲು ಮುಂದಾದಾಗ ಕಾಂಗ್ರೆಸ್ ಸದಸ್ಯ ವಿ.ಎಸ್.ಉಗ್ರಪ್ಪ ಕ್ರಿಯಾ ಲೋಪ ಎತ್ತಿ ನಿಯಮ 59ರ ಅಡಿ ಚರ್ಚೆಗೆ ನೀಡಬೇಕಾದರೆ ಅದು ಸಾರ್ವಜನಿಕ ಮಹತ್ವದ ವಿಷಯವಾಗಿರಬೇಕು. ಈ ವಿಷಯವನ್ನು ಪ್ರಸ್ತಾಪ ಮಾಡುವುದೇ ಸದನದ ನಿಯಮಾವಳಿಗೆ ವಿರುದ್ಧವಾದುದು ಎಂದು ಹೇಳಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ ಹಾಗೂ ಜಗದೀಶ್‌ಶೆಟ್ಟರ್ ಅವರು ಧರಿಸಿದ್ದ ವಾಚ್‌ಗಳ ಭಿತ್ತಿಚಿತ್ರಗಳನ್ನು ಪ್ರದರ್ಶಿಸಿದರು. ಈ ಹಂತದಲ್ಲಿ ಸದನದಲ್ಲಿ ಮತ್ತೆ ಕೋಲಾಹಲ ಉಂಟಾಯಿತು. ಕಾಂಗ್ರೆಸ್ ಪಕ್ಷದ ಸದಸ್ಯರು ವಿರೋಧ ಪಕ್ಷದ ಸದಸ್ಯರ ಹಕ್ಕನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆಂದು ಬಿಜೆಪಿಯವರು ದೂರಿದರು. ಈ ವೇಳೆ ಕಾವೇರಿದ ವಾತಾವರಣ ನಿರ್ಮಾಣವಾಯಿತು.

ಆಡಳಿತ ಪಕ್ಷದವರ ಧೋರಣೆ ಖಂಡಿಸಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಸುಗಮ ಕಲಾಪ ನಡೆಯಲು ಅವಕಾಶ ಮಾಡಿಕೊಡಬೇಕೆಂದು ಡಿ.ಎಚ್.ಶಂಕರಮೂರ್ತಿಯವರು ಎಷ್ಟೇ ಮನವಿ ಮಾಡಿದರೂ ಪರಿಸ್ಥಿತಿ ತಿಳಿಯಾಗದ ಕಾರಣ ಸದನವನ್ನು ಹತ್ತು ನಿಮಿಷಗಳ ಕಾಲ ಮುಂದೂಡಲಾಯಿತು. ವಿಧಾನಸಭೆ: ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು, ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಳ್ಳಲು ಮುಂದಾಗುತ್ತಿದ್ದಂತೆ ಎದ್ದು ನಿಂತ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ದುಬಾರಿ ವಾಚ್ ಪ್ರಕರಣ ಪ್ರಸ್ತಾಪಿಸಲು ಮುಂದಾದರು. ಆಗ ಆಡಳಿತ ಪಕ್ಷದ ಹಲವು ಸದಸ್ಯರು ಎದ್ದು ನಿಂತು ಆಕ್ಷೇಪ ವ್ಯಕ್ತಪಡಿಸಿದರು.

ಪ್ರತಿಯಾಗಿ ಬಿಜೆಪಿ ಸದಸ್ಯರ ಏರಿದ ದನಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದಾಗ ಸದನದಲ್ಲಿ ಗದ್ದಲ ವಾತಾವರಣ ನಿರ್ಮಾಣವಾಗಿ ಯಾರು, ಏನು ಹೇಳುತ್ತಿದ್ದಾರೆ ಎಂಬುದೇ ಕೇಳದಂತಾಯಿತು. ಒಂದು ಹಂತದಲ್ಲಿ ಬಿಜೆಪಿ ಶಾಸಕರು ಮುಖ್ಯಮಂತ್ರಿ ವಾಚ್ ಧರಿಸಿರುವ ಚಿತ್ರವಿರುವ ಕಾಗದವನ್ನು ಪ್ರದರ್ಶಿಸಿದರೆ ಪ್ರತಿಯಾಗಿ ಕಾಂಗ್ರೆಸ್‌ನ ಹಲವು ಸದಸ್ಯರು, ಜಗದೀಶ್ ಶೆಟ್ಟರ್ , ಸಂಸದ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮತ್ತಿತರರು ವಾಚ್ ಧರಿಸಿರುವ ಭಾವಚಿತ್ರವಿರುವ ಕಾಗದಗಳನ್ನು ಪ್ರದರ್ಶಿಸಿದರು. ನಿಲುವಳಿ ಸೂಚನೆ ಪೂರ್ವಭಾವಿ ಪ್ರಸ್ತಾವನೆ ಮಂಡಿಸಲು ಅಡ್ಡಿಪಡಿಸಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ ಸದನದ ನಿಯಮಾವಳಿಯಲ್ಲಿ ಪೂರ್ವಭಾವಿ ಪ್ರಸ್ತಾವನೆಗೆ ಅವಕಾಶವೆಲ್ಲಿದೆ ಎಂದು ಪ್ರಶ್ನಿಸಿದರು.

ನಿಲುವಳಿ ಸೂಚನೆ ಅಡಿ ಈ ವಿಚಾರ ಪ್ರಸ್ತಾಪ ಮಾಡಲು ಬರುವುದಿಲ್ಲ ಎಂದಾಗ ಸಚಿವರಾದ ರೋಷನ್ ಬೇಗ್, ಜಾರ್ಜ್, ರಮಾನಾಥ್ ರೈ ಸೇರಿದಂತೆ ಹಲವು ಶಾಸಕರು ಬೆಂಬಲಕ್ಕೆ ನಿಂತರು. ಪ್ರತಿಯಾಗಿ ಬಿಜೆಪಿಯ ಬಸವಜರಾಜ ಬೊಮ್ಮಾಯಿ, ಸಿ.ಟಿ.ರವಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಅಪ್ಪಚ್ಚು ರಂಜನ್ ಸೇರಿ ಹಲವು ಸದಸ್ಯರು ಬೆಂಬಲಕ್ಕೆ ನಿಂತು ನಿಲುವಳಿ ಸೂಚನೆ ಪ್ರಸ್ತಾಪಕ್ಕೆ ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದರು.

ಆಗ ಸಭಾಧ್ಯಕ್ಷರು ನಿಲುವಳಿ ಸೂಚನೆ ಪೂರ್ವಭಾವಿ ಚರ್ಚೆ ಆರಂಭಿಸಿದ ಜಗದೀಶ್ ಶೆಟ್ಟರ್, ರಾಜ್ಯದಲ್ಲಿ ಬರ ಪರಿಸ್ಥಿತಿ ತೀವ್ರವಾಗಿದ್ದರೂ ಮುಖ್ಯಮಂತ್ರಿ ದುಬಾರಿ ವಾಚ್ ಕಟ್ಟಿದ್ದಾರೆ. ಇದನ್ನು ಯಾರು ಕೊಟ್ಟರು, ಎಲ್ಲಿಂದ ಬಂತು ಎಂಬ ಬಗ್ಗೆ ಚರ್ಚೆ ಆಗಬೇಕು. ವಾಚ್ ಎಂದರೆ ಸರ್ಕಾರ ಹೆದರುತ್ತಿದೆ. ಸ್ಪಷ್ಟವಾದ ಉತ್ತರ ನೀಡಬೇಕು, ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವ ಪರಿಸ್ಥಿತಿ ಉದ್ಭವವಾಗಿದೆ. ಸರ್ಕಾರ ಉತ್ತರ ನೀಡಲು ಹಿಂದೇಟು ಹಾಕುತ್ತಿದ್ದು, ಪ್ರಕರಣ ಮುಚ್ಚಿಹಾಕುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ವೈಯಕ್ತಿಕವಾಗಿ ದುಬಾರಿ ವಾಚ್ ಧರಿಸಲು ಆಕ್ಷೇಪವಿಲ್ಲ. ಆದರೆ ಜನರಿಂದ ಚುನಾಯಿತರಾದ ಶಾಸಕರು, ಸಚಿವರು, 5 ಸಾವಿರಕ್ಕೂ ಹೆಚ್ಚು ಮೌಲ್ಯದ ಉಡುಗೊರೆ ಪಡೆದಾಗ ಕಾನೂನು ರೀತಿ ದಾಖಲೆ ಸಲ್ಲಿಸಬೇಕು. ಸಿದ್ದರಾಮಯ್ಯ ಅವರು ಹೋರಾಟ, ಸಮಾಜವಾದದ ಹಿನ್ನೆಲೆಯಲ್ಲಿ ಬಂದವರು ಹಾಗೂ ಲೋಹಿಯಾ ಅವರ ಹಿಂಬಾಲಕರು. ಈ ವಾಚ್ ಬಗ್ಗೆ ಸ್ಪಷ್ಟನೆ ನೀಡಬೇಕು. ಡಾ.ಸುಧಾಕರ್ ಶೆಟ್ಟಿ ಎಂಬುವರು ವಾಚ್ ಕಳುವಿನ ಬಗ್ಗೆ ದೂರು ನೀಡಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ಡಾ.ಗಿರೀಶ್ ಅವರು ನೀಡಿದ್ದು ಎಂದಿದ್ದಾರೆ. ಅವರು ಕೊಟ್ಟ ಪ್ರಮಾಣ ಪತ್ರ ಏನು, ಎಲ್ಲಿ ಖರೀದಿಸಿದರು, ಯಾವಾಗ ಖರೀದಿಸಿದರು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದರು.

ಪ್ರಧಾನಿಯ ಸೂಟ್ ಬಗ್ಗೆ ಪ್ರಸ್ತಾಪಿಸುತ್ತಾರೆ, ಬಿಜೆಪಿ ಸಂಸದರ ಬಗ್ಗೆ ಸಂಸತ್ತಿನಲ್ಲಿ ಪ್ರಸ್ತಾಪಿಸಲು ಎಂದು ತಿರುಗೇಟು ನೀಡಿದರು. ಪದೇ ಪದೇ ಏರಿದ ದನಿಯಲ್ಲಿ ಕಾಂಗ್ರೆಸ್, ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯುತ್ತಲೇ ಇದ್ದು, ಒಂದು ಹಂತದಲ್ಲಿ ಗ್ರಾಮೀಣಾಭಿವೃದಧಿ ಸಚಿವ ಎಚ್.ಕೆ.ಪಾಟೀಲ್ ಪ್ರಶ್ನೋತ್ತರ ಕಲಾಪ ನಂತರ ನಿಲುವಳಿ ಸೂಚನೆಗೆ ಅವಕಾಶ ಮಾಡಿಕೊಡಿ ಎಂದು ಹೇಳಿದರು. ಸಭಾಧ್ಯಕ್ಷರು ಎಲ್ಲರ ಹೃದಯ ಅರಳುವಂತೆ ಪ್ರಸ್ತಾಪಿಸಿ ಎಂದಾಗ ಶೆಟ್ಟರ್ ಅವರು, ಮಾತನಾಡಲೇ ಬಿಡುವುದಿಲ್ಲ. ಇನ್ನು ಹೃದಯ ಅರಳುವಂತೆ ಮಾತನಾಡುವುದು ಹೇಗೆ ಎಂದು ಪ್ರಶ್ನಿಸಿದರು.ಸುದೀರ್ಘವಾಗಿ ವಾಚ್ ವಿಚಾರವಾಗಿಯೇ ಚರ್ಚೆ ನಡೆದರೂ ಸಿದ್ದರಾಮಯ್ಯ ಮೌನವಾಗಿ ಕುಳಿತು ಎಲ್ಲವನ್ನೂ ಆಲಿಸುತ್ತಿದ್ದರು.

Write A Comment