ಕರ್ನಾಟಕ

ಕೂಡ್ಲಿಗಿ: ಬೊಗ್ಗಲು ಓಬಳೇಶ್ವರ ಜಾತ್ರೆ

Pinterest LinkedIn Tumblr

obalaಕೂಡ್ಲಿಗಿ(ಬಳ್ಳಾರಿ ಜಿಲ್ಲೆ): ರಾಜ್ಯದಲ್ಲಿಯೇ ಅತಿ ವಿಶಿಷ್ಟ ಆಚರಣೆ ಎನ್ನಬಹುದಾದ ಬೊಗ್ಗಲು ಓಬಳೇಶ್ವರ ಜಾತ್ರೆ ಭಾನುವಾರ ರಾತ್ರಿ ವಿಜೃಂಭಣೆಯಿಂದ ಜರುಗಿತು. ಭಕ್ತರು ಹೂ ತೂರಿದಂತೆ ನಿಗಿ ನಿಗಿ ಕೆಂಡವನ್ನು ಬರಿಗೈಯಿಂದ ತೂರಿ ತಮ್ಮ ಭಕ್ತಿಯ ಪರಕಾಷ್ಟೆ ಮೆರೆದರು.

ತಾಲ್ಲೂಕಿನ ಹೊಸಹಟ್ಟಿ ಗ್ರಾಮದಲ್ಲಿ ಭಾನುವಾರ ರಾತ್ರಿ ಸುಮಾರು ಅರ್ಧ ಗಂಟೆ ಕಾಲ ಭಕ್ತರು ಬೆಂಕಿ ಕೆಂಡವನ್ನು ತೂರಿದರು. ಪ್ರತಿ ೩ ವರ್ಷಗಳಿಗೊಮ್ಮೆ ಈ ವಿಶಿಷ್ಟ ಜಾತ್ರೆ ನಡೆಯುತ್ತಿದ್ದು, ರಾತ್ರಿಯ ಕತ್ತಲಲ್ಲಿ ಕೆಂಡವನ್ನು ತೂರುವ ದೃಶ್ಯ ಕೆಂಡದ ಮಳೆಯೇನೋ ಎಂಬಂತೆ ಭಾಸವಾಗುತ್ತದೆ. ಹುರಿಮೆಯ ನೀನಾದದ ಮಧ್ಯೆ ಭಕ್ತರು ಭಾವಾವೇಶದಿಂದ ಕೆಂಡ ತೂರಾಡಿದರು.

ಹೊಸಹಟ್ಟಿ ಗ್ರಾಮದ ಆರಾಧ್ಯ ದೈವ ಬೊಗ್ಗುಲು ಓಬಳೇಶ್ವರ ಸ್ವಾಮಿ. ಸ್ಥಳೀಯರು ಇದನ್ನು ‘ಗುಗ್ಗರಿ ಹಬ್ಬವೆಂದೂ ಕರೆಯುತ್ತಾರೆ. ವಾಲ್ಮೀಕಿ ಜನಾಂಗದವರೇ ಹೆಚ್ಚಾಗಿ ವಾಸಿಸುವ ಈ ಗ್ರಾಮದಲ್ಲಿ ಬೇಡ ಸಂಸ್ಕೃತಿಯ ಆಚರಣೆ ಇಂದಿಗೂ ಉಳಿದುಕೊಂಡು ಬಂದಿದೆ. ಜಾತ್ರೆಗೂ ಮೊದಲು ೮ ದಿನಗಳವರೆಗೆ ಕಾಸುಮೀಸಲು, ಗಂಗೆಪೂಜೆಗಳು ಸಾಂಪ್ರದಾಯಿಕವಾಗಿ ನಡೆಯುತ್ತವೆ. ಹತ್ತು ಹಲವಾರು ವ್ರತ, ನಿಯಮಗಳಿವೆ. ಇವುಗಳನ್ನು ಪಾಲಿಸದ್ದಿದಲ್ಲಿ ಕೆಡುಕಾಗುತ್ತದೆ ಎಂಬ ನಂಬಿಕೆಯೂ ಇಲ್ಲಿದೆ

ಶಿವರಾತ್ರಿ ಅಮವಾಸ್ಯೆಗೂ ಮುಂಚೆ ನಡೆಯುವ ಈ ಜಾತ್ರೆಯಲ್ಲಿ ರಾತ್ರಿಯ ಕೆಂಡ ತೂರುವ ಉತ್ಸವಕ್ಕಾಗಿಯೇ ಕೆಂಡವನ್ನು ಸಿದ್ಧಪಡಿಸಲು ಕಟ್ಟಿಗೆಯ ರಾಶಿಯನ್ನು ಹಾಕಿ ಕೆಂಡ ಮಾಡಿ ಪೂಜಿಸಲಾಗುತ್ತದೆ. ಓಬಳೇಶ್ವರ ಸ್ವಾಮಿಯ ಪೂಜಾರಿ ಅಗ್ನಿ ಕುಂಡದ ಸ್ವಲ್ಪ ಭಾಗವನ್ನು ಮಣ್ಣಿನ ಮಡಕೆಯಲ್ಲಿ ಹಾಕಿ ದೇವಸ್ಥಾನದ ಒಳಗಿಡುತ್ತಾನೆ. ನಂತರ ಕೆಂಡ ತೂರವ ಹರಕೆ ಹೊತ್ತು, ಉಪವಾಸವಿರು ೨೫-೩೦ ಜನ ಭಕ್ತರು ಗಂಗೆ ಪೂಜೆ ನೆರವೇರಿಸಿ ಬಂದು ಕೆಂಡವನ್ನು ಬೊಗಸೆಯಲ್ಲಿ ತೆಗೆದುಕೊಂಡು ಒಬ್ಬರ ಮೈಮೇಲೊಬ್ಬರು ತೂರಾಡತೊಡಗುತ್ತಾರೆ. ಇಷ್ಟೆಲ್ಲ ಕೆಂಡ ತೂರಿದರೂ ಯಾರಿಗೂ ಸುಟ್ಟ ಗಾಯಗಳಾಗುವುದಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.

ಜಾತ್ರೆಯ ಹಿನ್ನೆಲೆ: ಬೊಗ್ಗುಲು ಎಂದರೆ ತೆಲುಗಿನಲ್ಲಿ ಬೆಂಕಿಯ ಕೆಂಡಗಳಿಂದಾಗುವ ಇದ್ದಿಲು ಎಂದರ್ಥ. ಇಲ್ಲಿನ ಪೂಜಾರಿ ಮನೆತನದ ಪೂರ್ವಿಕರು ಕಾಡಿನಲ್ಲಿ ಕಟ್ಟಿಗೆ ಕಡಿದು, ರಾತ್ರಿ ಸುಟ್ಟು ಬರುತ್ತಿದ್ದರು. ಬೆಳಗಿನಲ್ಲಿ ಇದ್ದಿಲುಗಳನ್ನು ಒಯ್ದು ಮಾರುತ್ತಿದ್ದರು. ಒಮ್ಮೆ, ಬೆಳಿಗ್ಗೆ ಇದ್ದಿಲು ತರಲು ಕಾಡಿಗೆ ಹೋದಾಗ, ಇದ್ದಿಲಿನ ರಾಶಿಗೇ ಬೆಂಕಿ ಹತ್ತಿಕೊಂಡು ಉರಿಯುತ್ತಿದ್ದುದರಿಂದ ತಮ್ಮ ದೇವರು ಇಲ್ಲಿಯೇ ಪ್ರತ್ಯಕ್ಷವಾಗಿದ್ದಾನೆಂಬ ನಂಬಿಕೆಯಿಂದ ಭಕ್ತರು ಕೆಂಡ ತೂರುವ ಸೇವೆಯನ್ನು ಆರಂಭಿಸಿದರು ಎಂದು ಪೂಜಾರಿ ಮನೆತನದ ಚಿನ್ನಪಲ್ಲಿ ಓಬಯ್ಯ, ಪಾಲಯ್ಯ ತಿಳಿಸುತ್ತಾರೆ.

ಕುರಿಹಟ್ಟಿ, ಕರಡಿಹಳ್ಳಿ, ಹುಲಿಕುಂಟೆ, ಭೀಮಸಮುದ್ರ, ಮಡಕಲಕಟ್ಟೆ, ಓಬಳಶೆಟ್ಟಿಹಳ್ಳಿ ಗ್ರಾಮಗಳ ಸಾವಿರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಈ ವಿಶಿಷ್ಟ ಜಾತ್ರೆ ನೋಡಲೆಂದೇ ಬೆಂಗಳೂರಿನ ಉದ್ಯಮಿಗಳಾದ ಕೆ.ಟಿ. ಬಂಡಾರಿ, ಡಿ.ಪಿ. ಭಟ್ ಬಂದಿದ್ದರು.

Write A Comment