ಕರ್ನಾಟಕ

ದೇಶದ ಅತ್ಯುನ್ನತ ನಗರವಾಗಿ ಬೆಂಗಳೂರು ಅಭಿವೃದ್ಧಿ: ವಜುಭಾಯಿವಾಲಾ

Pinterest LinkedIn Tumblr

vidhana_soudha_default (1)ಬೆಂಗಳೂರು, ಫೆ. ೨೯- ಬೆಂಗಳೂರು ನಗರ ಮತ್ತು ನಗರದ ಜನತೆಯ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ ಬದ್ಧವಾಗಿದ್ದು, ರಾಷ್ಟ್ರದ ಅತ್ಯುನ್ನತ ನಗರಗಳಲ್ಲಿ ಒಂದನ್ನಾಗಿ ಅಭಿವೃದ್ಧಿಪಡಿಸುವುದು ನಮ್ಮ ಧ್ಯೇಯವಾಗಿದೆ ಎಂದು ರಾಜ್ಯಪಾಲ ವಜುಭಾಯಿವಾಲಾ ಅವರು ತಿಳಿಸಿದ್ದಾರೆ.

ವಿಧಾನಮಂಡಲದ ಜಂಟಿ ಅಧಿವೇಶನವನ್ನುದ್ದೇಶಿಸಿ ಇಂದು ಭಾಷಣ ಮಾಡಿದ ಅವರು, ಬೆಂಗಳೂರು ಮೆಟ್ರೋ ರೈಲ್ವೆ ಯೋಜನೆಯ ಮೊದಲ ಹಂತದಲ್ಲಿ ಸುಮಾರು 42.3 ಕಿ.ಮೀ. ಮಾರ್ಗವನ್ನು ಪೂರ್ಣಗೊಳಿಸಬೇಕಾಗಿದ್ದು, ಈಗಾಗಲೇ 26 ಕಿ.ಮೀ. ಮಾರ್ಗ ಕಾರ್ಯನಿರ್ವಹಿಸುತ್ತಿದೆ. 72 ಕಿ.ಮೀ. ಮಾರ್ಗದ ಎರಡನೇ ಹಂತದ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳಿದರು.

ನಗರದ ಪ್ರಮುಖ ರಸ್ತೆಗಳನ್ನು ಒಂದು ಸಾವಿರ ಕೋಟಿ ರೂ. ಗಳ ಹೂಡಿಕೆಯೊಂದಿಗೆ ಅಭಿವೃದ್ಧಿಪಡಿಸಲಾಗುತ್ತಿದೆ. ನಗರದಲ್ಲಿ ಬಿಓಟಿ ಮಾದರಿಯಲ್ಲಿ ಸುಮಾರು 60 ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದೆ ಎಂದರು.

ಸಂಚಾರ ದಟ್ಟಣೆಯನ್ನು ಸುಲಭಗೊಳಿಸುವ ದೃಷ್ಟಿಯಿಂದ ಮೇಲ್ಸೇತುವೆ, ಗ್ರೇಡ್ ಸಪರೇಟರ್ ಮತ್ತು ಸಿಗ್ನಲ್ ಮುಕ್ತ ಕಾರಿಡಾರ್‌ಗಳನ್ನು ನಿರ್ಮಿಸಲಾಗುತ್ತಿದೆ ಎಂದರು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ 117 ಕೆರೆಗಳನ್ನು ಪುನಶ್ಚೇತನಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಮಾಳಗಳ ಆಲೂರು, ದೊಡ್ಡಬನಹಳ್ಳಿ, ವಲಗೆರಹಳ್ಳಿ ಮುಂತಾದ ಕಡಗಳಲ್ಲಿ ಬಹುಮಹಡಿ ವಸತಿ ಸಂಕೀರ್ಣಗಳನ್ನು ನಿರ್ಮಿಸಿ ಆರ್ಥಿಕವಾಗಿ ಹಿಂದುಳಿದವರಿಗೆ ಮನೆಗಳನ್ನು ಒದಗಿಸುವ ಯೋಜನೆಯನ್ನು ಕೈಗೆತ್ತಿಕೊಂಡಿದೆ ಎಂದರು.

ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣಾ ಸೇವೆಗಳನ್ನು ಹೆಚ್ಚಿಸಲು ಆರು ಸಂಸ್ಕರಣಾ ಘಟಕಗಳನ್ನು ಪ್ರಾರಂಭಿಸಲಾಗಿದೆ ಎಂದು ರಾಜ್ಯಪಾಲರು ಹೇಳಿದರು.

ಸಾಂಪ್ರದಾಯಿಕ ಸ್ವಾಗತ
ಇದಕ್ಕೂ ಮುನ್ನ ವಿಧಾನಸೌಧಕ್ಕೆ ಆಗಮಿಸಿದ ರಾಜ್ಯಪಾಲ ವಜುಭಾಯಿವಾಲಾ ಅವರನ್ನು ವಿಧಾನಸಭಾಂಗಣಕ್ಕೆ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು.

ವಿಧಾನಮಂಡಲದ ಉಭಯಸದನಗಳ ಪೀಠಾಧ್ಯಕ್ಷರಾದ ಡಿ.ಎಚ್. ಶಂಕರಮೂರ್ತಿ, ಕಾಗೋಡು ತಿಮ್ಮಪ್ಪ, ಮುಖ್ಯಮಂತ್ರಿ ಸಿದ್ಧರಾಮಯ್ಯ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಮುಂತಾದವರು ಹಾಜರಿದ್ದು, ರಾಜ್ಯಪಾಲರನ್ನು ಬರಮಾಡಿಕೊಂಡರು.

Write A Comment