ಕರ್ನಾಟಕ

ದೆಹಲಿಗೆ ಬರಲು ಸಿದ್ದುಗೆ ಹೈಕಮಾಂಡ್ ಬುಲಾವ್

Pinterest LinkedIn Tumblr

Sidduಬೆಂಗಳೂರು, ಫೆ. ೨೯- ಮುಖ್ಯಮಂತ್ರಿ ಸಿದ್ದರಾಮಯ್ಯನವರ ದುಬಾರಿ ವಾಚ್ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿರುವುದರಿಂದ ಸಿಟ್ಟಿಗೆದ್ದಿರುವ ಕಾಂಗ್ರೆಸ್ ವರಿಷ್ಠರು ವಿಧಾನಮಂಡಲದ ಅಧಿವೇಶನ ಮುಗಿದ ನಂತರ ದೆಹಲಿಗೆ ಬರುವಂತೆ ಹೈಕಮಾಂ‌ಡ್, ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸೂಚನೆ ನೀಡಿದೆ.

ದುಬಾರಿ ವಾಚ್ ಪ್ರಕರಣ ದೆಹಲಿ ಮಟ್ಟದಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಸಾಕಷ್ಟು ಮುಜುಗರ ಉಂಟುಮಾಡಿರುವ ಹಿನ್ನೆಲೆಯಲ್ಲಿ ಈ ಪ್ರಕರಣದ ಬಗ್ಗೆ ಸಂಪೂರ್ಣ ವಿವರ ನೀಡುವಂತೆ ಈಗಾಗಲೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಜ್ಯ ಕಾಂಗ್ರೆಸ್‌ನ ಉಸ್ತುವಾರಿ ನೋಡಿಕೊಳ್ಳುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರಿಗೆ ಸೂಚಿಸಿದ್ದಾರೆ.

ದುಬಾರಿ ವಾಚ್ ಪ್ರಕರಣ ಬಯಲಾಗುತ್ತಿದ್ದಂತೆಯೇ ಕಾಂಗ್ರೆಸ್ ವಲಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸು ಪಡೆದಿದ್ದು, ಎರಡು ದಿನಗಳ ಹಿಂದೆ ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಹೈಕಮಾಂಡ್‌ಗೆ ನೀಡಿದ್ದ ಸ್ಪಷ್ಟನೆ ವರಿಷ್ಠರಿಗೆ ತೃಪ್ತಿ ತಂದಿಲ್ಲ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಪಕ್ಷದ ವರಿಷ್ಠರು ಈ ತಿಂಗಳ 5ರ ನಂತರ ದೆಹಲಿಗೆ ಬರುವಂತೆ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಹಾಗೂ ಮುಖ್ಯಮಂತ್ರಿಗೆ ಸೂಚಿಸಿದ್ದಾರೆಂದು ಪಕ್ಷದ ಮೂಲಗಳು ಹೇಳಿವೆ. ಹೈಕಮಾಂಡ್‌ನ ಈ ಸೂಚನೆ ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿದ್ದು, ಹೈಕಮಾಂಡ್ ಮಟ್ಟದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂಬ ಸುದ್ದಿ ಚಾಲ್ತಿಯಲ್ಲಿದೆ.

ವಿಧಾನಸಭಾ ಉಪಚುನಾವಣೆ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಪಕ್ಷಕ್ಕೆ ಆದ ಹಿನ್ನಡೆ ಬಗ್ಗೆಯೂ ಹೈಕಮಾಂಡ್ ಅಸಮಾಧಾನಗೊಂಡಿದ್ದು, ಇದರ ಜೊತೆಗೆ ದುಬಾರಿ ವಾಚ್ ಪ್ರಕರಣವೂ ಸೇರಿ ಒಂದು ರೀತಿಯಲ್ಲಿ ಹೈಕಮಾಂಡ್ ಅಸಹನೆಗೆ ಕಾರಣವಾಗಿದೆ ಎನ್ನಲಾಗಿದೆ.

ವರದಿ ಕೇಳಿಲ್ಲ
ದುಬಾರಿ ವಾಚ್ ಪ್ರಕರಣದ ಬಗ್ಗೆ ಪಕ್ಷದ ಹೈಕಮಾಂಡ್ ಯಾವುದೇ ವರದಿ ಕೇಳಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಹೇಳಿದರು.

ವಿಧಾನಸಭೆಯ ಮೊಗಸಾಲೆಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ದುಬಾರಿ ವಾಚ್ ಪ್ರಕರಣದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಸ್ಪಷ್ಟನೆ ನೀಡಿರುವುದರಿಂದ ಈ ಪ್ರಕರಣವನ್ನು ಮುಗಿಸುವುದು ಒಳ್ಳೆಯದು ಎಂದರು.

Write A Comment