ಅಂತರಾಷ್ಟ್ರೀಯ

ವಿಯೆಟ್ನಾಂ: ಅವಳಿ ಮಕ್ಕಳಿಗೆ ಭಿನ್ನ ಅ‌ಪ್ಪಂದಿರು!

Pinterest LinkedIn Tumblr

Twins-Legsಹನೊಯಿ (ಎಪಿ): ಯಾವುದೇ ಮಗುವಿಗೆ ಒಬ್ಬ ತಂದೆ ಸಹಜ. ಅವಳಿ ಮಕ್ಕಳಿಗೂ ಇದು ಅನ್ವಯಿಸುವುದು ಸಾಮಾನ್ಯ. ಆದರೆ, ಅವಳಿ ಮಕ್ಕಳಿಗೆ ಭಿನ್ನ ಅಪ್ಪಂದಿರಿರುವ ಅತ್ಯಂತ ವಿರಳ ಎನ್ನಬಹುದಾದ ಪ್ರಕರಣವೊಂದು ವಿಯೆಟ್ನಾಂನಲ್ಲಿ ವರದಿಯಾಗಿದೆ.

ಹನೊಯಿಯಲ್ಲಿರುವ ತಮ್ಮ ಪ್ರಯೋಗಾಲದಲ್ಲಿ ಅವಳಿ ಮಕ್ಕಳ ಡಿಎನ್‌ಎ ಪರೀಕ್ಷೆಯ ವೇಳೆ ಭಿನ್ನ ಅಪ್ಪಂದಿರಿರುವ ಸಂಗತಿ ಬಯಲಾಗಿದೆ ಎಂದು ವಿಯೆಟ್ನಾಂ ಜೆನೆಟಿಕ್ ಅಸೋಸಿಯೇಷನ್ ಅಧ್ಯಕ್ಷರಾದ ಪ್ರೊ. ಲೆ ಡಿನ್ಹ ಲಾಂಗ್‌ ತಿಳಿಸಿದ್ದಾರೆ.

ಅಲ್ಲದೇ, 2011ರ ವರೆಗೂ ವಿಶ್ವದಾದ್ಯಂತ ಇಂತಹ ಏಳೇ ಏಳು ಪ್ರಕರಣಗಳು ವರದಿಯಾಗಿದ್ದವು. ವಿಯೆಟ್ನಾಂನಲ್ಲಿ ಇದು  ಮೊದಲ ಪ್ರಕರಣ ಎಂದೂ ಅವರು ತಿಳಿಸಿದ್ದಾರೆ. ಅವಳಿ ಮಕ್ಕಳ ಕುರಿತು ಹೆಚ್ಚಿನ ಮಾಹಿತಿ ನೀಡಲು ಅವರು ನಿರಾಕರಿಸಿದ್ದಾರೆ.

ಹೇಗೆ ಸಾಧ್ಯ?: ಅಂಡೋತ್ಪತ್ತಿ ಅವಧಿಯನ್ನು ಹೊರತುಪಡಿಸಿ ಒಂದರಿಂದ ಏಳು ದಿನಗಳ ಒಳಗೆ ಒಂದೇ ತಾಯಿಯ ಎರಡು ಅಂಡಾಣುಗಳು ಭಿನ್ನ ಪುರುಷರಿಂದ ಗರ್ಭ ಧರಿಸಿದರೆ ಇಂಥ ‘ಕೌತುಕ’ ಸಾಧ್ಯ ಎನ್ನುತ್ತಾರೆ ಲಾಂಗ್‌ .

ಚಿದಂಬರ್ ರಹಸ್ಯ: ಈ ರಹಸ್ಯದ ಕುರಿತು ಆನ್‌ಲೈನ್‌ ನ್ಯೂಸ್‌ಪೇಪರ್‌ ಡಾನ್‌ ಟ್ರಿ ವರದಿ ಮಾಡಿದೆ.

‘ಅವಳಿ ಮಕ್ಕಳು ಒಂದೇ ಥರ ಕಾಣಿಸದ ಕಾರಣಕ್ಕಾಗಿ ತಮ್ಮ ಕುಟುಂಬದ ಒತ್ತಡಕ್ಕೆ ಮಣಿದ ಹವೊ ಬಿನ್ಹ ಪ್ರಾಂತ್ಯದ 34 ವರ್ಷದ ವ್ಯಕ್ತಿ, ಅವುಗಳ ಡಿಎನ್‌ಎ ಪರೀಕ್ಷೆಗೆ ಮುಂದಾದ. ಒಂದು ಮಗುವಿಗೆ ದಟ್ಟವಾದ ಅಲೆಅಲೆಯಾದ ಕೂದಲಿತ್ತು. ಮತ್ತೊಂದು ಮಗುವಿಗೆ ತೆಳುವಾದ ನೇರ ಕೂದಲಿತ್ತು’ ಎಂದು ವರದಿ ಹೇಳಿದೆ.

ಅಲ್ಲದೇ,‘ಆಸ್ಪತ್ರೆಯವರು ಹೀಗೇನಾದರೂ ಮಾಡಿರಬಹುದೇ ಎಂಬ ಅನುಮಾನವಿತ್ತು. ಆದರೆ, ಇಬ್ಬರೂ ಮಕ್ಕಳ ತಾಯಿ ಒಬ್ಬಳೇ ಎಂದು ಡಿಎನ್‌ಎ ಪರೀಕ್ಷೆ ಸ್ಷಷ್ಟಪಡಿಸಿತು’ ಎಂದಿದೆ ವರದಿ.

ಇನ್ನು, ‘ಎರಡೂ ಮಕ್ಕಳ ವಯಸ್ಸು ಎರಡು ವರ್ಷ. ಅವು ಒಂದೇ ದಿನ ಜನಿಸಿದ್ದು, ಒಂದೇ ಲಿಂಗ ಹೊಂದಿವೆ’ ಎಂದೂ ಅದು ವರದಿ ಮಾಡಿದೆ.

Write A Comment