ಕರ್ನಾಟಕ

ಕೇಸರಿ ರುಮಾಲು- ಗಾಂಭೀರ್ಯದ ಕುಶಲೋಪರಿ ರಾಜ್ಯಪಾಲರ ಭಾಷಣದ ಸುತ್ತಮುತ್ತ

Pinterest LinkedIn Tumblr

vaju-finalಬೆಂಗಳೂರು: ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲು ಆಗಮಿಸಿದ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು.

ರಾಜಭವನದಿಂದ ವಿಧಾನಸೌಧದ ಪೂರ್ವ ದ್ವಾರದವರೆಗೆ ಕಾರಿನಲ್ಲಿ ಅಶ್ವಾರೂಢ ಪೋಲೀಸರ ಬೆಂಗಾವಲಿನಲ್ಲಿ ಆಗಮಿಸಿದ ರಾಜ್ಯಪಾಲರಿಗೆ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ, ಸಭಾಪತಿ ಡಿ.ಎಚ್. ಶಂಕರಮೂರ್ತಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಇವರುಗಳು ಪುಷ್ಪಗುಚ್ಛ ನೀ‌ಡಿ ಬರಮಾಡಿಕೊಂ‌ಡರು.

ವಿಧಾನಸೌಧದ ನೆಲಮಹಡಿಯಿಂದ ವಿಧಾನಸಭೆ ಇರುವ ಮೊದಲ ಮಹಡಿಗೆ ಲಿಫ್ಟ್‌ನಲ್ಲಿ ಆಗಮಸಿದ ಸಭಾಧ್ಯಕ್ಷರಿಗೆ ಕೆಂಪು ಹಾಸಿನ ಸ್ವಾಗತ ಕೋರಿ ಬರ ಮಾಡಿಕೊಳ್ಳಲಾಯಿತು. ವಿಧಾನಸಭೆಯ ಒಳಗೆ ರಾಜ್ಯಪಾಲರು ಬರುತ್ತಿದ್ದಂತೆಯೇ ಸದಸ್ಯರೆಲ್ಲರೂ ಎದ್ದುನಿಂತು ಗೌರವ ಸಲ್ಲಿಸಿದರು. ಸದಸ್ಯರಿಗೆ ಕೈ ಮುಗಿಯುತ್ತಾ ವಿಧಾನಸಭಾಧ್ಯಕ್ಷರ ಪೀಠಕ್ಕೆ ಆಗಮಿಸಿದ ರಾಜ್ಯಪಾಲರು, ರಾಷ್ಟ್ರಗೀತೆಯ ನಂತರ ಭಾಷಣವನ್ನು ಓದಲು ಆರಂಭಿಸಿದರು.

ರಾಜ್ಯಪಾಲ ವಜುಭಾಯಿ ವಾಲಾ ಹಿಂದಿಯಲ್ಲಿ ಭಾಷಣ ಓದಿದರು. ಭಾಷಣದ ಪ್ರತಿಗಳನ್ನು ಕನ್ನಡ, ಹಿಂದಿ, ಇಂಗ್ಲಿಷ್ ಮೂರು ಭಾಷೆಗಳಲ್ಲೂ ಮುದ್ರಿಸಲಾಯಿತು.

ರಾಜ್ಯಪಾಲರು 31 ಪುಟಗಳ ಭಾಷಣವನ್ನು ಓದಲು 50 ನಿಮಿಷ ತೆಗೆದುಕೊಂಡರು. ರಾಜ್ಯಪಾಲರು ಭಾಷಣವನ್ನು ಪೂರ್ಣವಾಗಿ ಮುಗಿಸಿದ ನಂತರ ಸದನದಲ್ಲಿ ರಾಷ್ಟ್ರಗೀತೆಯನ್ನು ನುಡಿಸಲಾಯಿತು.

ನಂತರ ರಾಜ್ಯಪಾಲರನ್ನು ಪೂರ್ವದ್ವಾರದವರೆಗೂ ಕರೆದೊಯ್ದು ಬೀಳ್ಕೊಡಲಾಯಿತು.

ಕೇಸರಿ ರುಮಾಲು – ನಿಶ್ಯಬ್ಧ

ರಾಜ್ಯಪಾಲರು ಭಾಷಣ ಓದುವಾಗ ಇಡೀ ಸದನ ನಿಶ್ಯಬ್ಧವಾಗಿ ರಾಜ್ಯಪಾಲರ ಭಾಷಣವನ್ನು ಆಲಿಸಿತು.

ಸಾಮಾನ್ಯವಾಗಿ ರಾಜ್ಯಪಾಲರ ಭಾಷಣದಲ್ಲಿ ಹೊಸ ವರದಿಗಳು ಹಾಗೂ ಸರ್ಕಾರದ ಪ್ರಗತಿಯನ್ನು ಓದುವಾಗ ಆಡಳಿತ ಪಕ್ಷದ ಸದಸ್ಯರು ಮೇಜುಕುಟ್ಟಿ ಸಂತಸ ವ್ಯಕ್ತಪಡಿಸುವ ಪರಿಪಾಠ ಇದೆಯಾದರೂ ಇಂದು ರಾಜ್ಯಪಾಲರ ಭಾಷಣ ಸಂದರ್ಭದಲ್ಲಿ ಯಾವುದೇ ಸದಸ್ಯರು ಮೇಜು ಕುಟ್ಟಲಿಲ್ಲ.

ರಾಜ್ಯಪಾಲರ ಭಾಷಣ ಮುಗಿದ ನಂತರ ಆಡಳಿತ ಪಕ್ಷದವರು ಮೇಜು ತಟ್ಟಿದರು.

ವಿಧಾನಮಂಡಲದ ಈ ಅಧಿವೇಶನಕ್ಕೆ ಎಂಇಎಸ್ ಸದಸ್ಯ ಸಂಬಾಜಿ ಪಾಟೀಲ್ ಕೇಸರಿ ರುಮಾಲು ಧರಿಸಿ ಗಮನ ಸೆಳೆದರು.

ಹಾಜರಿ

ಇಂದಿನ ವಿಧಾನಸಭಾ ಅಧಿವೇಶನದಲ್ಲಿ ವಿಧಾನಸಭಾ ಉಪಚುನಾವಣೆಯಲ್ಲಿ ಜಯಗಳಿಸಿದ ಸದಸ್ಯರಾದ ನಾರಾಯಣಸ್ವಾಮಿ ಹಾಗೂ ರಹೀಂ ಖಾನ್ ಹಾಜರಿದ್ದರು. ಆದರೆ ಶಿವನಗೌಡ ನಾಯಕ್ ಗೈರುಹಾಜರಾಗಿದ್ದರು.

ಪ್ರಮಾಣ ವಚನ

ರಾಜ್ಯಪಾಲರ ಭಾಷಣ ನಂತರ ಸದನ ಮತ್ತೆ ಸಮಾವೇಶಗೊಂಡಾಗ ವಿಧಾನಸಭೆಗೆ ಆಯ್ಕೆಯಾಗಿರುವ ಎ. ನಾರಾಯಣಸ್ವಾಮಿ ಹಾಗೂ ರಹೀಂ ಖಾನ್ ವಿಧಾನಸಭಾ ಸದಸ್ಯರಾಗಿ ಸದನದಲ್ಲಿ ಪ್ರಮಾಣವಚನ ಸೀಕರಿಸಿದರು.

ಎ. ನಾರಾಯಣಸ್ವಾಮಿ ಕನ್ನಡದಲ್ಲಿ, ರಹೀಂ ಖಾನ್ ಇಂಗ್ಲಿಷ್‌ನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಇಂದಿನ ಅಧಿವೇಶನಕ್ಕೆ ಜೆಡಿಎಸ್‌ನ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಗೈರುಹಾಜರಾಗಿದ್ದು ಗಮನ ಸೆಳೆಯಿತು.

ಉಭಯ ಕುಶಲೋಪರಿ
ರಾಜ್ಯಪಾಲರ ಭಾಷಣದ ಆರಂಭಕ್ಕೂ ಮುನ್ನ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಸದಸ್ಯರುಗಳು ಪರಸ್ಪರ ಹಸ್ತಲಾಘವ ನೀಡಿ ಉಭಯ ಕುಶಲೋಪರಿಯಲ್ಲಿ ತೊಡಗಿದ್ದು ಕಂಡು ಬಂತು.

Write A Comment