ಕರ್ನಾಟಕ

ಕೃಷಿ, ಉತ್ಪಾದನೆ, ಸೇವಾ ವಲಯ ಅಭಿವೃದ್ದಿಯ ಮೂಲ ಬುನಾದಿ: ಪ್ರಧಾನಿ ಮೋದಿ

Pinterest LinkedIn Tumblr

Modi

ಬೆಳಗಾವಿ: ಕೃಷಿ, ಉತ್ಪಾದನೆ ಮತ್ತು ಸೇವಾವಲಯಗಳು ದೇಶದ ಅಭಿವೃದ್ಧಿಯ ಮೂಲ ಬುನಾದಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದ್ದಾರೆ.

ಬೆಳಗಾವಿಯಲ್ಲಿ ಇಂದು ಆಯೋಜನೆಯಾಗಿದ್ದ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಸಾವಿರಾರು ರೈತರನ್ನು ಉದ್ದೇಶಿಸಿ ಮಾತನಾಡಿದರು. ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣನ ನಾಡು, ಕರ್ನಾಟಕದ ರೈತ ಬಂಧು ಭಗಿನಿಯರೇ ನಿಮಗೆಲ್ಲಾ ನಮಸ್ಕಾರ್…ಎಂದು ಪ್ರಧಾನಿ ನರೇಂದ್ರ ಮೋದಿ ಭಾಷಣ ಆರಂಭಿಸಿದರು. ಇದೇ ವೇಳೆ ವೇದಿಕೆ ಮೇಲಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಹುಟ್ಟುಹಬ್ಬದ ಶುಭ ಕೋರಿದರು.

ಈ ವೇಳೆ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆ ಸಂಬಂಧ ಮಾಹಿತಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು, ರೈತರಿಗಾಗಿಯೇ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯನ್ನು ಜಾರಿಗೆ ತರಲಾಗುತ್ತಿದ್ದು, ರೈತರ ಬೆಳೆ ನಾಶ ಸಂಬಂಧ ಇದು ಮಹತ್ವದ ಯೋಜನೆಯಾಗಿದೆ. ಯಾವುದೇ ಸಂದರ್ಭದಲ್ಲಿಯೂ ಬೆಳೆ ನಾಶವಾದರೆ ರೈತರು ಭಯಪಡುವ ಅಗತ್ಯವಿಲ್ಲ. ರೈತರ ಶ್ರಮ ನೀರು ಪಾಲಾಗಲು ನಾವು ಬಿಡುವುದಿಲ್ಲ. ರೈತರಿಗಾಗಿ ವಿಮಾ ಯೋಜನೆಯನ್ನು ಜಾರಿಗೆ ತರಲಾಗಿದೆ. ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಈ ಯೋಜನೆಯನ್ನು ಜಾರಿಗೆ ತಂದಿದ್ದರು. ಇದೀಗ ಅದೇ ಯೋಜನೆಯನ್ನು ಮತ್ತೆ ಜಾರಿಗೆ ತರಲಾಗುತ್ತಿದೆ. ರೈತರು ಇನ್ನು ಫಸಲು ಇಲ್ಲ ಯೋಜನೆಯ ಹಣವೂ ಇಲ್ಲ ಎಂದು ಕೊರಗುವ ಚಿಂತೆ ಇಲ್ಲ.

ಬೆಳೆ ನಾಶವಾದರೆ ಯೋಜನೆಯ ಹಣ ನೇರ ರೈತರಿಗೆ ಸೇರುತ್ತದೆ. ಮಾರುಕಟ್ಟೆಗೆ ರವಾನೆ ಮಾಡುವಾಗ ಬೆಳನಾಶವಾದರೂ ಕೂಡ ರೈತರು ಹಣ ಪಡೆಯಬಹುದು. ಮಳೆ ಬಾರದೇ ಬೆಳೆ ಬಾರದಿದ್ದರೆ, ಅಥವಾ ಬೆಳೆ ಬೆಳೆಯಲು ಎಲ್ಲ ರೀತಿಯಿಂದ ಸಿದ್ದಗೊಂಡ ರೈತ ಬೆಳೆ ಬಾರದೇ ನಷ್ಟ ಅನುಭವಿಸಿದರೆ ಅಂತಹ ರೈತರಿಗೂ ಪರಿಹಾರ ದೊರೆಯುತ್ತದೆ. ಯೋಜನೆಯನ್ನು ರೈತರು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಯೋಜನೆಯನ್ನು ಯಶಸ್ವಿಗೊಳಿಸಬೇಕು ಎಂದು ಮೋದಿ ಮನವಿ ಮಾಡಿಕೊಂಡರು.

ಇದೇ ವೇಳೆ ಯೂರಿಯಾ ಮಾಫಿಯಾ ತಡೆ ಕುರಿತಂತೆ ಕೇಂದ್ರ ಸಚಿವ ಅನಂತಕುಮಾರ್ ಅವರನ್ನು ಶ್ಲಾಘಿಸಿದ ನರೇಂದ್ರ ಮೋದಿ ಅವರು, ರೈತರ ಏಳ್ಗೆಗಾಗಿ ಕೇಂದ್ರ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಪ್ರಮುಖವಾಗಿ ತೀವ್ರ ರೂಪದಲ್ಲಿದ್ದ ರಸಗೊಬ್ಬರ ಸಮಸ್ಯೆಯನ್ನು ಸರ್ಕಾರ ಬಹುತೇಕ ಪರಿಷ್ಕರಿಸಿದೆ. ಹಿಂದೆಲ್ಲಾ ರಸಗೊಬ್ಬರಕ್ಕಾಗಿ ಪ್ರಧಾನಿ ಕಾರ್ಯಾಲಯಕ್ಕೆ ಸಾಕಷ್ಟು ಪತ್ರಗಳು ಬರುತ್ತಿದ್ದವು. ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಪತ್ರ ಬರೆದು ರಸಗೊಬ್ಬರ ಕೇಳುತ್ತಿದ್ದರು. ಆಗ ದೇಶದಲ್ಲಿ ಯೂರಿಯಾ ಕಾಳಸಂತೆ ತಾಂಡವವಾಡುತ್ತಿತ್ತು. ಆದರೆ ಸರ್ಕಾರ ಕಾಳಸಂತೆಯಲ್ಲಿ ಯೂರಿಯಾ ಮಾರಾಟವನ್ನು ನಿಷೇಧ ಮಾಡುವ ಮೂಲಕ ಯೂರಿಯಾ ಮಾಫಿಯಾವನ್ನು ತಡೆಗಟ್ಟಿದೆ. ಇದಕ್ಕಾಗಿ ಸಚಿವ ಅನಂತ ಕುಮಾರ್ ಅವರನ್ನು ಶ್ಲಾಘಿಸುತ್ತೇನೆ ಎಂದು ಮೋದಿ ಹೇಳಿದರು.

ಇನ್ನು 2017ರೊಳಗೆ ಎಲ್ಲ ರೈತರಿಗೂ ಸಾಯಿಲ್ ಹೆಲ್ತ್ ಕಾರ್ಡ್ ಗಳನ್ನು ವಿತರಿಸಲಾಗುತ್ತದೆ. ಸ್ಟಾರ್ಟ್ ಅಪ್ ಉತ್ತೇಜನಕ್ಕೆ ಕೇಂದ್ರ ಸರ್ಕಾರ ಸಿದ್ಧವಿದೆ. ಬಿತ್ತನೆ ಬೀಜ ವಿಚಾರದಲ್ಲಿ ರೈತರಿಗೆ ವಂಚನೆಯಾಗಕೂಡದು ಎಂದು ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ.ಕೃಷಿ, ಉತ್ಪಾದನೆ ಮತ್ತು ಸೇವಾವಲಯಗಳು ದೇಶದ ಅಭಿವೃದ್ದಿಯ ಬುನಾದಿಯಾಗಿದ್ದು, ಈ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಬೇಕಿದೆ. ಇನ್ನು ಕೃಷಿ ವಲಯದ ಅಭಿವೃದ್ಧಿಗೆ ನೀರು ತುಂಬಾ ಮುಖ್ಯ. ಹೀಗಾಗಿ ನಮ್ಮ ಸರ್ಕಾರ ನದಿ ಜೋಡಣೆ ಕುರಿತು ಚಿಂತಿಸುತ್ತಿದೆ ಎಂದು ಮೋದಿ ಹೇಳಿದರು.

Write A Comment