ಅಂತರಾಷ್ಟ್ರೀಯ

ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ; ಮೋದಿಗೆ ಅಮೆರಿಕ ಸಂಸದರ ಪತ್ರ

Pinterest LinkedIn Tumblr

modi222

ವಾಷಿಂಗ್ಟನ್ (ಪಿಟಿಐ): ಭಾರತದಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರದ ಕುರಿತು ಕಳವಳ ವ್ಯಕ್ತಪಡಿಸಿರುವ ಅಮೆರಿಕದ ಪ್ರಮುಖ 34 ಸಂಸದರು, ಅವರ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಮತ್ತು ಅಪರಾಧಿಗಳನ್ನು ಶಿಕ್ಷಿಸಲು ತತ್‌ಕ್ಷಣದ ಕ್ರಮ ತೆಗೆದುಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದ್ದಾರೆ.

‘ಧಾರ್ಮಿಕ ಅಲ್ಪಸಂಖ್ಯಾತರ ಮೂಲಭೂತ ಹಕ್ಕುಗಳ ರಕ್ಷಣೆಗೆ ಮತ್ತು ಅವರ ಮೇಲೆ ಹಿಂಸಾಚಾರ ಎಸಗುತ್ತಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಎಂಟು ಸೆನೆಟರ್‌ಗಳು ಒಳಗೊಂಡಂತೆ ಸಂಸದರು ಮೋದಿ ಅವರಿಗೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಫೆಬ್ರುವರಿ 25ರಂದು ಬರೆದ ಪತ್ರವನ್ನು ಮಾನವ ಹಕ್ಕುಗಳ ಆಯೋಗದ ಟಾಮ್‌ ಲಂಟೊಸ್‌ ಮಾಧ್ಯಮಗಳಿಗೆ ಶನಿವಾರ ಬಿಡುಗಡೆ ಮಾಡಿದ್ದು, ಇದರಲ್ಲಿ ಭಾರತದಲ್ಲಿನ ಕ್ರೈಸ್ತ, ಮುಸ್ಲಿಂ ಮತ್ತು ಸಿಖ್ ಸಮುದಾಯಗಳನ್ನು ನಡೆಸಿಕೊಳ್ಳುತ್ತಿರುವ ರೀತಿಯ ಕುರಿತು ಕಳವಳ ವ್ಯಕ್ತಪಡಿಸಲಾಗಿದೆ.

‘ಆರ್‌ಎಸ್‌ಎಸ್‌ನಂತಹ ಗುಂಪುಗಳ ಚಟುವಟಿಕೆಗಳನ್ನು ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸುತ್ತಿದ್ದೇವೆ. ಧರ್ಮ ಪ್ರಚೋದಿತ ಕಿರುಕುಳ ಮತ್ತು ಹಿಂಸಾಚಾರಗಳಿಂದ ಧಾರ್ಮಿಕ ಅಲ್ಪಸಂಖ್ಯಾತರನ್ನು ರಕ್ಷಿಸಲು ಮತ್ತು ಕಾನೂನಿನ ನಿಯಮಾವಳಿಗಳನ್ನು ಅನುಸರಿಸುವಂತೆ ಭದ್ರತಾ ಪಡೆಗಳಿಗೆ ಸೂಚನೆ ನೀಡುವಂತೆಯೂ ಮನವಿ ಮಾಡುತ್ತಿದ್ದೇವೆ’ ಎಂದು ಸಂಸದರು ಹೇಳಿದ್ದಾರೆ.

ಭಾರತದಲ್ಲಿ ಗೋಮಾಂಸ ಸೇವನೆ ಮೇಲಿನ ನಿಷೇಧದ ಕುರಿತು ಆತಂಕ ವ್ಯಕ್ತಪಡಿಸಿರುವ ಪತ್ರ, ಇದು ಮುಸ್ಲಿಂ ಸಮುದಾಯದ ವಿರುದ್ಧದ ಹಿಂಸೆಯನ್ನು ಪ್ರಚೋದಿಸಲು ಮತ್ತು ಉದ್ವಿಗ್ನತೆ ಹೆಚ್ಚಿಸಲು ಕಾರಣವಾಗುತ್ತಿದೆ ಎಂದು ಹೇಳಿದೆ.

Write A Comment