ಬೆಂಗಳೂರು, ಫೆ. ೨೪- `ಮಂತ್ರಿ ಸ್ಥಾನ ಯಾರೊಬ್ಬರ ಕುಟುಂಬದ ಆಸ್ತಿಯಲ್ಲ. ಯಾರನ್ನು ಮಂತ್ರಿ ಮಾಡಬೇಕು. ಯಾರನ್ನು ಮಾಡಬಾರದು ಎಂಬ ವಿವೇಚನಾಧಿಕಾರ ಮುಖ್ಯಮಂತ್ರಿ ಹಾಗೂ ಪಕ್ಷದ ಅಧ್ಯಕ್ಷರಿಗೆ ಇರುತ್ತದೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ಇಂದಿಲ್ಲಿ ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರು ನೀಡುವ ಯಾವುದೇ ಜವಾಬ್ದಾರಿಯನ್ನು ವಿನಮ್ರವಾಗಿ ನಿಭಾಯಿಸಲು ಪಕ್ಷದ ಕಾರ್ಯಕರ್ತನಾಗಿ ಸಿದ್ಧನಿದ್ದೇನೆ. ಅವರು ಕೈಗೊಳ್ಳುವ ನಿರ್ಧಾರಕ್ಕೆ ನನ್ನ ಸಂಪೂರ್ಣ ಸಹಕಾರವಿರುತ್ತದೆ ಎಂದರು.
ಸದ್ಯದಲ್ಲೆ ಸಚಿವ ಸಂಪುಟ ಪುನರ್ ರಚನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದಾರೆ. ನಿಮಗೇನಾದರೂ ಸಚಿವ ಸ್ಥಾನ ಕಳೆದುಕೊಳ್ಳುವ ಆತಂಕವಿದೆಯೇ ಎಂಬ ಪ್ರಶ್ನೆಗೆ ಸಚಿವರು ಈ ರೀತಿ ಸ್ಪಷ್ಟನೆ ನೀಡಿದರು.
ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣಾ ಫಲಿತಾಂಶದ ಬಗ್ಗೆ ಅವರ ಗಮನ ಸೆಳೆದಾಗ, ರಾಜ್ಯದ ಜನತೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ. ಅತಂತ್ರವಾಗಿರುವ 10 ಜಿಲ್ಲಾ ಪಂಚಾಯಿತಿಗಳಲ್ಲಿ ಅಧಿಕಾರ ಹಿಡಿಯಲು ಸಂವಿಧಾನಬದ್ಧ ಕ್ರಮ ಅನುಸರಿಸುವುದಾಗಿ ಹೇಳಿದರು.
ಈ ಚುನಾವಣೆ ಸ್ಥಳೀಯ ವಿಚಾರಗಳು ಹಾಗೂ ಸಮಸ್ಯೆಗಳಿಗೆ ಸಂಬಂಧಿಸಿದಂತೆ ನಡೆಯಲಿದೆ. ಹಾಗಾಗಿ ಕೆಲವೊಮ್ಮೆ ಕಾರ್ಯಕರ್ತರಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ಪಕ್ಷಕ್ಕೆ ಹಿನ್ನಡೆಯಾಗಿರಬಹುದು. ತಾವು ಪ್ರತಿನಿಧಿಸುವ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಒಂದೆರಡು ಕ್ಷೇತ್ರಗಳಲ್ಲಿ ನಮ್ಮ ವಿರುದ್ಧ ಜನಾಭಿಪ್ರಾಯ ವ್ಯಕ್ತವಾಗಿರಬಹುದು ಎಂದರು.
ಪಂಚಾಯಿತಿ ಫಲಿತಾಂಶದ ಬಗ್ಗೆ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ನೀಡಿರುವ ಅಭಿಪ್ರಾಯದ ಬಗ್ಗೆ ತಾವು ಪ್ರತಿಕ್ರಿಯಿಸುವುದಿಲ್ಲ. ಅವರ ರಾಜಕೀಯ ಅನುಭವದಷ್ಟು ನನಗೆ ವಯಸ್ಸಾಗಿಲ್ಲ. ದೊಡ್ಡವರ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸುವಷ್ಟು ದೊಡ್ಡವನಾಗಿಲ್ಲ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದುಬಾರಿ ವಾಚ್ ಬಗ್ಗೆ ಅವರ ಗಮನ ಸೆಳೆದಾಗ ಚುನಾವಣೆ ಸಂದರ್ಭದಲ್ಲಿ ಪ್ರತಿಪಕ್ಷಗಳಿಗೆ ಪ್ರಸ್ತಾಪಿಸಲು ಬೇರೆ ವಿಚಾರಗಳು ಇಲ್ಲದ ಕಾರಣ ಈ ವಿಚಾರವನ್ನು ದೊಡ್ಡದು ಮಾಡಿದರು ಎಂದು ಅವರು ಹೇಳಿದರು.