ಮನೋರಂಜನೆ

ಮಲಯ್‌ ಭಾಷೆಗೆ ತಮಿಳಿನ “ಕಬಾಲಿ’ ಡಬ್‌

Pinterest LinkedIn Tumblr

Kabali-20ರಜನಿಕಾಂತ್‌ ಅಭಿನಯದ ಚಿತ್ರಗಳು ಭಾರತದ ವಿವಿಧ ಭಾಷೆಗಳಿಗೆ ಡಬ್‌ ಆಗುವುದಲ್ಲದೆ, ಬೇರೆ ಬೇರೆ ದೇಶಗಳ ಭಾಷೆಗಳಿಗೂ ಡಬ್‌ ಅಗಿವೆ. ಇದೀಗ ಬಂದಿರುವ ಹೊಸ ಸುದ್ದಿ ಏನೆಂದರೆ, ರಜನಿಕಾಂತ್‌ ಅಭಿನಯದ ಹೊಸ ಚಿತ್ರ “ಕಬಾಲಿ’, ಮಲಯ್‌ ಭಾಷೆಗೆ ಡಬ್‌ ಆಗಲಿದೆ. ಈಗಾಗಲೇ ಮೇನಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಆಗ ಬರೀ ತಮಿಳಲ್ಲದೆ, ತೆಲುಗು, ಹಿಂದಿ, ಮಲಯ್‌ ಮುಂತಾದ ಭಾಷೆಗಳಲ್ಲೂ “ಕಬಾಲಿ’ ಬಿಡುಗಡೆಯಾಗಲಿದೆ.

ಭಾರತೀಯ ಭಾಷೆಗಳಾದರೆ ಓಕೆ, ಇದ್ಯಾಕೆ ಮಲಯ್‌ ಭಾಷೆ ಎಂದು ಆಶ್ಚರ್ಯವಾಗಬಹುದು. ಅದೇನೆಂದರೆ, “ಕಬಾಲಿ’ ಚಿತ್ರದ ಚಿತ್ರೀಕರಣವನ್ನು ಮಲೇಷ್ಯಾದ ಮೇಲಕ, ಕೊಲಲಂಪುರ್‌ ಸೇರಿದಂತೆ ಹಲವು ಕಡೆ ಚಿತ್ರೀಕರಣ ಮಾಡಲಾಗಿದೆ. ಮಲೇಷ್ಯಾ ಒಂದರಲ್ಲೇ ಸುಮಾರು ಮೂರು ಹಂತಗಳ ಚಿತ್ರೀಕರಣ ಮಾಡಲಾಗಿದೆ. ಎಲ್ಲರಿಗೂ ಗೊತ್ತಿರುವಂತೆ ಮಲೇಷ್ಯಾದಲ್ಲಿ ತಮಿಳು ಮಾತನಾಡುವ ಸಾಕಷ್ಟು ಜನರಿದ್ದಾರೆ. ಅದಲ್ಲದೆ ಅಲ್ಲಿಯ ಜನರು ಸಹ ರಜನಿಕಾಂತ್‌ ಅವರ ದೊಡ್ಡ ಅಭಿಮಾನಿಗಳಂತೆ. ಅದೇ ಕಾರಣಕ್ಕೆ, ಚಿತ್ರವನ್ನು ಮಲಯ್‌ ಭಾಷೆಗೆ ಡಬ್‌ ಮಾಡಿ, ಏಕಕಾಲಕ್ಕೆ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಯೋಚಿಸಿದೆ.

ಕಳೆದ ಆಗಸ್ಟ್‌ನಲ್ಲಿ ಶುರುವಾದ”ಕಬಾಲಿ’ ಚಿತ್ರದ ಚಿತ್ರೀಕರಣ, ಇದೀಗ ಬಹುತೇಕ ಪೂರ್ಣಗೊಂಡಿದೆ. ಮೊದಲು ಏಪ್ರಿಲ್‌ನಲ್ಲಿ ಹೊಸ ವರ್ಷದ ಸಂದರ್ಭದಲ್ಲಿ ಚಿತ್ರವನ್ನು ಬಿಡುಗಡೆ ಮಾಡಬೇಕು ಎಂದು ಚಿತ್ರತಂಡ ಯೋಚಿಸಿತ್ತಂತೆ. ಆದರೆ, ಚಿತ್ರದ ಬಿಡುಗಡೆ ಸ್ವಲ್ಪ ಮುಂದಕ್ಕೆ ಹೋಗಿದ್ದು, ಮೇನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶಿಸಿದ್ದಾರೆ ಪ. ರಂಜಿತ್‌. ಇನ್ನು ರಜನಿಕಾಂತ್‌ ಹೀರೋ ಆಗಿ ನಟಿಸಿದ ಮೊದಲ ಚಿತ್ರ “ಭೈರವಿ’ಯನ್ನು ನಿರ್ಮಿಸಿದ್ದ ಕಲೈಪುಲಿ ಎಸ್‌ ಧನು ಈ ಚಿತ್ರವನ್ನೂ ನಿರ್ಮಿಸುತ್ತಿದ್ದಾರೆ. ಇನ್ನು ರಜನಿಕಾಂತ್‌ ಎದುರು ನಾಯಕಿಯಾಗಿ ರಾಧಿಕಾ ಆಪ್ಟೆ ನಟಿಸಿದ್ದು, ಜೊತೆಗೆ ಕಲೈಅರಸನ್‌, ಕಿಶೋರ್‌, ದಿನೇಶ್‌ ರವಿ ಮುಂತಾದವರು ನಟಿಸಿದ್ದಾರೆ. ಇನ್ನು ಸಂತೋಷ್‌ ನಾರಾಯಣನ್‌ ಸಂಗೀತ ಸಂಯೋಜಿಸಿದರೆ, ಮುರಳಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
-ಉದಯವಾಣಿ

Write A Comment