ಬೆಂಗಳೂರು: ತೀವ್ರ ಚರ್ಚೆಗೆ ಕಾರಣವಾಗಿರುವ ತಮ್ಮ ಡೈಮಂಡ್ ವಾಚ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹರಾಜು ಹಾಕಲು ಮುಂದಾಗಿದ್ದಾರೆ.
ಈ ಬಗ್ಗೆ ವಿಧಾಸೌಧದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಸಿದ ಐಟಿ-ಬಿಟಿ ಸಚಿವ ಎಸ್.ಆರ್.ಪಾಟೀಲ್ ಅವರು, ವಾಚ್ ವಿಚಾರ ದೊಡ್ಡದೇನಲ್ಲ. ಸಂಪುಟದ ಎಲ್ಲಾ ಸಚಿವರು ಅವರ ಜೊತೆ ಇದ್ದೇವೆ ಎಂದರು. ಅಲ್ಲದೆ ಸಿಎಂ ವಾಚ್ ಹರಾಜು ಹಾಕುವ ಬಗ್ಗೆ ಸುಳಿವು ನೀಡಿದ ಸಚಿವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಚ್ ವಿಚಾರದಲ್ಲಿ ಜನರು ಮೆಚ್ಚುವ ನಿರ್ಣಯ ಕೈಗೊಳ್ಳಲಿದ್ದಾರೆ’ ಎಂದು ಹೇಳಿದರು.
‘ಮುಖ್ಯಮಂತ್ರಿಗಳಿಗೆ ವಾಚ್ ಉಡುಗೊರೆಯಾಗಿ ಬಂದರೆ ಅದನ್ನು ಪಡೆಯುವುದು ತಪ್ಪಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಸೂಟ್ ಪಡೆದಿರಲಿಲ್ಲವೇ?’ ಎಂದು ಸಚಿವರು ಮಾಧ್ಯಮದವರನ್ನು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರು ಡೈಮಂಡ್ ಲೇಪಿತ ಹ್ಯೂಬ್ಲೊಟ್ ಕಂಪನಿಯ ವಾಚ್ ಧರಿಸುತ್ತಿದ್ದು, ಅದರ ಬೆಲೆ ಅಂದಾಜು 50 ಲಕ್ಷದಿಂದ 70 ಲಕ್ಷ ರುಪಾಯಿ ಎಂದು ಜೆಡಿಎಸ್ ನಾಯಕ ಎಚ್ .ಡಿ.ಕುಮಾರಸ್ವಾಮಿ ಅವರು ಆರೋಪಿಸಿದ್ದರು. ಬಳಿಕ ವಾಚ್ ಪುರಾಣ ದೊಡ್ಡದಾಗಿ ಈಗ ಪ್ರತಿಪಕ್ಷಗಳು ಸಿಎಂ ವಿರುದ್ಧ ವಾಗ್ದಾಳಿ ನಡೆಸಲು ಅದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡಿವೆ.