ಕಠ್ಮಂಡು: ಸಿಬ್ಬಂದಿಗಳು ಸೇರಿ ಸುಮಾರು 21 ಮಂದಿ ಪ್ರಯಾಣಿಕರಿದ್ದ ವಿಮಾನವೊಂದು ನೇಪಾಳದ ಪರ್ವತಗಳಲ್ಲಿ ನಾಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ನೇಪಾಳದ ಪೋಖರಾದಿಂದ ಜಾಮ್ಸಮ್ ಗೆ ತೆರಳುತ್ತಿದ್ದ ಪುಟ್ಟ ವಿಮಾನ ಇಂದು ಬೆಳಗ್ಗೆ ಸುಮಾರು 8.30ರ ಹೊತ್ತಿನಲ್ಲಿ ನಾಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ವಿಮಾನದಲ್ಲಿ ಸಿಬ್ಬಂದಿಗಳು ಸೇರಿ 21 ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ. ಬೆಳಗ್ಗೆ 8.30ರವರೆಗೂ ವಿಮಾನ ವಾಯುಗೋಪುರದೊಂದಿಗೆ ನಿರಂತರ ಸಂಪರ್ಕದಲ್ಲಿತ್ತು. ಆದರೆ ಬೆಳಗ್ಗೆ 8.30ರ ಬಳಿಕ ವಿಮಾನದ ಸಂಪರ್ಕ ಕಡಿತವಾಯಿತು.
ನೇಪಾಳದ ಹಿಮಚ್ಛಾದಿತ ಪರ್ವತ ಪ್ರದೇಶದ ಬಳಿ ವಿಮಾನ ನಾಪತ್ತೆಯಾಗಿದ್ದು, ವಿಮಾನದ ಪತ್ತೆಗಾಗಿ ನೇಪಾಳ ಸೇನಾಪಡೆಗಳು ಹೆಲಿಕಾಪ್ಟರ್ ಗಳ ಮೂಲಕ ವಿಮಾನದ ಪತ್ತೆಕಾರ್ಯ ಆರಂಭಿಸಿದ್ದಾರೆ.
ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ನೇಪಾಳ ವಿಮಾನ ನಿಲ್ದಾಣ ಅಧಿಕಾರಿ ಯೋಗೇಂದ್ರ ಕುವರ್ ಅವರು, ವಿಮಾನ ಟೇಕ್ ಆಫ್ ಆದ ಬಳಿಕ ಸತತ 18 ನಿಮಿಷಗಳ ಕಾಲ ವಾಯುಗೋಪುರ ಸಂಪರ್ಕದಲ್ಲಿತ್ತು. ಆ ಬಳಿಕ ಸಂಪರ್ಕ ಕಡಿತಗೊಂಡಿದೆ. ವಿಮಾನ ಪೋಖರಾದಿಂದ ಜಾಮ್ಸಮ್ ಗೆ ತೆರಳುತ್ತಿತ್ತು. ಈ ನಡುವೆ ವಿಮಾನವನ್ನು ಇಳಿಸಲು ಯಾವುದೇ ನಿಲ್ದಾಣಗಳಿಲ್ಲ. ಬಹುಶಃ ವಿಮಾನ ಅಪಘಾತಕ್ಕೀಡಾಗಿರಬಹುದು ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ.
ನೇಪಾಳ ರಾಜಧಾನಿ ಕಠ್ಮಂಡುವಿನಿಂದ ಜಾಮ್ಸಮ್ ನಗರ ಸುಮಾರು 200 ಕಿ.ಮೀ ದೂರದಲ್ಲಿದ್ದು, ಪರ್ವತ ಪ್ರದೇಶಗಳಿಂದ ಕೂಡಿದೆ. ಜಾಮ್ಸಮ್ ನೇಪಾಳದ ಪ್ರಮುಖ ಪ್ರವಾಸಿ ನಗರವಾಗಿದ್ದು ಇಲ್ಲಿ ಸಾಕಷ್ಟು ಪ್ರವಾಸಿಗರು ಚಾರಣಕ್ಕೆ ತೆರಳುತ್ತಾರೆ. ಇಂದು ನಾಪತ್ತೆಯಾದ ವಿಮಾನದಲ್ಲಿನ ಪ್ರಯಾಣಿಕರು ಕೂಡ ಚಾರಣಕ್ಕೆಂದು ತೆರಳುವಾಗ ಈ ಘಟನೆ ಸಂಭವಿಸಿದೆ ಎಂದು ನೇಪಾಳ ಮಾಧ್ಯಮಗಳು ವರದಿ ಮಾಡಿವೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.