ನವದೆಹಲಿ: ದೇಶ ದ್ರೋಹದ ಆರೋಪ ಎದುರಿಸುತ್ತಿರುವ ಮತ್ತಿಬ್ಬರು ವಿದ್ಯಾರ್ಥಿಗಳನ್ನು ಬಂಧಿಸಿದ ಹಿನ್ನೆಲೆಯಲ್ಲಿ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸುವ ಅಗತ್ಯ ಇದೆ ಎಂದು ದೆಹಲಿ ಪೊಲೀಸರು ಹೈಕೋರ್ಟ್ ಗೆ ತಿಳಿಸಿದ್ದಾರೆ.
ನ್ಯಾಯಮೂರ್ತಿ ಪ್ರತಿಭಾ ರಾಣಿ ಅವರು ಕನ್ಹಯ್ಯ ಜಾಮೀನು ಅರ್ಜಿಯ ವಿಚಾರಣೆ ಆರಂಭಿಸುತ್ತಿದ್ದಂತೆ, ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಹೊಸ ಬೆಳವಣಿಗೆ ಹಿನ್ನೆಲೆಯಲ್ಲಿ ಆರೋಪಿಯನ್ನು 15 ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆಯುವ ಅಗತ್ಯ ಇದೆ ಎಂದು ಹೇಳಿದರು.
ದೇಶ ದ್ರೋಹ ಆರೋಪ ಎದುರಿಸುತ್ತಿರುವ ಉಮರ್ ಖಾಲಿದ್ ಹಾಗೂ ಅನಿರ್ಬನ್ ಭಟ್ಟಾಚಾರ್ಯ ನಿನ್ನೆ ತಡರಾತ್ರಿ ಪೊಲೀಸರಿಗೆ ಶರಣಾಗಿದ್ದು, ಈಗ ಪೊಲೀಸ್ ವಶದಲ್ಲಿದ್ದಾರೆ. ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಆರೋಪಿ ಕನ್ಹಯ್ಯ ಅವರನ್ನು 15 ದಿನ ತಮ್ಮ ವಶಕ್ಕೆ ಪಡೆಯುವ ಹಕ್ಕು ಪೊಲೀಸರಿಗೆ ಇದೆ ಎಂದು ಮೆಹ್ತಾ ವಾದಿಸಿದರು.
ಇನ್ನು ಕನ್ಹಯ್ಯ ಕುಮಾರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ಕೋರ್ಟ್ ನಿರ್ದೇಶನದಂತೆ ದೆಹಲಿ ಪೊಲೀಸರು ಸಲ್ಲಿಸಿದ ಪ್ರಗತಿ ವರದಿಯಲ್ಲಿ ತಮ್ಮ ಕಕ್ಷಿದಾರ ದೇಶ ವಿರೋಧಿ ಘೋಷಣೆ ಕೂಗಿದ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ ಎಂದು ಹೇಳಿದೆ. ಹೀಗಾಗಿ ಅವರಿಗೆ ಜಾಮೀನು ನೀಡಬೇಕು ಎಂದು ಮನವಿ ಮಾಡಿದರು.
ವಾದ ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು ವಿಚಾರಣೆಯನ್ನು ಫೆ,29ಕ್ಕೆ ಮುಂದೂಡಿದರು.