
ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಸ್ಥಳೀಯ ಬಿಜೆಪಿ ಮುಖಂಡ ಪುರುಷೊತ್ತಮ ಅವರನ್ನು ಚಾಕುವಿನಿಂದ ಇರಿದು ತಲೆ ಮೇಲೆ ಸಿಮೆಂಟ್ ಇಟ್ಟಿಗೆ( ಹಾಲೋಬ್ಲಾಕ್)ಎತ್ತಿಹಾಕಿ ಬರ್ಬರವಾಗಿ ಕೊಲೆ ದುರ್ಘಟನೆ ಯಲಹಂಕ ವೀರಸಾಗರ ಬಳಿ ನಡೆದಿದೆ.
ಚಿಕ್ಕಬೆಟ್ಟಹಳ್ಳಿಯ ಪುರುಷೋತ್ತಮ(೪೫)ಅವರನ್ನು ರಾತ್ರಿ ಚಿಕ್ಕಬೆಟ್ಟಹಳ್ಳಿ ಮುಖ್ಯರಸ್ತೆಯ ವೆಂಕಟೇಶ್ವರ ರಿಯಲ್ ಎಸ್ಟೇಟ್ ಮತ್ತು ಕೇಬಲ್ ನೆಟ್ವರ್ಕ್ ಕಚೇರಿಯಿಂದ ರಾತ್ರಿ ೯ರ ವೇಳೆ ಮೊಬೈಲ್ ಕರೆ ಮಾಡಿ ಕರೆಸಿಕೊಂಡ ದುಷ್ಕರ್ಮಿಗಳು ಅಲ್ಲಿಗೆ ಸಮೀಪದ ವೀರಸಾಗರ ಬಳಿ ಚಾಕುವಿನಿಂದ ಇರಿದು ತಲೆ ಮೇಲೆ ಹಾಲೋಬ್ಲಾಕ್ ಎತ್ತಿಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಕಚೇರಿಗೆ ಹೋದ ಪತಿ ತಡರಾತ್ರಿಯಾದರೂ ಮನೆಗೆ ವಾಪಾಸು ಬಾರದಿದ್ದರಿಂದ ಆತಂಕಗೊಂಡ ಪತ್ನಿ ಭಾರತಿ ಅವರು ಮೊಬೈಲ್ ಕರೆ ಮಾಡಿ ಮಾಡಿ ಸಾಕಾಗಿ ಸಂಬಂಧಿಕರೊಂದಿಗೆ ಹುಡುಕಾಟ ನಡೆಸಿದರೂ ಪುರುಷೋತ್ತಮ ಅವರು ಪತ್ತೆಯಾಗಲಿಲ್ಲ.
ಮುಂಜಾನೆ ಗಸ್ತು ತಿರುಗುತ್ತಿದ್ದ ಯಲಹಂಕ ಪೊಲೀಸರಿಗೆ ಮೃತದೇಹ ಪತ್ತೆಯಾಗಿದ್ದು ಕುಟುಂಬದವರಿಗೆ ಸುದ್ಧಿ ಮುಟ್ಟಿಸಿದ್ದಾರೆ,ಪುರುಷೋತ್ತಮ ಅವರ ಪತ್ನಿ ಭಾರತಿ ವಡೇರಹಳ್ಳಿ ಗ್ರಾಮ ಪಂಚಾಯತ್ ಸದಸ್ಯೆಯಾಗಿದ್ದಾರೆ.ದಂಪತಿಗೆ ರೋಹನ್(೧೫)ಹಾಗೂ ಚಿನ್ಮಯ(೧೦) ಎಂಬ ಇಬ್ಬರು ಮಕ್ಕಳಿದ್ದಾರೆ.
ಪುರುಷೋತ್ತಮ ಅವರು ಸ್ಥಳೀಯ ಬಿಜೆಪಿ ಮುಖಂಡರಾಗಿದ್ದು ಆರ್ಎಸ್ಎಸ್ನ ಒಡನಾಟ ಹೊಂದಿದ್ದರು.ಜಮೀನು ವಿವಾದದ ಹಾಗೂ ಹಳೆಯ ದ್ವೇಷದ ಹಿನ್ನಲೆಯಲ್ಲಿ ಈ ಕೊಲೆಯಾಗಿರಬಹುದು ಎಂದು ಶಂಕಿಸಲಾಗಿದೆ.ಯಲಹಂಕ ಪೊಲೀಸರು ಪ್ರಕರಣ ದಾಖಲಿಸಿ ದುಷ್ಕರ್ಮಿಗಳ ಪತ್ತೆಗಾಗಿ ತೀವ್ರ ಶೋಧ ನಡೆಸಿದ್ದಾರೆ ಎಂದು ಡಿಸಿಪಿ ಡಾ.ಹರ್ಷ ಅವರು ತಿಳಿಸಿದ್ದಾರೆ.