ಪ್ಯಾಂಪೋರೆ(ಜಮ್ಮು ಮತ್ತು ಕಾಶ್ಮೀರ): ದಕ್ಷಿಣ ಕಾಶ್ಮೀರದ ಪ್ಯಾಂಪೋರೆದಲ್ಲಿ ಭಾರತೀಯ ಸೇನೆ ಹಾಗೂ ಉಗ್ರರ ನಡುವಿನ ಕಾಳಗ ಮುಂದುವರೆದಿದೆ. ಕಾಳಗದಲ್ಲಿ ಆರ್ಮಿ ಕ್ಯಾಪ್ಟನ್ ಪವನ್ ಕುಮಾರ್ ಸೇರಿ ನಾಲ್ವರು ಯೋಧರು ಹುತಾತ್ಮರಾಗಿದ್ದು, ಓರ್ವ ನಾಗರಿಕ ಸಹ ಸಾವನ್ನಪ್ಪಿದ್ದಾನೆ.
ಜೆಕೆಇಡಿಐ ಕಟ್ಟಡದಲ್ಲಿ ಅಡಗಿ ಕುಳಿತಿರುವ ಉಗ್ರರ ಧಮನಕ್ಕೆ ಭಾರತೀಯ ಸೇನೆ ಪಣತೊಟ್ಟಿದ್ದು, ಕಳೆದ 15 ಗಂಟೆಗಳಿಂದ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಗುಂಡಿನ ಕಾಳಗದಲ್ಲಿ ಇಲ್ಲಿಯವರೆಗೂ ನಾಗರಿಕೆ ಸೇರಿ ನಾಲ್ವರು ಯೋಧರು ಸಾವನ್ನಪ್ಪಿದ್ದು, 14 ಯೋಧರಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಳೆದ ರಾತ್ರಿ ಪ್ಯಾಂಪೋರೆದಲ್ಲಿರುವ ಏಳು ಅಂತಸ್ತಿನ ಉದ್ಯಮಶೀಲತೆ ಅಭಿವೃದ್ಧಿ ಸಂಸ್ಥೆ(ಇಡಿಐ) ಕಟ್ಟಡದಲ್ಲಿ ಅವಿತಿದ್ದ ಉಗ್ರರು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ(ಸಿಆರ್ಪಿಎಫ್) ತುಕಡಿ ಮೇಲೆ ಗುಂಡಿನ ದಾಳಿ ನಡೆಸಿದ್ದು, ಅದರಲ್ಲಿ ಇಬ್ಬರು ಸಿಆರ್ ಪಿಎಫ್ ಸಿಬ್ಬಂದಿ ನಿನ್ನೆ ಮೃತಪಟ್ಟಿದ್ದರು. ಭಾನುವಾರ ಭಯೋತ್ಪಾದಕರ ವಿರುದ್ಧ ಕ್ಯಾಪ್ಟನ್ ಪವನ್ ಕುಮಾರ್ (23) ನೇತೃತ್ವದಲ್ಲಿ ಅರೆ ಸೇನಾ ವಿಶೇಷ ಪಡೆ ತುಕಡಿಯು ಕಾರ್ಯಾಚರಣೆ ಮುಂದುವರೆಸಿತ್ತು. ಗುಂಡಿನ ಘರ್ಷಣೆ ವೇಳೆಯಲ್ಲಿ ಕ್ಯಾಪ್ಟನ್ ಪವನ್ ಕುಮಾರ್ ತೀವ್ರವಾಗಿ ಗಾಯಗೊಂಡು ಬಳಿಕ ಸಾವನ್ನಪ್ಪಿದ್ದಾರೆ.
ಇಡಿಐ ಕಟ್ಟಡದಲ್ಲಿ ಉಗ್ರರು ಗ್ರೈನೇಡ್ ಸ್ಫೋಟಿಸಿದ ಪರಿಣಾಮ ಕಟ್ಟಡ ಬೆಂಕಿಗೆ ಆಹುತಿಯಾಗಿದ್ದು, ಕಟ್ಟಡದಿಂದ ದಟ್ಟ ಹೊಗೆ ಹೊರಬರುತ್ತಿದೆ. ಕಟ್ಟಡದಲ್ಲಿ 3 ಉಗ್ರರು ಅಡಗಿರುವ ಶಂಕೆ ವ್ಯಕ್ತವಾಗಿದ್ದು. ಉಗ್ರರ ವಿರುದ್ಧ ಭಾರತೀಯ ಸೇನೆ ಗುಂಡಿನ ದಾಳಿ ನಡೆಸಿದೆ.