ನಯಾರಾಯ್‌ಪುರ್ (ಛತ್ತೀಸ್‌ಗಢ), ಫೆ. ೨೧- ಬಡವರಿಗಾಗಿ 2022ರ ವೇಳೆಗೆ 5 ಕೋಟಿ ಮನೆಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಪ್ರಧಾನಿ ಮೋದಿ ಇಂದು ಇಲ್ಲಿ ಹೇಳಿದ್ದಾರೆ.
ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ದೇಶದಲ್ಲಿ ಇನ್ನು 5 ಕೋಟಿ ಕುಟುಂಬಗಳಿಗೆ ಸ್ವಂತ ಮನೆಗಳಿಲ್ಲ. ಇದನ್ನು ಗುರಿಯಾಗಿಟ್ಟುಕೊಂಡೆ 2022ರ ವೇಳೆಗೆ 5 ಕೋಟಿ ಮನೆಗಳನ್ನು ನಿರ್ಮಾಣ ಮಾಡಲಾಗುವುದು ಎಂದರು.
ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಇಲ್ಲಿ ಶಿಲಾನ್ಯಾಸ ನೆರವೇರಿಸಿ ಮಾತನಾಡುತ್ತಿದ್ದ ಪ್ರಧಾನಿ ಮೋದಿ, 2022 ರಲ್ಲಿ ದೇಶದ 75ನೇ ಸ್ವಾತಂತ್ರ್ಯ ವರ್ಷಾಚರಣೆ ಆಚರಿಸುತ್ತಿದ್ದೇವೆ. ಆಗ ನಮಗೆ ಎಂತಹ ಭಾರತ ಬೇಕು ಎಂದು ಜನ ಯೋಚಿಸುವಂತಾಗಬೇಕು ಎಂದರು.
ಈ ಯೋಜನೆ ಮೂಲಸೌಕರ್ಯ ಯೋಜನೆ ಅಲ್ಲ. ಇದನ್ನು ಕೈಗೊಳ್ಳುತ್ತಿರುವ ಬಡವರ ಕನಸನ್ನು ನನಸು ಮಾಡುವುದಾಗಿದೆ. ಈ ಯೋಜನೆಯಿಂದ ದೇಶದಲ್ಲಿ ಉದ್ಯೋಗ ಸೃಷ್ಟಿಯೂ ಆಗುತ್ತದೆ ಎಂದರು.
ದೇಶದಲ್ಲಿ ಕೌಶಲ್ಯಾಭಿವೃದ್ಧಿ ಆಗಬೇಕು. ಯುವಕರು ಉದ್ಯಮಗಳನ್ನು ಸ್ಥಾಪಿಸುವ ಮೂಲಕ ಉದ್ಯೋಗ ನೀಡವಂತಾಗಬೇಕು ಎಂದೂ ಪ್ರಧಾನಿ ಇದೇ ವೇಳೆ ಹೇಳಿದ್ದಾರೆ.