ಮನೋರಂಜನೆ

ಕಾಲುಗಳಿಲ್ಲದಿದ್ದರೇನೂ ಈಕೆ ವಿಶ್ವದ ಶ್ರೇಷ್ಠ ಈಜುಗಾರ್ತಿ

Pinterest LinkedIn Tumblr

meet-chinas4

ಈಗಲೂ ಈಕೆಯನ್ನು `ಬ್ಯಾಸ್ಕೆಟ್ ಬಾಲ್ ಗರ್ಲ್’ ಎಂತಲೇ ಚೀನಾದ ಜನ ಗುರುತಿಸುತ್ತಾರೆ. ಈ ಹೆಸರು ಬರಲು ಆಕೆಯೇನು ಬ್ಯಾಸ್ಕೆಟ್ ಬಾಲ್ ಕ್ರೀಡಾಪಟು ಏನಲ್ಲ.
ಈ ಹೆಸರಿನ ಹಿಂದೆ ಒಂದು ಕಣ್ಣೀರ ಕಥೆ ವ್ಯಥೆ ಇದೆ. ಕ್ವಿಯಾನ್ ಹಾಂಗ್‌ಯಾನ್ ಹುಡುಗಿ. ನಾಲ್ಕು ವರ್ಷದವಳಿದ್ದಾಗ ನಡೆದ ಅಪಘಾತ ಆಕೆಯ ಎರಡು ಕಾಲುಗಳನ್ನು ಕಳೆದುಕೊಳ್ಳುವಂತಾಯಿತು. ಎರಡು ವರ್ಷದವಳಿದ್ದಾಗಲೇ ಕ್ವಿಯಾನ್‌ಗೆ ಬಾಸ್ಕೆಟ್ ಬಾಲ್ ಆಟ ಎಂದರೆ ಬಲು ಇಷ್ಟ. ಆದರೆ ವಿಧಿ ಆಕೆಯನ್ನು ಆಟ ಆಡಲು ಬಿಡಲೇ ಇಲ್ಲ. ಅಪಘಾತದ ನಂತರ ಕಾಲು ಕಳೆದುಕೊಂಡು ಮೂಲೆಗುಂಪಾದ ಮಗುವಿಗೆ ಜಗತ್ತೇ ಶೂನ್ಯವಾಗಿತ್ತು. ಸ್ನೇಹಿತರೊಂದಿಗೆ ಆಡುವಂತಿಲ್ಲ, ಸೇರುವಂತಿಲ್ಲ, ವಿದ್ಯೆ ಕಲಿಯುವಂತಿಲ್ಲ.

ಮೊಮ್ಮಗಳ ಕಷ್ಟ ನೋಡಲು ಆಗದ ತಾತ, ಬ್ಯಾಸ್ಕೆಟ್ ಬಾಲ್‌ನ್ನು ಅರ್ಧಭಾಗ ಕತ್ತರಿಸಿ ಕೆಳಗಿನ ಭಾಗಕ್ಕೆ ಜೋಡಿಸಿದ. ಕೈಗಳನ್ನು ನೆಲಕ್ಕೆ ಊರಿಕೊಂಡು ಸುಸ್ತಾದಾಗ ಬಾಸ್ಕೆಟ್‌ಬಾಲ್‌ನ್ನು ಆಸರೆಯಾಗಿಟ್ಟುಕೊಂಡು ಕುಳಿತುಕೊಳ್ಳುವಂತೆ ತರಬೇತಿ ನೀಡುವಲ್ಲಿ ಯಶಸ್ವಿಯೂ ಆದ.

ಚೀನಾದಲ್ಲಿ ವಿಕಲಾಂಗ ಜನರ ಬಗ್ಗೆ ಅಷ್ಟೊಂದು ಪ್ರಚಾರ ಸಿಗುವುದಿಲ್ಲ. ಆದರೆ ಕ್ವಿಯಾನ್‌ಗೆ ಸಿಕ್ಕ ಪ್ರಚಾರ ಅಷ್ಟಿಷ್ಟಲ್ಲ. ದೇಶ ವಿದೇಶಗಳಿಂದ ಹಣಕಾಸಿನ ನೆರವಿನ ಪೂರವೇ ಹರಿದು ಬಂದಿತು.

2007ರಲ್ಲಿ ಆಕೆಗೆ 11 ವರ್ಷವಿದ್ದಾಗ ಬೀಜಿಂಗ್‌ನ ಪುನರ್‌ವಸತಿ ಕೇಂದ್ರದಲ್ಲಿ ಮೊದಲ ಬಾರಿಗೆ ಆಕೆಗೆ ಕೃತಕ ಕಾಲುಗಳನ್ನು ಅಳವಡಿಸಲಾಯಿತು.

ಕ್ವಿಯಾನ್ ಯಶೋಗಾಧೆ ಇಷ್ಟಕ್ಕೆ ಮುಗಿಯುವುದಿಲ್ಲ. ಏನಾದರೂ ಸಾಧನೆ ಮಾಡಬೇಕು ಎಂಬ ಛಲ, ಹಠ ಇತ್ತು. ಇಡಿ ವಿಶ್ವಕ್ಕೆ ತನ್ನ ಹೆಸರು ಪ್ರಚುರವಾಗಬೇಕೆಂಬ ಮಹದಾಸೆ ಇತ್ತು.

ವಿಕಲಾಂಗರು ಈಜುವುದನ್ನು ಕೇಳಿದ್ದ ಕ್ವಿಯಾನ್ ತಾನು ಏಕೆ ಈಜು ಕಲಿಯಬಾರದು ಅನಿಸಿದ್ದೆ ತಡ ವಿಶೇಷ ತರಬೇತಿ ಪಡೆದಳು.

ಮೊದ ಮೊದಲು ಈಜು ಕಷ್ಟವಾದರೂ ನಂತರದ ಸಮಯದಲ್ಲಿ ಕಠಿಣ ಶ್ರದ್ಧೆ, ಪರಿಶ್ರಮದಿಂದ ಈಜುವುದನ್ನು ಕರಗತ ಮಾಡಿಕೊಂಡಳು.

ಈಜುವುದನ್ನು ಪ್ರೀತಿಸತೊಡಗಿದಾಗ ಎಲ್ಲವೂ ಸುಲಭವಾಯಿತು.
ಸ್ಥಳೀಯ ಮಟ್ಟದಲ್ಲಿ ವಿಕಲಾಂಗರಿಗಾಗಿ ನಡೆದ ಈಜು ಸ್ಪರ್ಧೆಗಳಲ್ಲಿ ಹಂತ ಹಂತವಾಗಿ ಪದಕಗಳನ್ನು ಪಡೆದಳು. ಇದು ಅಂತರ ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರೇರಣೆಯಾಯಿತು.

2012ರಲ್ಲಿ ಲಂಡನ್‌ನಲ್ಲಿ ನಡೆದ ಅಂತರ ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಗೋಲ್ಡ್ ಮೆಡಲ್ ಪಡೆದಾಗ ವಿಶ್ವವೇ ಬೆರಗಾಗಿ ಹೋಯಿತು. ಚೀನಾದಲ್ಲಿ ನಡೆದ ರಾಷ್ಟ್ರೀಯ ಪ್ಯಾರಾ ಒಲಂಪಿಕ್ಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಜತೆಗೆ ಎರಡು ಬೆಳ್ಳಿ ಪದಕಗಳನ್ನು ಪಡೆದ ಕ್ವಿಯಾನ್ ಮತ್ತೆ ಸದ್ದು ಮಾಡಿದಳು.ಇಂದು ಕ್ವಿಯಾನ್ ಚೀನಾ ದೇಶದ ಜನರ ಮನೆಮಗಳಾಗಿದ್ದಾಳೆ.

Write A Comment