ಬೆಂಗಳೂರು, ಫೆ. ೨೧- ಡಾ.ರಾಜ್ ಕುಮಾರ್ ಹಾಗೂ ವರದರಾಜ್, ರಾಮ – ಲಕ್ಷ್ಮಣರಿದ್ದಂತೆ ಎಂದು ಹೇಳಿರುವ ಕೇಂದ್ರದ ಮಾಜಿ ಸಚಿವ ಹಾಗೂ ಸಂಸದ ಎಂ. ವೀರಪ್ಪ ಮೊಯಿಲಿ ಕನ್ನಡ ಚಿತ್ರರಂಗಕ್ಕೆ ಸದಭಿರುಚಿಯ ಚಿತ್ರಗಳನ್ನು ನೀಡಿದ ಸೋದರರ ಜೋಡಿ ಎಂದು ಗುಣಗಾನ ಮಾಡಿದರು.
ರಾಜ್ ಕುಮಾರ್ ಅವರಿಗೆ ಬದುಕಿನ ಕಾರಂಜಿಯಾಗಿ ವರದಪ್ಪ ಹಾಗೂ ಸ್ಪೂರ್ತಿಯ ಸಿಂಚನವಾಗಿ ಪಾರ್ವತಮ್ಮ ಕಾಣಿಸಿಕೊಂಡರು. ಅದರ ಫಲವೇ ರಾಜ್ ಕುಮಾರ್ ಅಂತಹ ಮಹಾನ್ ನಾಯಕ ನಟ ಕನ್ನಡ ಚಿತ್ರರಂಗಕ್ಕೆ ದೊರೆಯುವಂತಾಯಿತು ಎಂದು ಹೇಳಿದರು.
ನಗರದಲ್ಲಿಂದು ಆಯೋಜಿಸಿದ್ದ ಸಮಾರಂಭದಲ್ಲಿ ರಂಗಭೂಮಿ ಕಲಾವಿದೆ ಕೊತ್ತೂರು ಕೋಮಲಮ್ಮ ಹಾಗೂ ಚಲನಚಿತ್ರ ಕಲಾವಿದ ಡಿಂಗ್ರಿ ನಾಗರಾಜ್ ಅವರಿಗೆ ಎಸ್.ಪಿ. ವರದರಾಜ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ರಾಜ್ ಕುಮಾರ್ ಮನಸ್ಸು ಮಾಡಿದಿದ್ದರೆ, ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಬಹುದಿತ್ತು. ಆದರೂ ರಾಜಕೀಯಕ್ಕೆ ತಲೆಹಾಕದ ಶ್ರೇಷ್ಠ ವ್ಯಕ್ತಿ, ತ್ಯಾಗಿ ಹಾಗೂ ಮಹಾನ್ ಸಂತ ನಟ, ಇಂತಹ ಮಹಾನ್ ಸಂತ ನಟ ಯೋಗ್ಯತೆ ಪಡೆಯುವ
ಏಕೈಕ ನಟ ಡಾ. ರಾಜ್ ಕುಮಾರ್ ಎಂದು ಗುಣಗಾನ ಮಾಡಿದರು.
ಕನ್ನಡದ ಭಾಷೆಯ ಬಗ್ಗೆ ನಾಡಿನ ಜನರಲ್ಲಿ ಪ್ರಜ್ಞೆ ಮತ್ತು ಜಾಗೃತಿಯನ್ನು ಮೂಡಿಸಿದವರು. ಇಂದಿರಾ ಗಾಂಧಿಯವರು, ರಾಜ್ ಕುಮಾರ್ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಲು ಬಯಸಿದ್ದರು. ಆಗ ಅವರು ರಾಜಕಾರಣಕ್ಕೆ ಯಾವುದೇ ಕ್ಷಣದಲ್ಲೂ ಬರುವುದಿಲ್ಲ ಎಂದು ರಾಜಕೀಯ ಆಹ್ವಾನವನ್ನು ನಯವಾಗಿಯೇ ತಿರಸ್ಕರಿಸಿದ ವ್ಯಕ್ತಿ ರಾಜ್ ಕುಮಾರ್ ಅವರು, ಕೀರ್ತಿ, ಕಾಮನೆಯ ಹಿಂದೆ ಎಂದೂ ಹೋಗಲಿಲ್ಲ ಎಂದು ಹೇಳಿದರು.
ವರದರಾಜ್ ಅವರು ಎಲೆ ಮರೆಯ ಕಾಯಿಯಂತೆ ಇದ್ದು, ನಾಡಿಗೆ ರಾಜ್ ಕುಮಾರ್ ಅಂತಹ ಶ್ರೇಷ್ಠ ನಟರನ್ನು ನೀಡಿದ್ದಾರೆ. ಯಾವುದೇ ಪ್ರಚಾರದ ಅಬ್ಬರವಿಲ್ಲದೆ, ಶಾಸಕರ ಪಟ್ಟಿಯಲ್ಲಿ ನಿಲ್ಲುವ ಅಗ್ರಗಣ್ಯ ವ್ಯಕ್ತಿ ಹಾಗೂ ವಿನಯಶೀಲ ವರದಪ್ಪ ಅವರು ರಾಜ್ ಕುಮಾರ್ ಅವರ ಗುಣ, ನಡೆ ಅವರ ಮಕ್ಕಳಲ್ಲೂ ಬಂದಿದೆ. ರಾಜ್ ಕುಮಾರ್ ನಗುಮುಖ ವ್ಯಕ್ತಿತ್ವದ ಪ್ರತಿಭೆ. ಕನ್ನಡಕ್ಕೆ ತನ್ನ ಬದುಕನ್ನು ಮೀಸಲಿರಿಸಿದ ಶ್ರೇಷ್ಠ ವ್ಯಕ್ತಿಯೆಂದು ಹೇಳಿದರು.
ಬೇರೆ ಭಾಷೆಯ ಚಿತ್ರರಂಗಗಳಿಗೆ ಹೋಗಿದ್ದರೆ, ರಾಜ್ ಕುಮಾರ್ ಅಂತಹ ಮಹಾನದಿಯೆಂದು ಕನ್ನಡ ಚಿತ್ರರಂಗಕ್ಕೆ ಹಾಗೂ ಕನ್ನಡ ನಾಡಿಗೆ ಸಿಗುತ್ತಿರಲಿಲ್ಲ ಎಂದು ಹೇಳಿದರು.
ರಾಜ್ಯ ಸರ್ಕಾರದ ಅಸಡ್ಡೆ
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಲಭಿಸಿ, ಮೂರು-ನಾಲ್ಕು ವರ್ಷಗಳು ಕಳೆದಿದ್ದರೂ, ಅದರ ಲಾಭವನ್ನು ಕನ್ನಡಕ್ಕೆ ತರಲು ಆಗುತ್ತಿಲ್ಲ. ನೆರೆಹೊರೆಯ ಭಾಷೆಗಳಿಗಿರುವ ಅಭಿಮಾನ ಕನ್ನಡಿಗರಿಗಿಲ್ಲ. ಕನ್ನಡಿಗರು ದುರಭಿಮಾನಿಗಳು. ಕೇಂದ್ರ, ರಾಜ್ಯ ಸರ್ಕಾರಗಳು ಈ ವಿಷಯದಲ್ಲಿ ಅಸಡ್ಡೆ ತೋರಿಸುತ್ತಿವೆ ಎಂದು ಹರಿಹಾಯ್ದರು.
ಯುನೆಸ್ಕೊ ಸಂಸ್ಥೆ ಇಂದಿನ ದಿನವನ್ನು ತಾಯ್ನುಡಿಯ ದಿನಾಚರಣೆ ಎಂದು ಘೋಷಿಸಿದೆ. ಆದರೂ ಕೆಲವರು ಸಂಸ್ಕೃತ ಮತ್ತು ಇಂಗ್ಲಿಷ್ ಶ್ರೇಷ್ಠ ಎಂದು ಹೇಳುವ ಮಂದಿಯ ನಡುವೆಯೇ ಕನ್ನಡವೇ ಶ್ರೇಷ್ಠ. ಕನ್ನಡದಲ್ಲಿ ಆಲೋಚನೆ ಮಾಡಿದರೆ, ಉತ್ತಮ ಸಾಹಿತ್ಯವನ್ನು ರಚಿಸಿರುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ, ಜಯಂತ್ ಕಾಯ್ಕಿಣಿ, ನಟ ಶಿವರಾಜ್ ಕುಮಾರ್, ನಟಿ ಶ್ರುತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.