ಮೈಸೂರು: ನವೋದಯ ಕಾಲದ ಸಾಹಿತಿ, ಚುಟುಕು ಕವಿ ಡಾ. ಎಂ. ಅಕಬರ ಅಲಿ ಭಾನುವಾರ ಬೆಳಗ್ಗೆ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.
ಚುಟುಕು ಕಾವ್ಯವನ್ನೇ ತನ್ನ ಕಾವ್ಯಕ್ಷೇತ್ರವನ್ನಾಗಿಸಿಕೊಂಡಿದ್ದ ಕವಿ ಅಕಬರ ಅಲಿ, ಕನ್ನಡದಲ್ಲಿ ಮೊದಲ ಬಾರಿಗೆ ಕಾವ್ಯ ಸಂಕಲನವನ್ನು ಪ್ರಕಟಿಸಿದ (1951) ಕೀರ್ತಿ ಸಂಪಾದಿಸಿದ್ದರು. ಹುಟ್ಟಿದ್ದು ಬೆಳಗಾವಿ ಖಾನಾಪುರ ಜಿಲ್ಲೆಯ ಹುಕ್ಕೇರಿಯ ಉಳ್ಳೇಗಡ್ಡಿ ಖಾನಾಪುರದಲ್ಲಾದರೂ (1925) ಕಳೆದ ಅನೇಕ ವರ್ಷಗಳಿಂದ ಮೈಸೂರಿನಲ್ಲಿ ವಾಸವಿದ್ದರು.
ಅಧ್ಯಯನದಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಅಲಿ ಅವರು 1983ರಲ್ಲಿ ಸರ್ವಜ್ಞನ ಸಮಾಜ ದರ್ಶನ ಮತ್ತು ಸಾಹಿತ್ಯಸತ್ವ ಎಂಬ ಮಹಾ ಪ್ರಬಂಧಮಂಡಿಸಿ ಮೈಸೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದಿದ್ದರು.
ಅಕಬರ ಅಲಿ ಅವರು ಉತ್ತರಕನ್ನಡ ಜಿಲ್ಲಾ ಸಾಹಿತ್ಯ ಪ್ರವರ್ತಕ ಸಹಕಾರಿ ಸಂಘದ ಸಂಸ್ಥಾಪಕ ನಿರ್ದೇಶಕರಲ್ಲಿ ಒಬ್ಬರಾಗಿ, ಜಿಲ್ಲಾ ಸಾಹಿತ್ಯ ಸಂಘಟನೆಯಲ್ಲಿ ಕೈಜೋಡಿಸಿದ್ದರು. ರಾಜ್ಯ ಪಠ್ಯ ಪುಸ್ತಕ ನಿರ್ದೇಶನಾಲಯದ ಕಿರಿಯರ ವಿಶ್ವಕೋಶವಾದ ಜ್ಞಾನಗಂಗೋತ್ರಿಯ ಎಂಟನೆಯ ಸಂಪುಟದ ಸಂಪಾದಕ ಮಂಡಲಿಯ ಸದಸ್ಯರಾಗಿ, 1975ರಲ್ಲಿ ದೆಹಲಿಯಲ್ಲಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ನಡೆದ ರಾಷ್ಟ್ರೀಯ ಕವಿಸಮ್ಮೇಳನದಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ, 1985ರಲ್ಲಿ ಬೀದರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷರಾಗಿ, ರಾಜ್ಯ ಸಾಹಿತ್ಯ ಅಕಾಡಮಿ ಸದಸ್ಯರಾಗಿ (1981-83), ಮೈಸೂರು ಜಿಲ್ಲಾ 9ನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ (2009), ಸಂಕೇಶ್ವರದಲ್ಲಿ ಜರುಗಿದ ತಾಲೂಕು ಸಮ್ಮೇಳನದ ಅಧ್ಯಕ್ಷರಾಗಿ (2011), ಹೀಗೆ ಅನೇಕ ಸಾಹಿತ್ಯ ಸಮ್ಮೇಳನಗಳಲ್ಲಿ ಪಾಲ್ಗೊಂಡು ಗೌರವ ಸ್ವೀಕರಿಸಿದ್ದರು.
ಸುಮನ ಸೌರಭ ಕೃತಿಗೆ (1967) ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ, ಗಂಧಕೇಶರ ಕೃತಿಗೆ ಕೇಂದ್ರ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಮಂತ್ರಾಲಯದ ಗೌರವ, ಸರ್ವಜ್ಞನ ಸಮಾಜ ದರ್ಶನ ಮತ್ತು ಸಾಹಿತ್ಯಸತ್ವ (ಪಿಎಚ್.ಡಿ. ಪ್ರಬಂಧ) ಕೃತಿಗೆ (1984) ಹುಬ್ಬಳ್ಳಿಯ ]ೕ ಜಗದ್ಗುರು ಮೂರು ಸಾವಿರ ಮಠ ದಿಂದ ಬಹುಮಾನ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(1984), ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ (1984) ಸೇರಿದಂತೆ ಅನೇಕ ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದುಕೊಂಡಿದ್ದಾರೆ.