ಬೆಂಗಳೂರು: ಆರು ವರ್ಷದ ಬಾಲಕಿ ಮೇಲೆ ಅಪ್ರಾಪ್ತನೊಬ್ಬ ಲೈಂಗಿಕ ದೌರ್ಜನ್ಯ ನಡೆಸಿರುವ ಪ್ರಕರಣ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಹತ್ತು ದಿನಗಳ ಹಿಂದೆ ಘಟನೆ ನಡೆದಿದ್ದು, ಬಾಲಕಿ ಪೋಷಕರು ಶುಕ್ರವಾರ ಪರಪ್ಪನ ಅಗ್ರಹಾರ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಬಾಲಕಿಯನ್ನು ವಿಚಾರಣೆಗೊಳಪಡಿಸಿದಾಗ ಅಪ್ರಾಪ್ತ ಬಾಲಕ ಕೃತ್ಯ ಎಸಗಿರುವುದಾಗಿ ಹೇಳಿಕೆ ನೀಡಿದ್ದಾಳೆ. ಬಾಲಕಿಯ ಹೇಳಿಕೆ ಆಧಾರದಲ್ಲಿ ಆರೋಪಿಯನ್ನು ಬಾಲನ್ಯಾಯ ಕಾಯಿದೆ ಪ್ರಕಾರ ವಶಕ್ಕೆ ಪಡೆದು ಮಡಿವಾಳದ ಬಾಲಮಂದಿರಕ್ಕೆ ಕಳುಹಿಸಿದ್ದಾಾರೆ.
ಸದ್ಯ ಸಂತ್ರಸ್ಥೆ ಬಾಲಕಿಯನ್ನು ವೈದ್ಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ಬಂದ ನಂತರ ಕ್ರಮ ಕೈಗೊಳ್ಳುತ್ತೇವೆ. ಜತೆಗೆ ಸಿಆರ್ಪಿಸಿ ಅಧಿನಿಯಮ 164 ಪ್ರಕಾರ ಬಾಲಕಿಯನ್ನು ನ್ಯಾಯಾಧೀಶರ ಮುಂದೆ ಹೇಳಿಕೆ ಪಡೆಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ಥೆ ಬಾಲಕಿ ಹಾಗೂ ಆರೋಪಿ ಪೋಷಕರು ದೂರದ ಸಂಬಂಧಿಕರಾಗಿದ್ದು ಹಲವು ವರ್ಷಗಳಿಂದ ಅಂಬೇಡ್ಕರ್ ನಗರದಲ್ಲಿ ಅಕ್ಕಪಕ್ಕ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಕಳೆದ ಹತ್ತು ದಿನಗಳ ಹಿಂದೆ ಆರೋಪಿ ಬಾಲಕ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಬಾಲಕಿಗೆ ಚಾಕೋಲೇಟ್ ಕೊಡಿಸಿದ್ದಾನೆ. ನಂತರ ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ.
ಕೂಲಿ ಕೆಲಸಕ್ಕೆ ಹೋಗಿದ್ದ ಪೋಷಕರು ಸಂಜೆ ಮನೆಗೆ ಬಂದಾಗ ಬಾಲಕಿ ಹೊಟ್ಟೆನೋವು ಎಂದು ಅಳುತ್ತಿರುವುದನ್ನು ಗಮನಿಸಿ ವಿಚಾರಿಸಿದ್ದಾರೆ. ಈ ವೇಳೆ ಬಾಲಕಿ ಪಕ್ಕದ ಮನೆ ಅಣ್ಣ ಈ ರೀತಿ ಮಾಡಿರುವುದಾಗಿ ತಿಳಿಸಿದ್ದಾಳೆ. ಈ ಹಿನ್ನೆಲೆಯಲಿ ಪೊಲೀಸರಿಗೆ ದೂರು ನೀಡಲು ಬಾಲಕಿ ಪೋಷಕರು ಮುಂದಾಗಿದ್ದರು. ಆದರೆ ಇದಕ್ಕೆೆ ಅಡ್ಡಿ ಪಡಿಸಿದ ಆರೋಪಿ ಪೋಷಕರು ಸಂಧಾನ ಮಾಡುತ್ತಾ ಬಂದಿದ್ದರು. ಆದರೆ ಶುಕ್ರವಾರ ಎರಡೂ ಮನೆಯವರ ಮಾತುಕತೆ ಮುರಿದು ಬಿದ್ದಿದ್ದರಿಂದ ಪೊಲೀಸರಿಗೆ ದೂರು ನೀಡಿದ್ದಾರೆ.