ದೊಂಗರಗಢ, ಛತ್ತೀಸ್ಗಢ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಇಲ್ಲಿ ‘ರೂರ್ಬನ್’ (ಗ್ರಾಮ್ನಗರ)ಯೋಜನೆಗೆ ಚಾಲನೆ ನೀಡಿದರು. ಉತ್ತಮ ಗ್ರಾಮಗಳು (ರೂರಲ್) ಹಾಗೂ ಉತ್ತಮ ನಗರಗಳ (ಅರ್ಬನ್) ವೈಶಿಷ್ಠ್ಯಳನ್ನು ಒಳಗೊಂಡ ‘ಗ್ರಾಮ್ನಗರ’ (ರೂರ್ಬನ್) ಕ್ಲಸ್ಟರ್ಗಳನ್ನು ಅಭಿವೃದ್ಧಿ ಪಡಿಸಲು ರೂರಲ್ ಮತ್ತು ಅರ್ಬನ್ ಎರಡನ್ನೂ ಒಳಗೊಂಡ ‘ರೂರ್ಬನ್’ ಯೋಜನೆಯನ್ನು ಸರ್ಕಾರ ಜಾರಿಗೊಳಿಸುತ್ತಿದೆ ಎಂದು ಪ್ರಧಾನಿ ಹೇಳಿದರು.
ಉತ್ತಮ ಬದುಕನ್ನು ಅರಸುತ್ತಾ ಜನ ನಗರಗಳಿಗೆ ತೆರಳುತ್ತಿದ್ದಾರೆ. ಹೀಗಾಗಿ ಅದಕ್ಕೆ ಅನುಗುಣವಾಗಿ ನಾವು ನಗರಗಳ ಬೆಳವಣಿಗೆಗೆ ಯೋಜನೆ ರೂಪಿಸಬೇಕಾಗಿದೆ. ರೂರ್ಬನ್ ಯೋಜನೆಯಲ್ಲಿ ನಾವು ಗ್ರಾಮಗಳು ಮತ್ತು ನಗರಗಳಲ್ಲಿ ಉತ್ತಮ ಅಂಶಗಳನ್ನು ಬೆಸೆದಿದ್ದೇವೆ. ಗ್ರಾಮದ ಸ್ಪೂರ್ತಿ ಮತ್ತು ನಗರದ ಸವಲತ್ತುಗಳು ಈ ರೂರ್ಬನ್ಗಳಲ್ಲಿ ಲಭ್ಯವಾಗಲಿವೆ ಎಂದು ಮೋದಿ ಹೇಳಿದರು.
ಭಾರತದ ಪ್ರಗತಿ ಕೆಲವೇ ನಗರಗಳನ್ನು ಅವಲಂಬಿಸಿರಬಾರದು, ಭಾರತ ದೊಡ್ಡ ದೇಶ. ಈ ಉಪಕ್ರಮವು ನಮ್ಮ ಗ್ರಾಮಗಳನ್ನು ಉತ್ತಮ ಸವಲತ್ತುಗಳಿರುವ ಕೇಂದ್ರಗಳನ್ನಾಗಿ ಅಭಿವೃದ್ಧಿ ಪಡಿಸಲಿದೆ. ಉತ್ತಮ ಸವಲತ್ತು, ಆರೋಗ್ಯ ರಕ್ಷಣೆ ಮತ್ತು ಶಿಕ್ಷಣ ನಮ್ಮ ಗ್ರಾಮಗಳ ಅಗತ್ಯ ಎಂದು ಪ್ರಧಾನಿ ಹೇಳಿದರು. ನಮ್ಮ ಬೆಳೆ ವಿಮಾ ಯೋಜನೆಯು ರೈತರ ಬಹಳಷ್ಟು ಸಮಸ್ಯೆಗಳನ್ನು ನೀಗಲಿದೆ ಎಂದು ನುಡಿದ ಮೋದಿ, ದೇಶಾದ್ಯಂತ ಶೌಚಾಲಯ ಬಳಕೆಯನ್ನು ಸ್ವಭಾವವನ್ನಾಗಿ ಮಾಡಲು ನಾನು ಬಯಸುವೆ ಎಂದು ನುಡಿದರು.