ಶಿವರಾಜಕುಮಾರ್ ಅಭಿನಯದ “ಶಿವಲಿಂಗ’ ಚಿತ್ರದ ಬಗ್ಗೆ ಎಲ್ಲಾ ಕಡೆಯಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪಿ.ವಾಸು ನಿರ್ದೇಶನದ “ಶಿವಲಿಂಗ’ ಒಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿ ಪ್ರೇಕ್ಷಕರ ಕುತೂಹಲ ಹೆಚ್ಚಿಸುತ್ತಾ ಸಾಗುವಲ್ಲಿ ಯಶಸ್ವಿಯಾಗಿದೆ.
ಈಗ ಹೊಸ ವಿಚಾರವೆಂದರೆ “ಶಿವಲಿಂಗ’ ಚಿತ್ರವನ್ನು ರಜನಿಕಾಂತ್ ನೋಡಿ ಖುಷಿಪಟ್ಟಿದ್ದಾರೆ. ಹೌದು, ಗುರುವಾರ ಸಂಜೆ ಚೆನ್ನೈನ ತಮ್ಮ ನಿವಾಸದಲ್ಲಿ ಕುಟುಂಬ ವರ್ಗದೊಂದಿಗೆ “ಶಿವಲಿಂಗ’ ಚಿತ್ರ ವೀಕ್ಷಿಸಿದ್ದಾರೆ. ಅಷ್ಟಕ್ಕೂ “ಶಿವಲಿಂಗ’ ಚಿತ್ರವನ್ನು ರಜನಿಕಾಂತ್ ವೀಕ್ಷಿಸಲು ಮುಖ್ಯವಾಗಿ ಎರಡು ಕಾರಣ; ನಿರ್ದೇಶಕ ಪಿ.ವಾಸು ಹಾಗೂ ಶಿವರಾಜಕುಮಾರ್. ಇಬ್ಬರೂ ರಜನಿಕಾಂತ್ ಅವರಿಗೆ ಆತ್ಮೀಯ ಸ್ನೇಹಿತರು. ಜೊತೆಗೆ ಸಿನಿಮಾ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬಂದಿರುವುದರಿಂದ ಚಿತ್ರ ವೀಕ್ಷಿಸಿದ್ದಾರೆ.
ರಜನಿಕಾಂತ್ ಸಿನಿಮಾ ನೋಡಿದ ಬಗ್ಗೆ ಮಾತನಾಡುವ ನಿರ್ದೇಶಕ ಪಿ.ವಾಸು, “ಗುರುವಾರ ಸಂಜೆ ತಮ್ಮ ಮನೆಯಲ್ಲಿ ರಜನಿಕಾಂತ್ ಸಿನಿಮಾ ನೋಡಿದ್ದಾರೆ. ತುಂಬಾ ಖುಷಿಯಾದರು. ಕೊನೆವರೆಗೂ ಸಿನಿಮಾ ಕುತೂಹಲ ಕಾಯ್ದಿರಿಸುವಲ್ಲಿ ಯಶಸ್ವಿಯಾಗಿದೆ. ಕ್ಷಣ ಕ್ಷಣಕ್ಕೂ ಸಿನಿಮಾ ಕುತೂಹಲ ಹೆಚ್ಚಿಸುತ್ತಾ ಸಾಗಿದೆ ಎಂದರು.
ಜೊತೆಗೆ ಶಿವರಾಜಕುಮಾರ್ ಅವರ ನಟನೆ, ಅವರ ಇವತ್ತಿಗೂ ಬಾಡಿ ಮೆಂಟೇನ್ ಮಾಡಿರುವ ಬಗ್ಗೆಯೂ ರಜನಿಕಾಂತ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು’ ಎಂದು ಸಿನಿಮಾ ನೋಡಿದ ಬಗ್ಗೆ ಹೇಳುತ್ತಾರೆ ಪಿ.ವಾಸು. ತಮಿಳಿನ ಮತ್ತಷ್ಟು ಕಲಾವಿದರು “ಶಿವಲಿಂಗ’ ಚಿತ್ರ ನೋಡಲಿದ್ದು, ರೀಮೇಕ್ ಕೂಡಾ ಆಗಲಿದೆಯಂತೆ.
“ಚಿತ್ರದ ಕಲೆಕ್ಷನ್ ಕೂಡಾ ದಿನದಿಂದ ದಿನಕ್ಕೆ ಚೆನ್ನಾಗಿದೆ. ಜನ ಸಿನಿಮಾವನ್ನು ಇಷ್ಟಪಟ್ಟಿದ್ದಾರೆ. ಎಲ್ಲಾ ಕಡೆಗಳಿಂದಲೂ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ’ ಎನ್ನಲು ವಾಸು ಮರೆಯುವುದಿಲ್ಲ. ಚಿತ್ರದಲ್ಲಿ ವೇದಿಕಾ ನಾಯಕಿಯಾಗಿ ನಟಿಸಿದ್ದು, ಕೆ.ಎ.ಸುರೇಶ್ ನಿರ್ಮಾಣ ಮಾಡಿದ್ದಾರೆ.
-ಉದಯವಾಣಿ