ಕರ್ನಾಟಕ

ಸಂತರ ಸಾಂಸ್ಕೃತಿಕ ದಿನಚರಿಗೆ ಕಾಲ ಪಕ್ವ

Pinterest LinkedIn Tumblr

UNION MINISTER ANTHAKUMAR UMASREE GORJE OFFERING FLOWER ON THE OCCASSION OF SARVAGAN JAYNTHI CELEBRATION AT NAYANA

ಬೆಂಗಳೂರು, ಫೆ. ೨೦- ಮಹಾ ಪುರುಷರು, ಸಂತರು, ಕವಿಗಳು, ದಾಸರು ಹಾಗೂ ದಾರ್ಶನಿಕರ ಜಯಂತಿ ಸೇರಿದಂತೆ ವಿವಿಧ ಮಾಹಿತಿಗಳನ್ನೊಳಗೊಂಡ ಸಾಂಸ್ಕೃತಿಕ ದಿನಚರಿಯನ್ನು ಹೊರ ತರುವಂತೆ ಕೇಂದ್ರ ರಾಸಾಯನಿಕ ಮತ್ತು ಕಸಗೊಬ್ಬರ  ಖಾತೆ ಸಚಿವ ಅನಂತ್ ಕುಮಾರ್ ಇಂದಿಲ್ಲಿ ಸರಕಾರಕ್ಕೆ ಸಲಹೆ ನೀಡಿದರು.

ಒಂದೊಂದು ಜಯಂತಿಯನ್ನು ರಾಜ್ಯದಲ್ಲಿರುವ ಒಂದೊಂದು ವಿಶ್ವವಿದ್ಯಾನಿಲಯಗಳಿಗೆ ಜೋಡಿಸಿದರೆ ಕವಿಗಳು, ದಾರ್ಶಿನಿಕರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಸಹಕಾರವಾಗುತ್ತದೆ. ಅಲ್ಲದೆ ಜಯಂತಿ ಆಚರಣೆ ಕಾರ್ಯಕ್ರಮವನ್ನು ಸಭಾಂಗಣದ ಒಳಗಿಂದ ಜನರ ಬಳಿಗೆ ಕೊಂಡೊಯ್ಯಲು ಸಹಕಾರಿಯಾಗಲಿದೆ ಎಂದರು.

ನಗರದಲ್ಲಿಂದು ಆಯೋಜಿಸಿದ್ದ ಕವಿ ಸರ್ವಜ್ಞ ಜಯಂತಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿವರ್ಷದಿಂದ ನ. 1 ರಂದು ಸಾಂಸ್ಕೃತಿಕ ದಿನಚರಿಯನ್ನು ಹೊರತಂದು ಇದರಿಂದ ಯಾವ ಯಾವ ದಿನ ಯಾಱ್ಯಾರ ಜಯಂತಿ ಸೇರಿದಂತೆ ಇತರ ಕಾರ್ಯಕ್ರಮವಿರಲಿದೆ ಎನ್ನುವುದು ರಾಜ್ಯದ ಜನರಿಗೆ ಗೊತ್ತಾಗಲಿದೆ.

ಅಲ್ಲದೆ ಮಹನೀಯರನ್ನು ಹೊಸ ಪೀಳಿಗೆಗೆ ವರಿಚಯ ಮಾಡಿಕೊಡಲು ಸಹಕಾರಿಯಾಗಲಿದೆ ಎಂದರು.

ಕಳವಳಕಾರಿ ಸಂಗತಿ

ಬೆಂಗಳೂರು ನಗರದಲ್ಲಿ ಇಂಗ್ಲಿಷ್ ಹಾವಳಿಯಿಂದಾಗಿ ಕನ್ನಡ ಕಂಗ್ಲೀಷ್ ಆಗಿದೆ. ಶುದ್ಧ ಕನ್ನಡದಲ್ಲಿ ಮಾತನಾಡುವವರು ಸಿಗುವುದು ಅಪರೂಪ ಎಂದು ಕಳವಳ ವ್ಯಕ್ತಪಡಿಸಿದರು.

ಕನ್ನಡ ಭಾಷೆಯ ಮೇಲೆ ಪ್ರೀತಿ ಮತ್ತು ನಿಷ್ಠೆಯನ್ನು ತೋರಬೇಕಾದರೆ ಕನ್ನಡ ಪುಸ್ತಕಗಳು ಹಾಗೂ ಪತ್ರಿಕೆಗಳನ್ನು ಹೆಚ್ಚು ಓದಿ ಮತ್ತು ಕನ್ನಡದಲ್ಲೇ ಹಸ್ತಾಕ್ಷರ ಮಾಡಿ ಎಂದು ಸಲಹೆ ನೀಡಿದರು.

ಕನ್ನಡ ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಮಾತನಾಡಿ, ಸಾಂಸ್ಕೃತಿಕ ದಿನಚರಿಯನ್ನು ತರಬೇಕೆನ್ನುವುದು ನಮ್ಮ ಮನಸ್ಸಿನಲ್ಲೇ ಇತ್ತು. ಅದನ್ನು ಹೊರ ತರುವುದಾಗಿ ಭರವಸೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ಜಾತಿ ಸಂಘರ್ಷ ಮನುಷ್ಯನನ್ನು ಸಂಕುಲದಲ್ಲಿ ಸಿಲುಕಿಸಿ ನರಳಾಡುವಂತೆ ಮಾಡಿದೆ. ಜಾತಿ ಇನ್ನೂ ಹೋಗಿಲ್ಲ ಎನ್ನುವುದು ದುರದೃಷ್ಟಕರ. ಜಯಂತಿ ಆಚರಣೆಗಳನ್ನು ಜಾತಿಗೆ ಸೀಮಿತಗೊಳಿಸದೆ ಸಾರ್ವತ್ರಿಕಗೊಳಿಸಬೇಕೆನ್ನುವುದು ನಮ್ಮ ಉದ್ದೇಶ. ಈ ನಿಟ್ಟಿನಲ್ಲಿ ಸರ್ಕಾರ ಮುನ್ನಡೆಯಲಿದೆ ಎಂದರು. ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ, ಕಾಲೇಜುಗಳಲ್ಲಿ, ಮಹನೀಯರ ಹಾಗೂ ದಾರ್ಶನಿಕರ ಕುರಿತ ವಿಚಾರಗೋಷ್ಠಿ, ಚರ್ಚಾಸ್ಪರ್ಧೆ ಏರ್ಪಡಿಸುವ ಮೂಲಕ ಕವಿ. ಸಂತರ ಪರಂಪರೆಯನ್ನು ಉಳಿಸಿ ಬೆಳೆಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.

ಕವಿ ಸರ್ವಜ್ಞ ತಮ್ಮ ತ್ರಿಪದಿಗಳ ಮೂಲಕ ಸಮಾಜದ ಕಠೋರ ಸತ್ಯವನ್ನು ಯಾರಿಗೂ ಅಂಜದೆ ಹೇಳಿದ್ದಾರೆ ಎಂದು ಗುಣಗಾನ ಮಾಡಿದ ಅವರು, ಅನೇಕ ಸಾಹಿತಿಗಳ ಪುಸ್ತಕಗಳನ್ನು ಇಲಾಖೆಯ ಜಾಲತಾಣದಲ್ಲಿ ಹಾಕಿದ್ದು, ಮುಂದಿನ ದಿನಗಳಲ್ಲಿ ಸರ್ವಜ್ಞರ ತ್ರಿಪದಿಗಳನ್ನೂ ಹಾಕಲಾಗುವುದು. ಸರ್ವಜ್ಞರ ತ್ರಿಪದಿಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು.

ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ಕವಿ ಸರ್ವಜ್ಞರ ಕೊಡುಗೆ ಅಪಾರ. ತಮ್ಮ ಅನುಭವದಿಂದ ವಚನಗಳನ್ನು ಸೃಷ್ಟಿಸಿದ್ದಾರೆ. ಅವರು 2020 ವಚನಗಳು ಹಾಗೂ ಸಾವಿರಕ್ಕೂ ಹೆಚ್ಚು ತ್ರಿಪದಿಗಳನ್ನು ರಚಿಸಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕನ್ನಡ ಸಂಸ್ಕೃತಿಕ ಇಲಾಖೆ ನಿರ್ದೇಶಕ ಕೆ.ಎ. ದಯಾನಂದ, ಸಾಹಿತಿ ಪ್ರೊ. ಸ್ವಾಮಿರಾವ್ ಕುಲಕರ್ಣಿ, ಸೌಂದರ್ಯ ಮಂಜಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Write A Comment