ಕರ್ನಾಟಕ

ರಾಜ್ಯಕ್ಕೆ ಈಗ ವಿದ್ಯುತ್‌ ಕ್ಷಾಮ ಭೀತಿ

Pinterest LinkedIn Tumblr

powerಸಾಗರ: ಜೋಗದ ವಿದ್ಯುತ್‌ ಉತ್ಪಾದನಾ ಘಟಕಗಳ ಪೈಕಿ ಅತಿ ಹೆಚ್ಚು ಶೇ.80ರಷ್ಟು ವಿದ್ಯುತ್‌ ಉತ್ಪಾದನೆ ಮಾಡುವ ಶರಾವತಿ ವಿದ್ಯುದಾಗಾರದಲ್ಲಿ ಗುರುವಾರ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಹಲವು ತಿಂಗಳ ಕಾಲ ಇದು ಪುನರಾರಂಭ ಆಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಅಲ್ಲದೆ ಸರ್ಕಾರಕ್ಕೆ ಹಲವು ನೂರು ಕೋಟಿ ರೂ. ನಷ್ಟವೂ ಆಗಿದ್ದು ಬರುವ ದಿನಗಳಲ್ಲಿ ವಿದ್ಯುತ್‌ ಕ್ಷಾಮಕ್ಕೆ ಜನರು ಸಿದ್ಧರಾಗಬೇಕಾಗಿದೆ.

ಜೋಗದಲ್ಲಿ ಲಿಂಗನಮಕ್ಕಿ ವಿದ್ಯುತ್‌ ಉತ್ಪಾದನಾ ಕೇಂದ್ರ (ಎಲ್‌ಡಿಪಿಡಬ್ಲ್ಯು) 55 ಮೆಗಾವ್ಯಾಟ್‌, ಮಹಾತ್ಮಾಗಾಂಧಿ ಕೇಂದ್ರ 139 ಮೆಗಾವ್ಯಾಟ್‌ ಹಾಗೂ ಗೇರುಸೊಪ್ಪದ ಉತ್ಪಾದನಾ ಕೇಂದ್ರ 27 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸುತ್ತವೆ. ಆದರೆ ಶರಾವತಿ ವಿದ್ಯುದಾಗಾರವೊಂದೇ 1035 ಮೆಗಾವ್ಯಾಟ್‌ ವಿದ್ಯುತ್‌ ನೀಡುತ್ತಿದ್ದು, ಇಲ್ಲಿನ ವ್ಯವಸ್ಥೆ ಸರಿಯಾಗುವವರೆಗೆ ಒಂದೇ ಒಂದು ಯೂನಿಟ್‌ ವಿದ್ಯುತ್‌ ಉತ್ಪಾದನೆ ಸಾಧ್ಯವಿಲ್ಲ.

ಲಿಂಗನಮಕ್ಕಿಯಲ್ಲಿ ಶುಕ್ರವಾರದ ಅಂದಾಜಿನಂತೆ 1600 ದಶಲಕ್ಷ ಯೂನಿಟ್‌ನಷ್ಟು ವಿದ್ಯುತ್‌ ಉತ್ಪಾದನೆ ಮಾಡುವಷ್ಟು ನೀರಿನ ಸಂಗ್ರಹವಿದೆ. ವಾಸ್ತವವಾಗಿ ಅಣೆಕಟ್ಟೆಯಲ್ಲಿ ಸಂಗ್ರಹವಾಗುವ ಹೆಚ್ಚಿನ ನೀರು ಶರಾವತಿ ವಿದ್ಯುತ್‌ ಸ್ಥಾವರವಿರುವ ಆನೆಬೈಲು (ಎಬಿ) ಸೈಟ್‌ಗೆà ತೆರಳುತ್ತಿತ್ತು. ಈಗ ಎಲ್‌ಡಿಪಿಡಬ್ಲ್ಯುನಿಂದ ತಳಕಳಲೆ ಮಾರ್ಗವಾಗಿ ಹರಿಯುವ ನೀರು ಗೇರುಸೊಪ್ಪ ವಿದ್ಯುದಾಗಾರಕ್ಕೆ ಹರಿಯುವ ಮುನ್ನ ಎಬಿ ಸೈಟ್‌ನಲ್ಲಿ ಉತ್ಪಾದಿಸುವ ವಿದ್ಯುತ್‌ಗೆ ಕೊರತೆಯಾಗುತ್ತದೆ. ಅಲ್ಲದೆ ಕೇವಲ 27 ಮೆಗಾ ವ್ಯಾಟ್‌ ಸಾಮರ್ಥ್ಯದ ಗೇರುಸೊಪ್ಪ ವಿದ್ಯುದಾಗಾರ ತನ್ನ ಸಂಪೂರ್ಣ ಸಾಮರ್ಥ್ಯ ಬಳಸಿದರೂ ದೊಡ್ಡ ಪ್ರಮಾಣದಲ್ಲಿ ನೀರು ವ್ಯರ್ಥವಾಗುತ್ತದೆ.

ಶರಾವತಿ ವಿದ್ಯುದಾಗಾರದ ಮರು ಚಾಲನೆ ತಡವಾದಷ್ಟೂ ರಾಜ್ಯದ ಇಂಧನ ಇಲಾಖೆಯ ಹೊರೆ ಹೆಚ್ಚಾಗುತ್ತದೆ. ಕಳೆದ ಎರಡು ದಿನದಿಂದ ಸಂಜೆ ಆರು ಆಗುತ್ತಿದ್ದಂತೆ ಎಬಿ ಸೈಟ್‌ನಲ್ಲಿ ಪರಸ್ಪರರು ಎದುರಾದರೂ ಕಾಣಿಸದಂತಹ ಕತ್ತಲು. ಇಲ್ಲಿನ ಸಂಪೂರ್ಣ ವಿದ್ಯುತ್‌ ಪ್ರಸರಣ ಕೇಬಲ್‌ಗ‌ಳು, ಕಂಟ್ರೋಲ್‌ ರೂಂ ಹಾಳಾಗಿರುವುದರಿಂದ ಇಲ್ಲಿಗೆ ಒಂದು ಯೂನಿಟ್‌ ವಿದ್ಯುತ್‌ ಹರಿಸಲು ಕೂಡ ಸಾಧ್ಯವಾಗುತ್ತಿಲ್ಲ. ದುರಸ್ತಿ ಕಾರ್ಯ ಆರಂಭವಾಗಿ 24 ಘಂಟೆಯೂ ಕೆಲಸ ಮಾಡುವಂತಾಗಲು ಮೊದಲು ಇಲ್ಲಿಗೆ ವಿದ್ಯುತ್‌ ಸರಬರಾಜಾಗಬೇಕಾಗಿದೆ. ಅಷ್ಟಕ್ಕೂ ಟಬೈìನ್‌, ಟ್ರಾನ್ಸ್‌ಫಾರ¾ರ್‌ ಸೇರಿದಂತೆ ಇಲ್ಲಿನ ಉಳಿದ ಪ್ರಮುಖ ಯಂತ್ರಗಳು ಮೇಲ್ನೋಟಕ್ಕೆ ಹಾನಿಯಾಗಿಲ್ಲ ಎಂಬುದಷ್ಟನ್ನೇ ಹೇಳಲಾಗಿದೆ. ಒಂದೊಂದು ಟಬೈìನ್‌ ಹಾಳಾದರೂ ಅದರ ಸಂಪೂರ್ಣ ದುರಸ್ತಿ ಹಲವು ತಿಂಗಳುಗಳನ್ನೇ ತೆಗೆದುಕೊಳ್ಳುತ್ತದೆ.

ಮಳೆಗಾಲ ಆರಂಭವಾದರೂ ಎಬಿ ಸೈಟ್‌ ದುರಸ್ತಿ ಆಗದಿದ್ದರೆ ಇಂಧನ ಇಲಾಖೆ ಪಡೆಯುತ್ತಿದ್ದ ಉಚಿತ ವಿದ್ಯುತ್‌ಗೆ ದೊಡ್ಡ ಖೋತಾ ಆಗುತ್ತದೆ. ಮಳೆಗಾಲದಲ್ಲಿ ಲಿಂಗನಮಕ್ಕಿ ಅಣೆಕಟ್ಟೆಯಲ್ಲಿ ಸಂಗ್ರಹವಾಗುವ ನೀರನ್ನು ಬಳಸದೆಯೇ ಬೀಳುವ ಮಳೆ, ಚಿಮ್ಮುವ ಜಲ ಸಂಪನ್ಮೂಲಗಳನ್ನೇ ಬಳಸಿ ಶರಾವತಿ ವಿದ್ಯುದಾಗಾರದಲ್ಲಿ ವಿದ್ಯುತ್‌ ಉತ್ಪಾದನೆ ಸಾಧ್ಯ. ತಳಕಳಲೆ ಜಲಾಶಯದಲ್ಲಿ ನೀರು ಬಂದರೆ ಸಾಕಾಗುತ್ತದೆ.

ಈ ಸಂದರ್ಭದಲ್ಲಿ ಗರಿಷ್ಠ ಪ್ರಮಾಣದ ಜಲ ವಿದ್ಯುತ್‌ನ್ನು ಉತ್ಪಾದಿಸಿ ರಾಜ್ಯದ ವಿದ್ಯುತ್‌ ಪ್ರಸರಣ ವ್ಯವಸ್ಥೆಗೆ ಬಿಡಲಾಗುತ್ತಿತ್ತು. ಈ ರೀತಿಯಲ್ಲಿ, ಎಬಿ ಸೈಟ್‌ ಸ್ಥಗಿತದಿಂದ 1035 ಮೆಗಾವ್ಯಾಟ್‌ ಸಾಮರ್ಥ್ಯದ ಉತ್ಪತ್ತಿ ಪ್ರತಿ ದಿನ ಖೋತಾ ಆಗುತ್ತದೆ. 1 ಮೆವ್ಯಾ ಸಾಮರ್ಥ್ಯದ ಯಂತ್ರವನ್ನು ಒಂದು ತಾಸು ಚಲಾಯಿಸಿದರೆ 1000 ಯೂನಿಟ್‌ ವಿದ್ಯುತ್‌ ಲಭ್ಯವಾಗುತ್ತದೆ ಎಂಬ ಅಂಶ ರಾಜ್ಯ ಕಳೆದುಕೊಳ್ಳುವ ಆದಾಯದ ಲೆಕ್ಕ ಹೇಳುತ್ತದೆ ಎಂದು ಇಂಜಿನಿಯರ್‌ ಮೂಲಗಳು ತಿಳಿಸುತ್ತವೆ.

ಇವೆಲ್ಲವುಗಳ ಜೊತೆಗೆ ಎಬಿ ಸೈಟ್‌ ದಿನದ 24 ಘಂಟೆ ಚಾಲನೆಯಲ್ಲಿರುತ್ತಿತ್ತು ಮತ್ತು ಮೂರು ಶಿಫ್ಟ್‌ಗಳಲ್ಲಿ ಕೆಲಸ ಮಾಡುತ್ತಿತ್ತು. ಇಲ್ಲಿನ ಕೆಲಸಗಾರರನ್ನು ದುರಸ್ತಿಯವರೆಗೆ ಬೇರೆಡೆಗೆ ವರ್ಗಾಯಿಸುವ ಪರಿಸ್ಥಿತಿಯಿಲ್ಲ. ಇದರಿಂದ ಕೆಪಿಸಿ ಕೆಲಸವಿಲ್ಲದಿದ್ದರೂ ವೇತನ ಭತ್ಯೆಗಳನ್ನು ಭರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಅಗ್ನಿ ದುರಂತದ ಆಘಾತಕಾರಿ ಪ್ರಭಾವ ಇನ್ನಷ್ಟೇ ಜನರಿಗೆ ಅರಿವಾಗಬೇಕಾಗಿದೆ.

ದುರಂತದ ತನಿಖೆಗೆ ಸಮಿತಿ: ಡಿಕೆಶಿ ಧಿ
ಸಾಗರ: ಜೋಗದ ಶರಾವತಿ ವಿದ್ಯುದಾಗಾರದಲ್ಲಿ ಸಂಭವಿಸಿದ ಬೆಂಕಿ ದುರಂತದ ತನಿಖೆಗೆ ಸಮಿತಿ ರಚಿಸಲಾಗಿದೆ. ಅವಘಡದಿಂದ ಪ್ರತಿದಿನ 750ರಿಂದ 800 ಮೆಗಾವ್ಯಾಟ್‌ನಷ್ಟು ವಿದ್ಯುತ್‌ ಉತ್ಪಾದನೆಯಲ್ಲಿ ವ್ಯತ್ಯಯವಾಗಲಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಗುರುವಾರ ಬೆಂಕಿ ಅನಾಹುತದಿಂದ ಸುಟ್ಟು ಭಸ್ಮವಾಗಿರುವ ಶರಾವತಿಯ ಕಂಟ್ರೋಲ್‌ ರೂಂ ಮತ್ತಿತರ ಪ್ರದೇಶ ವೀಕ್ಷಿಸಿದ ಅವರು, ಅವಘಡದ ಕುರಿತ ಮಾಹಿತಿ ಪಡೆಯಲು ವಿಶೇಷ ಪರಿಣತಿ ಪಡೆದ ಸಿಪಿಆರ್‌ಐ ಪ್ರತಿನಿಧಿಗಳು, ನಿಗಮದ ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕರು, ಕೆಪಿಟಿಸಿಎಲ್‌ನ ಮುಖ್ಯ ಅಭಿಯಂತರರನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ. ಮತ್ತೆ ಶರಾವತಿ ವಿದ್ಯುದಾಗಾರದ ಕಾರ್ಯಾರಂಭದ ಕುರಿತು ಸಮಯ ಮಿತಿ ನಿಗದಿಪಡಿಸಲು ಸಾಧ್ಯವಿಲ್ಲ.

ಇಲ್ಲಿ ನಷ್ಟವಾಗಿರುವ ಉಪಕರಣಗಳನ್ನು ಮಾರುಕಟ್ಟೆಯಿಂದ ಖರೀದಿಸಿ ತರಲಾಗುವುದಿಲ್ಲ. ಇಲ್ಲಿಯೇ ನಿರ್ಮಾಣ ಮಾಡಬೇಕಾಗುತ್ತದೆ. ಲಿಂಗನಮಕ್ಕಿ ಅಣೆಕಟ್ಟಿನಿಂದ ನೀರು ಹರಿಸಿ ಇಲ್ಲಿನ ಉಳಿದ ಘಟಕಗಳಾದ ಮಹಾತ್ಮ ಗಾಂಧಿ, ಗೇರುಸೊಪ್ಪದಿಂದ ಪರಮಾವಧಿ ವಿದ್ಯುತ್‌ ಉತ್ಪಾದಿಸಲಾಗುವುದು ಎಂದು ತಿಳಿಸಿದರು.

ಮಾ.ವೆಂ.ಸ.ಪ್ರಸಾದ್‌

-ಉದಯವಾಣಿ

Write A Comment