ಬೆಂಗಳೂರು: ತಬಲಾ ಮಾಂತ್ರಿಕ ಉಸ್ತಾದ್ ಜಾಕೀರ್ ಹುಸೇನ್ ಹಾಗೂ ಸಿತಾರ್ ವಾದಕ ನೀಲಾದ್ರಿಕುಮಾರ್ ನಡೆಸಿಕೊಟ್ಟ ಸಂಗೀತ ಉತ್ಸವ ಜನರನ್ನು ನಿಬ್ಬೆರಗಾಗಿಸಿತು.
ಚೌಡಯ್ಯ ಸ್ಮಾರಕ ಭವನದಲ್ಲಿ ಉಡುಪ ಫೌಂಡೇಷನ್ ವಿಜಯವಾಣಿ ಮಾಧ್ಯಮ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಡುಪ ಸಂಗೀತ ಉತ್ಸವದಲ್ಲಿ ಕಿಕ್ಕಿರಿದು ನೆರೆದಿದ್ದ ಜನ ಸಂಗೀತ ದಿಗ್ಗಜರ ಮೋಡಿಗೆ ಮರುಳಾದರು. ಜನಸಮೂಹ ಜಾಕೀರ್ ಹುಸೇನರ ಬೆರಳ ಮೋಡಿಗೆ ಬೆರಗಾಯಿತು. ಎರಡು ಗಂಟೆ ನಿರಂತರ ನಡೆದ ಸಂಗೀತ ಕಛೇರಿಯನ್ನು ಜನ ಕುತೂಹಲದಿಂದ ಆಲಿಸಿದರು. ಕಚೇರಿ ನಂತರ ಸುದೀರ್ಘ ಕರತಾಡನದ ಮೂಲಕ ಮೆಚ್ಚುಗೆ ಸೂಚಿಸಿದರು.
ಮಕ್ಕಳು, ಮಹಿಳೆಯರು, ಯುವಕರು, ವೃದ್ಧರು ಸಂಗೀತ ಉತ್ಸವದಲ್ಲಿ ಮಿಂದೆದ್ದರು. ಜಾಕೀರ್ ಹುಸೇನ್ ಹಾಗೂ ನೀಲಾದ್ರಿಕುಮಾರ್ ಅವರ ಕೈಚಳಕ ಕಂಡು ಚಕಿತರಾದರು. ಯುವಕರಂತೂ ಸಮ್ಮೋಹನಕ್ಕೆ ಒಳಗಾದವರಂತೆ ತದೇಕಚಿತ್ತದಿಂದ ಆಲಿಸಿದರು. ಆಗಾಗ್ಗೆ ಕಿವಿಗಡಚಿಕ್ಕುವಂತೆ ಚಪ್ಪಾಳೆ ತಟ್ಟಿ ಹಷೋದ್ಗಾರ ವ್ಯಕ್ತಪಡಿಸಿದರು. ಹಿರಿಯ ನಾಗರಿಕರಂತೂ ವ್ಹಾ..! ಎಂದು ಉದ್ಗಾರ ತೆಗೆದು ನಾದೋಪಾಸನೆಗೆ ತಲೆದೂಗಿದರು. ಇಡೀ ಸಭಾಂಗಣದ ತುಂಬ ಸಂಗೀತದ ರಸಧಾರೆ ಹರಿದಿತ್ತು. ಸಂಗೀತ ದಿಗ್ಗಜರ ಹಾವಭಾವಕ್ಕೆ ಜನ ಮರá-ಳಾದರು.
ಕರ್ನಾಟಕ-ಹಿಂದುಸ್ತಾನಿ, ಪಾಶ್ಚಾತ್ಯ ಮುಂತಾದ ಬಗೆಯ ಸಂಗೀತ ಪ್ರೇಮಿಗಳು, ವಿದ್ಯಾರ್ಥಿಗಳು ಹೀಗೆ ಎಲ್ಲರಿಗೂ ಈ ಸಂಗೀ ಕಛೇರಿ ಒಂದು ಅವರ್ಣನೀಯ ಆನಂದ ಉಂಟá-ಮಾಡಿತು. ವಿದೇಶಿಯರು ಸಹ ಈ ಉತ್ಸವದಲ್ಲಿ ಭಾಗವಹಿಸಿ ತಲೆದೂಗುವ ಮೂಲಕ ಸಂಗೀತ ಭಾಷಾತೀತ ಎಂಬುದನ್ನು ಸಾಬೀತುಪಡಿಸಿದರು.
ಅಂತಾರಾಷ್ಟ್ರೀಯ ಖ್ಯಾತಿಯ ತಬಲಾಪಟು ಜಾಕೀರ್ ಹುಸೇನ್ ಬರುತ್ತಾರೆಂಬ ಸುದ್ದಿ ಕೇಳಿ ಕೊನೆಯ ಕ್ಷಣದಲ್ಲಿ ಬಂದ ಜನರು ಟಿಕೆಟ್ ಸಿಕ್ಕದೆ ನಿರಾಸೆಯಿಂದ ಹಿಂದಿರುಗಿದ್ದು ಕಂಡುಬಂತು.
ಸಂಗೀತೋತ್ಸವದಲ್ಲಿ ಇಂದಿನ ಮನರಂಜನೆ
ಉಡುಪ ಫೌಂಡೇಷನ್ ಚೌಡಯ್ಯ ಸ್ಮಾರಕ ಭವನದಲ್ಲಿ ಹಮ್ಮಿಕೊಂಡಿರುವ ಸಂಗೀತ ಉತ್ಸವದ ಎರಡನೇ ದಿನ(ಗುರುವಾರ)ದ ಕಾರ್ಯಕ್ರಮದಲ್ಲಿ ಖ್ಯಾತ ಮೃದಂಗ ವಾದಕ ವಿದ್ವಾನ್ ಉಮಾಯಲ ಪುರಂ ಕೆ. ಶಿವರಾಮನ್, ತಬಲಾ ವಾದಕ ಪಂಡಿತ್ ಅನಿಂದೋ ಚಟರ್ಜಿ, ವಯಲಿನ್ ವಾದಕರಾದ ವಿದ್ವಾನ್ ಮೈಸೂರು ನಾಗರಾಜ್ ಮತ್ತು ವಿದ್ವಾನ್ ಮೈಸೂರು ಮಂಜುನಾಥ್ ಕಛೇರಿ ನಡೆಸಿಕೊಡಲಿದ್ದಾರೆ.
ಮಂಡಿಯೂರಿ ದೀಪ ಬೆಳಗಿದ ಜಾಕೀರ್ ಹುಸೇನ್
ಉಡುಪ ಫೌಂಡೇಷನ್ ಹಾಗೂ ಸಂಗೀತ ಉತ್ಸವದ ಉದ್ಘಾಟನೆ ಎಂಥವರನ್ನೂ ಬೆರಗುಗೊಳಿಸುವಂತಿತ್ತು. ತಬಲಾ ವಾದಕ ಜಾಕೀರ್ ಹುಸೇನ್ ಮಂಡಿಯೂರಿ ದೀಪ ಬೆಳಗಿದಾಗ ಜನರಿಂದ ಮುಗಿಲು ಮುಟ್ಟುವ ಚಪ್ಪಾಳೆ ಕೇಳಿಬಂದವು. ಖ್ಯಾತ ಮೃದಂಗ ವಾದಕ ಉಳ್ಳೂರು ನಾಗೇಂದ್ರ ಉಡುಪ ಅವರ ಕಾಲಿಗೆ ನಮಸ್ಕರಿಸಿ ಜಾಕೀರ್ ಹುಸೇನ್ ಆಶೀರ್ವಾದ ಪಡೆದುಕೊಂಡಾಗ ನೆರೆದಿದ್ದವರು ಮಂತ್ರಮುಗ್ಧ ರಾದರು. ತರುವಾಯ ಉಭಯ ಕಲಾವಿದರು ವೇದಿಕೆಗೆ ನಮಸ್ಕರಿಸಿ ಕುಳಿತು ಕಚೇರಿ ನಡೆಸಿಕೊಟ್ಟರು.
ಸಾರ್ಥಕ ಕ್ಷಣಗಳು…
ಅನೇಕ ಶ್ರೋತೃಗಳು ಜಾಕೀರ್ ಹುಸೇನರ ತಬಲಾ ವಾದನ ಕೇಳಿ ಜೀವನ ಸಾರ್ಥಕವಾಯಿತೆಂಬ ಧನ್ಯತಾ ಭಾವ ವ್ಯಕ್ತಪಡಿಸಿದರು. ನಿಜಕ್ಕೂ ಇದು ನಮಗೆ ಸೌಭಾಗ್ಯದ ದಿನ ಎಂದು ಸಂಗೀತಪ್ರಿಯರು ಹರ್ಷ ವ್ಯಕ್ತಪಡಿಸಿದರು.
ಮಾತೇ ಇಲ್ಲ, ಮೌನವೇ ಎಲ್ಲ..!
ಸಾಮಾನ್ಯ ಕಾರ್ಯಕ್ರಮಗಳಂತೆ ಈ ಉತ್ಸವ ಉದ್ಘಾಟನೆಯಲ್ಲಿ ಮಾತು ಇರಲಿಲ್ಲ. ಆದರೆ, ಮೌನವೇ ಎಲ್ಲವನ್ನೂ ಸಾದರಪಡಿಸುವಂತಿತ್ತು. ಖ್ಯಾತ ಮೃದಂಗ ವಾದಕ ಉಳ್ಳೂರು ನಾಗೇಂದ್ರ ಉಡುಪ ಹಾಗೂ ಪತ್ನಿ ಸರೋಜಾ ಉಡುಪ ಅವರ ಪುತ್ರ ಘಟಂ ಗಿರಿಧರ ಉಡುಪ, ಸಂಧ್ಯಾ ರಾವ್, ಭಾರ್ಗವ ಹಾಲಂಬಿ ಮತ್ತಿತರರು ದೀಪ ಬೆಳಗಿದರು. ಯಾರೂ ಒಂದಕ್ಷರ ಮಾತನಾಡಲಿಲ್ಲ. ಕಲಾವಿದರು ನುಡಿಸಿದ ಭೀಮ್ಲಾಸ್ ತೀನ್ತಾಲ್, ಭೈರವ್ ತೀನ್ತಾಲ್ಗಳಿಗಂತೂ ಜನ ತಲೆದೂಗಿದರು.