ಮಂಡ್ಯ:ರೈತರ ಆತ್ಮಹತ್ಯೆ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು . ಪ್ರತಿಬಾರಿಯೂ ಚಿತ್ರರಂಗದವರನ್ನೇ ಗುರಿಯಾಗಿಟ್ಟುಕೊಂಡು ಲಘುವಾಗಿ ಮಾತಾಡ್ತಾರೆ…ಅವರ ಪತ್ನಿಯೂ ಚಿತ್ರನಟಿ, ನಿರ್ಮಾಪಕರಾಗಿದ್ದಾರೆ. ಅವರು ಹೀಗೆಲ್ಲಾ ಮಾತನಾಡಿದ್ದು ನೋವು ತಂದಿದೆ…ಇದು ಮಾಜಿ ಸಂಸದೆ,ಚಿತ್ರ ನಟಿ ರಮ್ಯಾ ಬುಧವಾರ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ ಪರಿ.
ಮಂಗಳವಾರ ಪಾಂಡವಪುರದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡುತ್ತ, ರಮ್ಯಾ ಸಂಸದೆಯಾಗಿದ್ದಾಗ ನೂರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಬಿಟ್ಟರೆ, ಬೇರೆ ಏನೂ ಸಾಧನೆ ಇಲ್ಲ ಎಂದು ಟೀಕಿಸಿದ್ದರು. ಸಂಸದೆಯಾಗಿ ರಮ್ಯಾ ಕೊಡುಗೆ ಏನು…ರಮ್ಯಾ ಅವರ ಕಾಲ್ಗುಣ ಚೆನ್ನಾಗಿಲ್ಲ ಎಂದು ದೂರಿದ್ದರು.
ಇಂದು ಸುದ್ದಿಗಾರರು ಕುಮಾರಸ್ವಾಮಿ ಆರೋಪದ ಬಗ್ಗೆ ಪ್ರಶ್ನಿಸಿದಾಗ, ಪ್ರತಿಬಾರಿಯೂ ಚಿತ್ರರಂಗದವರ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಮೊದಲು ಅವರ ಮನೆಯ ಹೆಣ್ಣು ಮಕ್ಕಳಿಗೆ ಅನ್ಯಾಯ ಮಾಡಬಾರದು ಎಂಬುದು ತಿಳಿದುಕೊಳ್ಳಲಿ. ಅವರ ಪತ್ನಿಯೂ ಚಿತ್ರನಟಿ ಎಂದು ಖಾರವಾಗಿ ತಿರುಗೇಟು ನೀಡಿರುವುದು ರಾಜಕೀಯ ವಾಕ್ಸಮರಕ್ಕೆ ನಾಂದಿ ಹಾಡಿದೆ.
ಸಂಸದ ಪುಟ್ಟರಾಜು ಗರಂ:
ರಮ್ಯಾ ಆರೋಪಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಮಂಡ್ಯ ಸಂಸದ ಪುಟ್ಟರಾಜು, ಮಂಡ್ಯಕ್ಕೆ ಬಂದಿದ್ದೀರಾ…ಕೆಲಸ ಮಾಡಿಕೊಂಡು ಹೋಗಿ. ಅನಾವಶ್ಯಕ ಮಾತು ಬೇಡ ಎಂದು ಎಚ್ಚರಿಕೆ ನೀಡಿದ್ದಾರೆ.
-ಉದಯವಾಣಿ