ಕರ್ನಾಟಕ

ಅಂತೂ ಬನ್ನೇರುಘಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುಂಡ ಚಿರತೆ: ಶೋಧ ಕಾರ್ಯ ಸ್ಥಗಿತ; ಪ್ರಾಣಿದಯಾ ಸಂಘಟನೆ ನಡೆ ವಿರುದ್ಧ ಸ್ಥಳೀಯರ ಆಕ್ರೋಶ

Pinterest LinkedIn Tumblr

ww

ಬೆಂಗಳೂರು: ವರ್ತೂರು ಬಳಿಯ ವಿಬ್‌ಗಯಾರ್ ಶಾಲೆಗೆ ನುಗ್ಗಿ ಇಬ್ಬರ ಮೇಲೆ ದಾಳಿ ನಡೆಸಿದ್ದಲ್ಲದೆ ಬೋನಿನಿಂದ ತಪ್ಪಿಸಿಕೊಂಡು ಆತಂಕ ಸೃಷ್ಟಿಸಿದ್ದ ಪುಂಡ ಚಿರತೆ ಅಂತೂ ಬನ್ನೇರುಘಟ್ಟ ಅರಣ್ಯದಲ್ಲಿ ಪತ್ತೆಯಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಬೋನಿನಿಂದ ಚಿರತೆ ತಪ್ಪಿಸಿಕೊಂಡ ಬಳಿಕ ಹಗಲಿರುಳು ಶೋಧ ನಡೆಸಿದ್ದ ಅರಣ್ಯ ಇಲಾಖೆ ಸಿಬ್ಬಂದಿಗೆ ಅಂತಿಮವಾಗಿ ಚಿರತೆ ಜಾಡು ಲಭಿಸಿದ್ದು, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಚಿರತೆ ಹೊರಟುಹೋಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇನ್ನು ಬೋನಿನಿಂದ ತಪ್ಪಿಸಿಕೊಂಡ ಚಿರತೆ ಮತ್ತು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಗದಲ್ಲಿ ಪತ್ತೆಯಾದ ಚಿರತೆ ಒಂದೇ ಎಂದು ಪತ್ತೆ ಮಾಡಿರುವ ಅಧಿಕಾರಿಗಳು ಅಧಿಕೃತವಾಗಿ ಚಿರತೆ ಶೋಧ ಕಾರ್ಯವನ್ನು ಸ್ಥಗಿತಗೊಳಿಸಿದ್ದಾರೆ. ಬನ್ನೇರುಘಟ್ಟ ರಾಷ್ಟ್ರೀಯ ಉಧ್ಯಾನದಲ್ಲಿ ಪತ್ತೆಯಾದ ಚಿರತೆಯ ಹೆಜ್ಜೆಗುರುತುಗಳನ್ನು ತಾಳೆ ಮಾಡಿ ಈ ನಿರ್ಧಾರಕ್ಕೆ ಬರಲಾಗಿದೆ.

“ಬೋನಿನಿಂದ ಚಿರತೆ ತಪ್ಪಿಸಿಕೊಂಡ ಬಳಿಕ ಸೋಮವಾರದಿಂದಲೇ ಚಿರತೆಗಾಗಿ ಶೋಧ ಕಾರ್ಯ ಆರಂಭಿಸಿದ್ದೆವು. ಸುತ್ತಮುತ್ತಲ ಹಳ್ಳಿಗಳಿಗೆ ಚಿರತೆ ನುಗ್ಗುವ ಅಪಾಯವಿದ್ದರಿಂದ ಹಗಲಿರುಳು ಶೋಧ ನಡೆಸಿದ್ದೆವು. ಅಂತೆಯೇ ಸುತ್ತಮುತ್ತಲ ಹಳ್ಳಿಗಳಿಗೆ ಚಿರತೆ ಪ್ರವೇಶಿಸದಂತೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೆವು. ಪ್ರಸ್ತುತ ನಮ್ಮ ತಜ್ಞರು ಚಿರತೆ ಅರಣ್ಯಕ್ಕೆ ವಾಪಸಾಗಿರುವುದನ್ನು ಧೃಡಪಡಿಸಿರುವುದರಿಂದ ಚಿರತೆ ಶೋಧ ಕಾರ್ಯವನ್ನು ಸ್ಥಗಿತಗೊಳಿಸಿದ್ದೇವೆ” ಎಂದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಬಿಸಿಎಫ್ ಸುನಿಲ್ ಪನ್ವಾರ್ ತಿಳಿಸಿದ್ದಾರೆ. ಪ್ರಸ್ತುತ ಚಿರತೆ ಬನ್ನೇರುಘಟ್ಟ ಅರಣ್ಯಕ್ಕೆ ಹೋಗಿದ್ದರೂ ಅರಣ್ಯ ಇಲಾಖೆ ಸಿಬ್ಬಂದಿಗಳು ಕಟ್ಟೆಚ್ಚರದಿಂದ ಇರುವಂತೆ ಸೂಚನೆ ನೀಡಲಾಗಿದೆ.

ಪುಂಡ ಚಿರತೆ ಬಂಧನಕ್ಕೆ ಪೇಟಾ ವಿರೋಧ; ಪೇಟಾ ನಡೆ ವಿರುದ್ಧ ಸ್ಥಳೀಯರ ಆಕ್ರೋಶ

ಇದೇ ವೇಳೆ ವಿಬ್ ಗಯಾರ್ ಶಾಲೆಯಲ್ಲಿ ದಾಂಧಲೆ ಮಾಡಿ ಸೆರೆಸಿಕ್ಕಿ ಬಳಿಕ ತಪ್ಪಿಸಿಕೊಂಡಿದ್ದ ಚಿರತೆಯನ್ನು ಮತ್ತೆ ಬಂಧಿಸಬಾರದು ಎಂದು ಪ್ರಾಣಿದಯಾ ಸಂಘಟನೆ ಪೇಟಾ ಮನವಿ ಮಾಡಿಕೊಂಡಿದೆ. ಚಿರತೆ ಹಿಡಿಯಲು ಬೆನ್ನತ್ತಿರುವ ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಪೆಟಾದ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿ ಅರಣ್ಯ ಇಲಾಖೆ ಸಚಿವ ಬಿ.ರಮಾನಾಥ್ ರೈ ಅವರಿಗೆ ಇ-ಮೇಲ್‌ನಲ್ಲಿ ದೂರು ಸಲ್ಲಿಸಿದ್ದಾರೆ.

ಕಾಡಿನಲ್ಲಿ ಸ್ವಚ್ಛಂದವಾಗಿ ಬೇಟೆಯಾಡಿಕೊಂಡಿದ್ದ ಚಿರತೆ ದಾರಿ ತಪ್ಪಿ ವಿಬ್‌ಗಯಾರ್ ಶಾಲೆಗೆ ನುಗ್ಗಿತ್ತು. ನಂತರ ಸ್ವಯಂರಕ್ಷಣೆಗಾಗಿ ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ, ಅರಣ್ಯ ಇಲಾಖೆ ಚಾಲಕ ಬೆನ್ನೀಸ್ ಮೇಲೆ ದಾಳಿ ನಡೆಸಿದೆ ಹೊರತು ಆಹಾರಕ್ಕಲ್ಲ. ಹಾಗಾಗಿ ಕಾಡಿನಲ್ಲೇ ಜೀವನ ನಡೆಸಲು ಚಿರತೆಯನ್ನು ಬಿಡಬೇಕು. ಒಂದು ವೇಳೆ ಬಂಧಿಸಿದರೆ ಮತ್ತೆ ಕಾಡಿಗೆ ಬಿಡುವಂತೆ ಅಧಿಕಾರಿ / ಸಿಬ್ಬಂದಿಗೆ ಸೂಚಿಸುವಂತೆ ಪೆಟಾ ಸಿಇಒ ಪೂರ್ವಾ ಜೋಶಿಪುರ ಸಚಿವರಿಗೆ ಮನವಿ ಮಾಡಿದ್ದಾರೆ.

“ಸೆರೆಸಿಕ್ಕಿದ್ದ ಚಿರತೆಗೆ ದವಡೆ ಹಲ್ಲು ಇರಲಿಲ್ಲ ಮತ್ತು ಕಣ್ಣಿಗೆ ಪೊರೆ ಬಂದಿದ್ದ ಕಾರಣಕ್ಕೆ ಆರೈಕೆ ಮಾಡಿ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಇಟ್ಟುಕೊಳ್ಳುವುದಾಗಿ” ಅರಣ್ಯ ಇಲಾಖೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ರವಿ ರಾಲ್ ಹೇಳಿಕೆ ಕೊಟ್ಟಿರುವುದನ್ನು ಪ್ರಶ್ನಿಸಿ, ಯಾವ ಕಾರಣಕ್ಕಾಗಿ ಬೋನಿನಲ್ಲಿ ಬಂಧಿಸುತ್ತೀರಾ? ಇದು ಕಾನೂನು ಪ್ರಕಾರ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನಾರೋಗ್ಯಕ್ಕೆ ತುತ್ತಾಗಿರುವ, ಕಾಡಿನಲ್ಲಿ ಬೇಟೆಯಾಡುವ ಶಕ್ತಿ ಕುಗ್ಗಿದಾಗ, ಸರ್ಕಸ್‌ನಲ್ಲಿ ರಕ್ಷಣೆ ಅಥವಾ ಮನುಷ್ಯರ ಮೇಲೆ ದಾಳಿ ನಡೆಸುವ ಘಟನೆಗಳು ನಡೆದಾಗ ಮಾತ್ರ ಚಿರತೆಯನ್ನು ಪುನರ್ವಸತಿ ಕೇಂದ್ರದಲ್ಲಿ ಇಡಬೇಕು. ಶಾಲೆಯಲ್ಲಿ ಸೆರೆಸಿಕ್ಕ ಚಿರತೆಯನ್ನು ಬೋನಿನಲ್ಲಿ ಇಡುವ ಅಗತ್ಯ ಇಲ್ಲವೆಂದು, ಇದೀಗ ತಪ್ಪಿಸಿಕೊಂಡಿರುವ ಚಿರತೆಯನ್ನು ಹಿಡಿಯುವ ಅಗತ್ಯ ಇಲ್ಲವೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕರ ಆಕ್ರೋಶ: ಪೆಟಾ ಪತ್ರ ಬರೆದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಚಿರತೆಯನ್ನು ಹಿಡಿಯುವುದು ಬೇಡವೆಂಬ ಮನವಿಯನ್ನು ಸಾರ್ವಜನಿಕರು ವಿರೋಧಿಸುತ್ತಿದ್ದಾರೆ. ಚಿರತೆ ಈಗಾಗಲೇ ಶಾಲೆಗೆ ನುಗ್ಗಿ ಇಬ್ಬರನ್ನು ಗಾಯಗೊಳಿಸಿದೆ. ವರ್ತೂರು ಸುತ್ತಮುತ್ತ ಭಯದ ವಾತಾವರಣ ಇದೆ. ಚಿರತೆ ಮತ್ತೆ ಇತ್ತ ಬಂದರೆ ಏನು ಮಾಡುವುದು, ಇಲ್ಲಿ ಜನರ ಮೇಲೆ ದಾಳಿ ಮಾಡಿದರೆ ಪೆಟಾ ಸಂಘಟನೆಯ ಕಾರ್ಯಕರ್ತರು ಬಂದು ಕಾಪಾಡುವರೇ ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

Write A Comment