
ನವದೆಹಲಿ; ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ(ಜೆಎನ್ ಯು) ಆವರಣದಲ್ಲಿ ನಡೆದಿದೆ ಎಂದು ಆರೋಪಿಸಲಾಗಿರುವ ದೇಶ ವಿರೋಧಿ ಚಟುವಟಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ 14 ದೆಹಲಿ ಹಿರಿಯ ಪೊಲೀಸರನ್ನು ವರ್ಗಾವಣೆ ಮಾಡಿರುವುದಾಗಿ ಬುಧವಾರ ತಿಳಿದುಬಂದಿದೆ.
ಜೆಎನ್ ಯು ವಿವಾದಕ್ಕೆ ಸಂಬಂಧಿಸಿದಂತೆ ಕಳೆದ ಹಲವು ದಿನಗಳಿಂದಲೂ ಪ್ರತಿಭಟನೆಗಳೂ ನಡೆಯುತ್ತಲೇ ಇದ್ದು, ಸೋಮವಾರ ನಡೆದ ಪ್ರತಿಭಟನೆ ತೀವ್ರ ಸ್ವರೂಪವನ್ನು ಪಡೆದುಕೊಂಡಿತ್ತು. ಪ್ರಕರಣ ಸಂಬಂಧ ಪಟಿಯಾಲ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ವಿವಿಯ ವಿದ್ಯಾರ್ಥಿಗಳು ಮತ್ತು ಪತ್ರಕರ್ತರ ಮೇಲೆ ವಕೀಲರ ವೇಷದಲ್ಲಿದ್ದವರು ಹಲ್ಲೆ ಮಾಡಿದ್ದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ತಮಗೆ ಸಂಬಂಧವೇ ಇಲ್ಲದಂತೆ ಮೌನವಾಗಿ ಹಲ್ಲೆ ನಡೆಯುತ್ತಿದ್ದರೂ ನೋಡುತ್ತಲೇ ಇದ್ದರು ಎಂದು ಆರೋಪಿಸಿ ಅರ್ಜಿಯೊಂದು ದಾಖಲಾಗಿತ್ತು.
ಇದೀಗ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸಲಿದ್ದು, ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಪೊಲೀಸರ ವರ್ಗಾವಣೆ ಮಾಡುವ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಹೇಳಲಾಗುತ್ತಿದೆ.
ಇದರಂತೆ ತಮ್ಮ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿದ್ದ ಪತ್ರಕರ್ತರು ಗೃಹ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿ ಮಾಡಿದ್ದರು. ಭೇಟಿ ವೇಳೆ ಹಲ್ಲೆ ನಡೆದ ಸಂದರ್ಭದಲ್ಲಿ ಪೊಲೀಸರು ಸ್ಥಳದಲ್ಲೇ ಇದ್ದರು. ವಕೀಲರ ವೇಷ ಧರಿಸಿದ್ದ ಕೆಲವು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡುತ್ತಿದ್ದರು. ಈ ವೇಳೆ ಪತ್ರಕರ್ತರು ಮಧ್ಯೆ ಪ್ರವೇಶಿಸಿದ್ದರು. ನಂತರ ನಮ್ಮ ಮೇಲೂ ಹಲ್ಲೆ ನಡೆಸಲಾಯಿತು. ಹಲ್ಲೆ ವೇಳೆಯಲ್ಲಿ ಪೊಲೀಸರು ಸ್ಥಳದಲ್ಲಿಯೇ ಇದ್ದರು ಯಾವುದೇ ಕ್ರಮಗಳನ್ನು ಕೈಗೊಳ್ಳಲಿಲ್ಲ. ಕೂಡಲೇ ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದ್ದರು. ಇದರಂತೆ ಸುಪ್ರೀಂಕೋರ್ಟ್ ನಲ್ಲೂ ಅರ್ಜಿಯೊಂದನ್ನು ದಾಖಲಿಸಿದ್ದರು. ಅರ್ಜಿಯಲ್ಲಿ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿತ್ತು.