ನವದೆಹಲಿ; ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಕೇಂದ್ರ ಬಜೆಟ್ ಅಧಿವೇಶನ ಸುಗಮ ಕಲಾಪಕ್ಕೆ ಸಹಕಾರ ನೀಡುವಂತೆ ಕೋರಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ಸರ್ವಪಕ್ಷ ಸಭೆಯನ್ನು ನಡೆಸಿದರು.
ಸುಗಮ ಕಲಾಪಕ್ಕಾಗಿ ಪ್ರಧಾನಿ ಮೋದಿಯವರು ತಮ್ಮ 7ಆರ್‌ಸಿಆರ್ ನಿವಾಸದಲ್ಲಿ ಎಲ್ಲ ಪಕ್ಷಗಳ ನಾಯಕರನ್ನು ಸಭೆಗೆ ಕರೆದಿದ್ದರು. ಜವಾಹರ್ ಲಾಲ್ ವಿಶ್ವವಿದ್ಯಾಲಯ ವಿವಾದ, ಅರುಣಾಚಲ ಪ್ರದೇಶದಲ್ಲಿ ಹೇರಲಾದ ರಾಷ್ಟ್ರಪತಿ ಆಳ್ವಿಕೆ ಹಾಗೂ ಪಠಾಣ್ ಕೋಟ್ ನ ವಾಯುನೆಲೆ ಮೇಲೆ ನಡೆದ ಉಗ್ರರ ದಾಳಿ ಹಿನ್ನೆಲೆಯಲ್ಲಿ ನಿನ್ನೆ ನಡೆದ ಸರ್ವಪಕ್ಷ ಸಭೆ ಅತ್ಯಂತ ಮಹತ್ವದ್ದಾಗಿತ್ತು.
ಇದರಂತೆ ಸಭೆ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷದ ನಾಯಕರು ಜವಾಹರ್ ಲಾಲ್ ವಿಶ್ವವಿದ್ಯಾಲಯದ ವಿವಾದ ಕುರಿತಂತೆ ಮಾತುಕತೆ ನಡೆಸಲು ಆರಂಭಿಸಿದರು. ಚರ್ಚೆ ಸಂಪೂರ್ಣವಾಗಿ ಜೆಎನ್ ಯು ವಿವಾದ ಸಂಬಂಧ ಚರ್ಚೆಯೇ ಎಂಬಂತಿತ್ತು. ಜೆಎನ್ ಯು ವಿವಾದದ ಚರ್ಚೆ ಸಭೆಯಲ್ಲಿ ತಾರಕ್ಕೇರಿತ್ತು. ಪ್ರತಿಪಕ್ಷದ ನಾಯಕರು ಜೆಎನ್ ಯು ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರ ವಿರುದ್ಧ ದಾಖಲಿಸಲಾಗಿರುವ ದೇಶದ್ರೋಹ ಪ್ರಕರಣದ ಕುರಿತು ಆಡಳಿತಾರೂಢ ಪಕ್ಷದ ವಿರುದ್ಧ ಹರಿಹಾಯ್ದರು.
ಈ ವೇಳೆ ಮಾತನಾಡಿದ್ದ ವೆಂಕಯ್ಯ ನಾಯ್ಡು ಅವರು, ಪ್ರತಿಪಕ್ಷಗಳ ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ನಾವು ಸಿದ್ಧರಿದ್ದು, ಸಮಸ್ಯೆಗಳನ್ನು ಬಗೆಹರಿಸುತ್ತೇವೆ. ಇದೇ ರೀತಿಯ ವಾತಾವರಣ ಸಂಸತ್ತಿನಲ್ಲಿಯೂ ಇರಲಿದೆ ಎಂದು ಭಾವಿಸುತ್ತೇನೆ ಎಂದು ಹೇಳಿದರು. ನಂತರ ಜೆಎನ್ ಯು ವಿವಾದ ಕುರಿತಂತೆ ಬಿಜೆಪಿ ನಾಯಕರು ನೀಡುತ್ತಿರುವ ಹೇಳಿಕೆ ಕುರಿತಂತೆ ಮಾತನಾಡಿದ ಸಿಪಿಐ, ಸಿಪಿಐ(ಎಂ) ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು, ಪ್ರಕರಣ ಸಂಬಂಧ ಬಿಜೆಪಿ ನಾಯಕರು ಬಾಯಿಗೆ ಬಂದಂತೆ ಹೇಳಿಕೆಯನ್ನು ನೀಡುತ್ತಿದ್ದು, ಅದನ್ನು ನಿಯಂತ್ರಿಸಬೇಕಿದೆ ಎಂದು ಹೇಳಿದರು.
ನಂತರ ಮಾಡನಾಡಿದ ಅಜಾದ್ ಅವರು, ಭಾರತದ ಸಮಗ್ರತೆ ಹಾಗೂ ಏಕತೆ ಕುರಿತಂತೆ ವಿರೋಧ ಘೋಷಣೆಗಳನ್ನು ಕೂಗುವುದು ಸರಿಯಿಲ್ಲ ಎಂಬುದನ್ನು ನಾವು ಒಪ್ಪುತ್ತೇವೆ. ಆದರೆ, ಯಾವುದೇ ಆಧಾರವಿಲ್ಲದೆಯೇ, ದಾಖಲೆಗಳಿಲ್ಲದೆಯೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವುದು ಎಷ್ಟು ಸರಿ. ಅಲ್ಲದೆ, ರಾಹುಲ್ ಗಾಂಧಿ ವಿರುದ್ಧವೂ ಮಾನನಷ್ಟವಾಗುವಂತರ ಹೇಳಿಕೆಗಳನ್ನು ನಾಯಕರು ನೀಡುತ್ತಿದ್ದಾರೆ. ಈ ಬಗ್ಗೆ ಪ್ರಧಾನಿಯವರು ಗಮನ ಹರಿಸಬೇಕಿದ್ದು, ನಾಯಕರನ್ನು ನಿಯಂತ್ರಿಸಬೇಕು ಎಂದು ಹೇಳಿದ್ದಾರೆ.
ನಂತರ ಮಾತನಾಡಿದ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು, ಪ್ರಕರಣದಲ್ಲಿ ಯಾವ ಪಕ್ಷದವರು ಭಾರತದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆಂಬುದರ ಕುರಿತಂತೆ ತನಿಖೆ ನಡೆಯುತ್ತಿದ್ದು, ಶೀಘ್ರದಲ್ಲೇ ವರದಿ ಹೊರಬೀಳಲಿದೆ ಎಂದು ಹೇಳಿದರು. ಇದೇ ವೇಳೆ ಜೆಡಿಯು ಪಕ್ಷ ನಾಯಕ ಶರದ್ ಯಾದವ್ ಹಾಗೂ ಕೆಲವು ನಾಯಕರು ಮಾತನಾಡಿ ಸಂಸತ್ತು ಸುಗಮವಾಗಿ ಹಾಗೂ ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಹಾಗೂ ಎಲ್ಲಾ ವಿಷಯಗಳು ಅಲ್ಲೇ ಚರ್ಚೆಯಾಗಬೇಕು ಎಂದು ಹೇಳಿದರು.
ಸಂಸತ್ತಿನ ಕಳೆದೆರಡು ಅವಧಿಯಲ್ಲಿ ನಡೆದ ಕಲಾಪಗಳು ವಿಪಕ್ಷಗಳ ಗದ್ದಲ – ಗಲಾಟೆ, ಪ್ರತಿಭಟನೆಗಳಲ್ಲಿ ಸಂಪೂರ್ಣವಾಗಿ ತೊಳೆದು ಹೋಗಿತ್ತು. ಹಾಗಾಗಿ ದೇಶದ ಆರ್ಥಿಕತೆಗೆ ಚುರುಕು ನೀಡುವ ಜಿಎಸ್‌ಟಿಯಂತಹ ಹಲವು ಮುಖ್ಯ ಮಸೂದೆಗಳು ಮುಂದೆ ಸಾಗದೆ ಬಾಕಿ ಉಳಿದಿದ್ದವು.