ಮುಂಬೈ: ಬಾಲಿವುಡ್ ನಟ ಅಮಿರ್‌ಖಾನ್ ಅವರನ್ನು ಮಹಾರಾಷ್ಟ್ರ ಸರ್ಕಾರ ಬರ ಮುಕ್ತ ಮಹಾರಾಷ್ಟ್ರ ಮಿಷನ್‌ನ ರಾಯಭಾರಿಯನ್ನಾಗಿ ನೇಮಕ ಮಾಡಲು ಚಿಂತನೆ ನಡೆಸಿದೆ ಎಂದು ಬಲ್ಲಮೂಲಗಳು ವರದಿ ಮಾಡಿವೆ.
ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ಹೇಳಿ ವಿವಾದಕ್ಕೊಳಗಾಗಿದ್ದ ಅಮಿರ್‌ಖಾನ್,ಇನ್‌ಕ್ರೆಡಿಬಲ್ ಇಂಡಿಯಾ ಅಭಿಯಾನದ ರಾಯಭಾರಿ ಸ್ಥಾನದಿಂದ ಕೆಳಗಿಳಿದ ಬೆನ್ನಲ್ಲೇ ಮಹಾರಾಷ್ಟ್ರದ ಬಿಜೆಪಿ ಸರ್ಕಾರ ಆತನಿಗೆ ಹೊಸತೊಂದು ಜವಾಬ್ದಾರಿಯನ್ನು ನೀಡಿದೆ.
ಮುಂಬೈನಲ್ಲಿ ಮೇಕ್ ಇನ್ ಇಂಡಿಯಾ ಸಪ್ತಾಹದ ಆಚರಣೆಯಲ್ಲೂ ಮಹಾ ಸರ್ಕಾರ ಅಮಿರ್‌ಖಾನ್‌ರನ್ನು ಅತಿಥಿಯಾಗಿ ಆಹ್ವಾನಿಸಿತ್ತು. ಅಮಿರ್‌ಖಾನ್ ಪ್ರಧಾನಿ ನರೇಂದ್ರ ಮೋದಿ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಜತೆ ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು.
ಮಹಾರಾಷ್ಟ್ರ ಸರ್ಕಾರ ಬರ ಪೀಡಿತ ಪ್ರದೇಶದ ರೈತರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಹೊಸ ಯೋಜನೆಯೊಂದನ್ನು ಹಮ್ಮಿಕೊಂಡಿದೆ. 2019ರ ವೇಳೆಗೆ ಮಹಾರಾಷ್ಟ್ರವನ್ನು ಬರ ಮುಕ್ತ ವನ್ನಾಗಿ ಮಾಡುವ ಯೋಜನೆ ಇದಾಗಿದೆ. ಈ ಯೋಜನೆಯಡಿಯಲ್ಲಿ ಸುಮಾರು 25,000 ಬರ ಪೀಡಿತ ಗ್ರಾಮಗಳನ್ನು ಬರ ಮುಕ್ತಗೊಳಿಸುವುದು ಸರ್ಕಾರದ ಉದ್ದೇಶವಾಗಿದೆ.
ಪ್ರಸ್ತುತ ಯೋಜನೆಯ ರಾಯಭಾರಿಯಾಗಲು ಮಹಾ ಸರ್ಕಾರ ಅಮಿರ್‌ಖಾನ್‌ರನ್ನು ಸಂಪರ್ಕಿಸಿದೆ ಎಂಬ ಸುದ್ದಿಯನ್ನು ಅಧಿಕೃತ ಮೂಲಗಳು ದೃಢಪಡಿಸಿವೆ. ಈ ಹಿಂದೆ ಮಹಾರಾಷ್ಟ್ರದ ರೈತರಿಗೆ ಸಹಾಯ ಮಾಡುವ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅಮಿರ್ ರು. 11 ಲಕ್ಷ ದೇಣಿಗೆ ನೀಡಿದ್ದರು.