ಕರ್ನಾಟಕ

ಹುತಾತ್ಮ ನಾಗೇಶ ಸೇನೆಯಲ್ಲಿ ‘Rambo’, ಮಹೇಶ ‘ಶಾರ್ಪ್ ಶೂಟರ್’

Pinterest LinkedIn Tumblr

Nagesh

ನವದೆಹಲಿ: ಫೆಬ್ರವರಿ 3 ರಂದು ಸಿಯಾಚಿನ್ ನೀರ್ಗಲ್ಲಿನಲ್ಲಿ ಸಂಭವಿಸಿದ ಹಿಮಕುಸಿತಕ್ಕೆ ಸಿಲುಕಿ ಹುತಾತ್ಮರಾಗಿರುವ ಹಾಸನದ ವೀರಯೋಧ ನಾಗೇಶ ಟಿ.ಟಿ. ಸೇನೆಯಲ್ಲಿ ಉತ್ತಮ ಹೆಸರು ಗಳಿಸಿ ತಮ್ಮ ಸಹೋದ್ಯೋಗಿಗಳ ಮಧ್ಯೆ ‘Rambo’ ಎಂದೇ ಪರಿಚಿತರಾಗಿದ್ದರೆ, ಮೈಸೂರು ಜಿಲ್ಲೆಯ ಮಹೇಶ ಪಿ.ಎನ್. ‘ಶಾರ್ಪ್ ಶೂಟರ್’ ಎಂದೇ ಗುರುತಿಸಿಕೊಂಡಿದ್ದರು.

22 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದ ಸುಬೇದಾರ್ ನಾಗೇಶ ಟಿ.ಟಿ. ಸದಾ ಅಪಾಯದ ಮತ್ತು ಸವಾಲಿನ ಕಾರ್ಯಾಚರಣೆಗಳಲ್ಲಿ ಭಾಗಿಯಾಗುತ್ತಿದ್ದರು. ಅವರು 12 ವರ್ಷಗಳ ಕಾಲ ಸವಾಲಿನ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದ್ದು, ಎಲ್ಲೆಡೆಯೂ ಉತ್ತಮ ನಿರ್ವಹಣೆ ತೋರಿ ಮೆಚ್ಚುಗೆ ಪಡೆದಿದ್ದರು. ನಾಗೇಶ ಅವರನ್ನು ಅವರ ಸಹೋದ್ಯೋಗಿಗಳು ಪ್ರೀತಿಯಿಂದ ‘Rambo’ ಎಂದೇ ಕರೆಯುತ್ತಿದ್ದರು. ಬಿರುದಿಗೆ ತಕ್ಕಂತೆ ನಾಗೇಶ ಅವರೂ ಸಹ ಸದಾ ತಮ್ಮ ಸಹೋದ್ಯೋಗಿಗಳ ಕಷ್ಟಕ್ಕೆ ಸ್ಪಂದಿಸುತ್ತಿದ್ದರು, ಅವರ ಶಸ್ತ್ರಾಸ್ತ್ರಗಳನ್ನು ಮತ್ತು ಹೆಚ್ಚುವರಿ ಅಗತ್ಯ ವಸ್ತುಗಳನ್ನು ಹೊತ್ತೊಯ್ಯಲು ನೆರವಾಗುತ್ತಿದ್ದರು ಎಂದು ಸೇನೆಯ ಅಧಿಕಾರಿಗಳು ನೆನಪಿಸಿಕೊಳ್ಳುತ್ತಾರೆ.

ನಾಗೇಶ ಅವರು 2001-2002ರಲ್ಲಿ ಪಾಕ್ ಗಡಿಯಲ್ಲಿ ನಡೆದ ‘ಆಪರೇಷನ್ ಪರಾಕ್ರಮ’ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಸಾವಿರಾರು ನೆಲಬಾಂಬುಗಳನ್ನು ಗಡಿ ಭಾಗದಲ್ಲಿ ಹುದುಗಿಸಿದ್ದರು ಮತ್ತು ಕಾರ್ಯಾಚರಣೆ ಮುಕ್ತಾಯವಾದ ನಂತರ ನೆಲಬಾಂಬುಗಳನ್ನು ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಿದ್ದರು. ಜತೆಗೆ ನಾಗೇಶ ಅವರು ಮೂರು ವರ್ಷಗಳ ಕಾಲ ಎನ್​ಎಸ್​ಜಿ ಕಮ್ಯಾಂಡೋ ಆಗಿ ಸೇವೆ ಸಲ್ಲಿಸಿದ್ದರು. ನಂತರ 2009 ರಿಂದ 2012ರವರೆಗೆ ಆಪರೇಷನ್ ರೈನೋ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಈಶಾನ್ಯ ರಾಜ್ಯಗಳಲ್ಲಿ ಉಗ್ರರ ವಿರುದ್ಧ ಹೋರಾಡಿದ್ದರು. ಅವರು ಸದಾ ಚಟುವಟಿಕೆಯಿಂದ ಇರುತ್ತಿದ್ದರು ಮತ್ತು ಸಹೋದ್ಯೋಗಿಗಳ ಮಧ್ಯೆ ಸಹೃದಯಿ ಎಂದು ಗುರುತಿಸಿಕೊಂಡಿದ್ದರು ಎಂದು ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.

ಸಿಯಾಚಿನ್​ನಲ್ಲಿ ಹುತಾತ್ಮರಾಗಿರುವ ಕರ್ನಾಟಕದ ಮೈಸೂರು ಜಿಲ್ಲೆಯ ಮತ್ತೊಬ್ಬ ವೀರ ಯೋಧ ಸಿಪಾಯಿ ಮಹೇಶ ಪಿ.ಎನ್. ಸಹ ಸೇನೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ್ದರು. ಮಹೇಶ ಉತ್ತಮ ಗುರಿಕಾರರಾಗಿದ್ದು, ತಮ್ಮ ಬೆಟಾಲಿಯನ್ ನಲ್ಲಿ ಶಾರ್ಪ್ ಶೂಟರ್ ಎಂದೇ ಖ್ಯಾತರಾಗಿದ್ದರು. ಮಹೇಶ ಅವರು 2005ರ ಅಕ್ಟೋಬರ್ 10 ರಂದು ಮದ್ರಾಸ್ ರೆಜಿಮೆಂಟ್​ನ 19ನೇ ಬೆಟಾಲಿಯನ್​ಗೆ ಸೇರ್ಪಡೆಯಾಗಿದ್ದರು. ಮಹೇಶ 11 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದ್ದು, 2009ರಿಂದ 2012ರವರೆಗೆ ಈಶಾನ್ಯ ರಾಜ್ಯಗಳಲ್ಲಿ ಆಪರೇಷನ್ ರೈನೋ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ನಂತರ 2012 ರಿಂದ 2014ರವೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವೆ ಸಲ್ಲಿಸಿದ ಮಹೇಶ ಉಗ್ರರ ವಿರುದ್ಧದ ಹಲವು ಯಶಸ್ವಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ನಂತರ ಮಹೇಶ ಅವರನ್ನು ಆಗಸ್ಟ್ 2015ರಲ್ಲಿ ಸಿಯಾಚಿನ್​ಗೆ ನಿಯೋಜಿಸಲಾಗಿತ್ತು.

Write A Comment