ಗುಡಗಾಂವ್: ದೆಹಲಿ ಮೂಲದ 27 ವರ್ಷದ ಈಶ್ವರ್ ಎಂಬ ಯುವಕ ತನ್ನ ಫೇಸ್ಬುಕ್ಪ್ರೇಯಸಿಯ ಜತೆಗೆ ಪ್ರೇಮಿಗಳ ದಿನ ಆಚರಿಸಲು ಗುಡಗಾಂವ್ನ ಸುಶಾಂತ್ ಲೋಕ್ ಪ್ರದೇಶಕ್ಕೆ ತೆರಳಿದ್ದು, ಈ ಸಂದರ್ಭದಲ್ಲಿ ಇಬ್ಬರು ವ್ಯಕ್ತಿಗಳು ಬಹುಮಹಡಿ ಕಟ್ಟಡದಿಂದ ತಳ್ಳಿದ ಪರಿಣಾಮವಾಗಿ ಸಾವನ್ನಪ್ಪಿದ್ದಾರೆ.
ಕಳೆದ ಏಳು ತಿಂಗಳುಗಳಿಂದ ಫೇಸ್ಬುಕ್ನಲ್ಲಿ ಇಬ್ಬರು ಪರಸ್ಪರ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದು, ಪ್ರೇಮಿಗಳ ದಿನವನ್ನು ವಿಶೇಷವಾಗಿ ಆಚರಿಸಲು ಯೋಜನೆ ರೂಪಿಸಿದ್ದರು. ಶನಿವಾರ ಫೇಸ್ಬುಕ್ ಗೆಳತಿ ಈಶ್ವರ್ನನ್ನು ಹುಡಾ ನಗರದ ಮೆಟ್ರೋ ಸ್ಟೇಶನ್ನಲ್ಲಿ ಬರಮಾಡಿಕೊಂಡಿದ್ದು, ನಂತರ ಸುಶಾಂತ್ ಲೋಕ್ ಪ್ರದೇಶದ ಬಹುಮಡಿ ಫ್ಲ್ಯಾಟ್ಗೆ ಕರೆದೊಯ್ದಿದ್ದಾಳೆ. ಈ ಸಮಯದಲ್ಲಿ ಆಗಮಿಸಿದ ಯುವತಿಯ ಭಾವಂದಿರು ರಮೇಶ್(30) ಹಾಗೂ ಅನಿಲ್ ಕುಮಾರ್(25) ಸಿಟ್ಟಿನಿಂದ ಈಶ್ವರ್ ಮೇಲೆ ದಾಳಿ ನಡೆಸಿ ಕಟ್ಟಡದಿಂದ ತಳ್ಳಿದ್ದಾರೆ ಎಂದು ಗುಡಗಾಂವ್ ಪೊಲೀಸಠಾಣೆಯ ಸಿಪಿಆರ್ಓ ಹವಾ ಸಿಂಗ್ ತಿಳಿಸಿದ್ದಾರೆ.
ಪ್ರಕರಣದ ಆರೋಪಿಗಳಾದ ರಮೇಶ್ ಹಾಗೂ ಅನಿಲ್ ಕುಮಾರ್ ಅವರನ್ನು ಬಂಧಿಸಿ, ಅವರ ವಿರುಧ್ಧ ಅಪರಾಧ ದಂಡ ಸಂಹಿತೆಯ ಸೆಕ್ಷನ್ 302 ಹಾಗೂ 201 ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಗುಡಗಾಂವ್ ಪೊಲೀಸ್ಠಾಣೆಯ ಡಿಸಿಪಿ ದೀಪಕ್ ಸಹರಾ ಹೇಳಿದ್ದಾರೆ.