
ನವದೆಹಲಿ (ಪಾಲಂ): ಸಿಯಾಚಿನ್ ಹಿಮಪ್ರವಾಹಕ್ಕೆ ಸಿಲುಕಿ ಮೃತರಾದ ಒಂಬತ್ತು ಸೈನಿಕರ ಪಾರ್ಥಿವ ಶರೀರಗಳನ್ನು ಹನ್ನೆರಡು ದಿನಗಳ ನಂತರ ಸೋಮವಾರ ದೆಹಲಿಗೆ ತರಲಾಗಿದ್ದು, ಅವರವರ ಊರುಗಳಿಗೆ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ.
ಪಾಲಂ ವಿಮಾನ ನಿಲ್ದಾಣದಲ್ಲಿ ಸೈನಿಕರ ಮೃತ ದೇಹಗಳಿಗೆ ಸೇನಾ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಸುಹಾಗ್ ಸೇರಿದಂತೆ ಹಲವು ಅಧಿಕಾರಿಗಳು, ಗಣ್ಯರು ಅಂತಿಮ ನಮನ ಸಲ್ಲಿಸಿದರು. ಮೃತ ದೇಹಗಳನ್ನು ಸೈನಿಕ ವಿಮಾನದಲ್ಲಿ ಅವರ ತವರು ರಾಜ್ಯಗಳಿಗೆ ಸಾಗಿಸಲು ಏರ್ಪಾಡು ಮಾಡಲಾಗಿದ್ದು, ಪುಣೆ, ಬೆಂಗಳೂರು, ಹೈದರಾಬಾದ್, ಮಧುರೈ, ಚೆನ್ನೈ ಮತ್ತು ತಿರುವನಂತಪುರದಲ್ಲಿ ಇರುವ ಕುಟುಂಬದ ಸದಸ್ಯರಿಗೆ ಒಪ್ಪಿಸಿ, ಸಕಲ ಗೌರವದೊಂದಿಗೆ ಅಂತ್ಯಕ್ರಿಯೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫೆಬ್ರವರಿ 3 ರಂದು ಮೈನಸ್ 45 ಡಿಗ್ರಿ ಸೆಲ್ಸಿಯಸ್ನಲ್ಲಿ ಕಿರಿಯ ಕಮೀಷನ್ಡ್ ಅಧಿಕಾರಿ (ಜೆಸಿಒ) ಹಾಗೂ ಒಂಬತ್ತು ಸೈನಿಕರನ್ನು ಹೊಂದಿದ್ದ 19 ಮದ್ರಾಸ್ ರೆಜಿಮೆಂಟ್ನ ಸೈನಿಕರು ಸಮುದ್ರ ಮಟ್ಟದಿಂದ 19,600 ಅಡಿ ಎತ್ತರದಲ್ಲಿ ಕಾರ್ಯಾಚರಣೆ ನಡೆಸುತ್ತಿರುವಾಗ ದಿಢೀರನೆ ಉಂಟಾದ ಹಿಮ ಕುಸಿತದಲ್ಲಿ ಸಿಕ್ಕಿಹಾಕಿಕೊಂಡಿದ್ದರು.
ವಿಶೇಷ ತನಿಖಾ ಸೈನಿಕ ದಳದ ಕಾರ್ಯಾಚರಣೆ ನಂತರ ಕರ್ನಾಟಕದ ಲಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ 25 ಅಡಿ ಆಳದಲ್ಲಿ 6 ದಿನ ಕಾಲ ಬದುಕಿದ್ದು ಪತ್ತೆಯಾದರೂ, ನಂತರ ವೈದ್ಯರ ಚಿಕಿತ್ಸೆ ಫಲಿಸದೆ ಮೃತರಾದರು.
ಇದೀಗ ಹಿಮರಾಶಿಯಡಿಯಿಂದ ಎತ್ತಲಾಗಿರುವ ಪಾರ್ಥಿವ ಶರೀರಗಳಲ್ಲಿ ಕರ್ನಾಟಕದವರಾದ ಹಾಸನದ ತೇಜೂರು ಗ್ರಾಮದ ಸುಬೇದಾರ್ ನಾಗೇಶ್ ಟಿಟಿ ಹಾಗೂ ಮೈಸೂರಿನ ಎಚ್ ಡಿ ಕೋಟೆಯ ಸಿಪಾಯಿ ಮಹೇಶ್ ಪಿ ಎನ್ ಸೇರಿದ್ದಾರೆ.
ತಮಿಳುನಾಡಿನ ವೆಲ್ಲೋರ್ ಜಿಲ್ಲೆಯ ಹವಾಲ್ದಾರ್ ಎಳುಮಲೈ ಎಂ, ತಮಿಳುನಾಡಿನ ಥೇಣಿ ಜಿಲ್ಲೆಯ ಲಾನಸ್ ಹವಾಲ್ದಾರ್ ಎಸ್ ಕುಮಾರ್, ಕೇರಳದ ಕೊಲ್ಲಂ ಜಿಲ್ಲೆಯ ಲಾನ್ಸ್ ನಾಯಕ್ ಸುಧೀಶ್, ತಮಿಳುನಾಡಿನ ಮಧುರೈ ಜಿಲ್ಲೆಯ ಸಿಪಾಯಿ ಗಣೆಶನ್, ತಮಿಳುನಾಡಿನ ಕ್ರಿಶ್ಣಗಿರಿ ಜಿಲ್ಲೆಯ ಸಿಪಾಯಿ ರಾಮ್ ಮೂರ್ತಿ, ಆಂಧ್ರಪ್ರದೇಶದ ಕರ್ನಲ್ ಜಿಲ್ಲೆಯ ಸಿಪಾಯಿ ಮುಸ್ತಾಕ್ ಅಹಮ್ಮದ್, ಮಹಾರಾಷ್ಟ್ರದ ಸತಾರ್ ಜಿಲ್ಲೆಯ ಸೂರ್ಯವಂಶಿ ಎಸ್ವಿ. ಇತರ ಮೃತ ಸೈನಿಕರು.
ಸಿಯಾಚಿನ್ನಲ್ಲಿ ಸುರಿಯುತ್ತಿರುವ ನಿರಂತರ ಹಿಮಮಳೆ ಹಾಗೂ ವಾತಾವರಣದ ವೈಪರಿತ್ಯದಿಂದಾಗಿ ಮೃತ ದೇಹವನ್ನು ತರಲು ಸಾಧ್ಯವಾಗಿರರಿಲ್ಲ.